ಬೆಂಗಳೂರು ತಾವರೆಕೆರೆ ಬಳಿ ನಕಲಿ ಔಷಧಿಗಳು ಪತ್ತೆಯಾದ ಪ್ರಕರಣದ ತನಿಖೆ ಇದೀಗ ಮತ್ತಷ್ಟು ತೀವ್ರಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ಅಧಿಕಾರಿಗಳು ಮಹತ್ವದ ಸಭೆ ನಡೆಸಿ, ಇದುವರೆಗೆ ಪೊಲೀಸರು ಸಂಗ್ರಹಿಸಿರುವ ಮಾಹಿತಿಗಳನ್ನು ಪರಿಶೀಲಿಸಿದ್ದಾರೆ. ನಕಲಿ ಔಷಧಿಗಳ ತಯಾರಿಕೆ, ಲೇಬಲಿಂಗ್, ಮಾರಾಟ ಹಾಗೂ ಪೂರೈಕೆ ಜಾಲದ ಕುರಿತು ಸಮಗ್ರ ತನಿಖೆ ನಡೆಸಲು SIT ಮುಂದಾಗಿದೆ.
ನಿನ್ನೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ SIT ಅಧಿಕಾರಿಗಳ ಸಭೆ ನಡೆದಿದ್ದು, ತಾವರೆಕೆರೆ ಪೊಲೀಸರು ಈವರೆಗೆ ಕಲೆಹಾಕಿರುವ ಮಾಹಿತಿಗಳ ಕುರಿತು ಚರ್ಚೆ ನಡೆಸಲಾಗಿದೆ. ಪ್ರಕರಣದಲ್ಲಿ ಔಷಧಿಗಳ ತಯಾರಿಕೆ ಮತ್ತು ವಿತರಣೆ ಸಂಬಂಧ ಹಲವು ಮಹತ್ವದ ಅಂಶಗಳು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ, ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಲು SIT ನಿರ್ಧರಿಸಿದೆ.
ಸರ್ಕಾರದ ಅನುಮತಿ ಕೋರಲು ಸಿದ್ಧತೆ
Drugs and Cosmetics ಕಾಯ್ದೆಗೆ ಸಂಬಂಧಿಸಿದಂತೆ ಪೊಲೀಸ್ SITಗೆ ನೇರವಾಗಿ ಸಂಪೂರ್ಣ ತನಿಖೆ ನಡೆಸಲು ಕೆಲವು ಕಾನೂನು ಮಿತಿಗಳಿವೆ. ದೂರು ಆಧರಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಅವಕಾಶವಿದ್ದರೂ, ಔಷಧಿಗಳ ನೈಜತೆ ಪರಿಶೀಲನೆ, ತಯಾರಿಕಾ ಪ್ರಕ್ರಿಯೆ, ದಾಳಿ ಮತ್ತು ವಿಚಾರಣೆ ಸೇರಿದಂತೆ ಸಮಗ್ರ ತನಿಖೆ ನಡೆಸಲು ಸಂಬಂಧಪಟ್ಟ ಇಲಾಖೆಗಳ ಅನುಮತಿ ಅಗತ್ಯವಾಗಬಹುದು.
ಈ ಹಿನ್ನೆಲೆಯಲ್ಲಿ ಸಂಪೂರ್ಣ ತನಿಖೆಗೆ ಅವಕಾಶ ನೀಡುವಂತೆ ಸರ್ಕಾರ ಮತ್ತು ಗೃಹ ಇಲಾಖೆಗೆ ಪತ್ರ ಬರೆಯಲು SIT ಸಿದ್ಧತೆ ನಡೆಸಿದೆ. ಔಷಧ ಸಂಬಂಧಿತ ಅಪರಾಧಗಳಿಗೆ ಕಠಿಣ ಶಿಕ್ಷೆಯ ಅವಕಾಶ ಇರುವುದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು, ತನಿಖೆಯ ಪ್ರತಿಯೊಂದು ಹಂತದಲ್ಲೂ ಕಾನೂನುಬದ್ಧ ಕ್ರಮಗಳನ್ನು ಅನುಸರಿಸಲು ಮುಂದಾಗಿದ್ದಾರೆ.
ನಕಲಿ ಲೇಬಲಿಂಗ್, ಔಷಧ ಮಿಕ್ಸಿಂಗ್ ಶಂಕೆ
ಪ್ರಾಥಮಿಕ ತನಿಖೆಯಲ್ಲಿ ಕೆಲವು ಔಷಧಿಗಳ ತಯಾರಿ ಹಾಗೂ ಲೇಬಲಿಂಗ್ ಕಾರ್ಯ ನಡೆಯುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಬೇರೆಡೆ ತಯಾರಾಗಿದ್ದ ಕೆಲವು ಔಷಧಿಗಳಿಗೆ ಇಲ್ಲಿ ಲೇಬಲ್ ಹಾಕಲಾಗುತ್ತಿತ್ತು ಎನ್ನಲಾಗಿದೆ. ಅಸಲಿ ಔಷಧಿಗಳ ಮೇಲಿರುವ ಲೇಬಲ್‌ಗಳನ್ನು ನಕಲಿ ಔಷಧಿಗಳಿಗೆ ಬಳಸಿರುವ ಸಾಧ್ಯತೆಯ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಕೆಲವು ಔಷಧಿಗಳನ್ನು ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ತೆರೆದು ಬಳಸಬೇಕಾಗುತ್ತದೆ. ಆದರೆ ಅಂತಹ ಔಷಧಿಗಳನ್ನು ತೆರೆಯಲಾಗುತ್ತಿತ್ತು ಹಾಗೂ ಬೇರೆ ಬಾಟಲ್‌ಗಳಿಗೆ ವರ್ಗಾಯಿಸಲಾಗುತ್ತಿತ್ತು ಎಂಬ ಮಾಹಿತಿ SIT ಗಮನಕ್ಕೆ ಬಂದಿದೆ. ಸಾವಿರಾರು ರೂಪಾಯಿ ಬೆಲೆಬಾಳುವ ಔಷಧಿಗಳ ಬದಲಿಗೆ ಕಡಿಮೆ ಬೆಲೆಯ ನಕಲಿ ಔಷಧಿಗಳನ್ನು ತುಂಬುವ ಸಾಧ್ಯತೆಯೂ ತನಿಖೆಯಲ್ಲಿ ಕಂಡುಬಂದಿದೆ. ಔಷಧಿಗಳ ಮಿಕ್ಸಿಂಗ್ ಸೇರಿದಂತೆ ಹಲವು ಅಕ್ರಮಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಆಸ್ಪತ್ರೆ, ಮೆಡಿಕಲ್‌ಗಳ ಮೇಲೂ ಕಣ್ಣು
ಕೆಲವು ಔಷಧಿಗಳು ಸಾಮಾನ್ಯ ಮೆಡಿಕಲ್‌ಗಳಲ್ಲಿ ಲಭ್ಯವಿರುವುದಿಲ್ಲ. ಅವುಗಳನ್ನು ನೇರವಾಗಿ ಆಸ್ಪತ್ರೆಗಳ ಮೂಲಕವೇ ನೀಡಲಾಗುತ್ತದೆ. ಇಂತಹ ಕೆಲವು ಔಷಧಿಗಳೂ ನಕಲಿಯಾಗಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಅವುಗಳ ಪೂರೈಕೆ ಎಲ್ಲಿಂದ ನಡೆಯುತ್ತಿತ್ತು ಎಂಬುದನ್ನು ಪತ್ತೆಹಚ್ಚಲು SIT ಮುಂದಾಗಿದೆ.
ನಕಲಿ ಔಷಧಿ ತಯಾರಿಕಾ ಜಾಲದ ಮೂಲ, ಔಷಧಿಗಳು ಎಲ್ಲೆಲ್ಲಿ ಪೂರೈಕೆಯಾಗುತ್ತಿದ್ದವು ಹಾಗೂ ಯಾವ ಆಸ್ಪತ್ರೆಗಳು ಅಥವಾ ಮೆಡಿಕಲ್‌ಗಳಿಗೆ ತಲುಪುತ್ತಿದ್ದವು ಎಂಬುದರ ಬಗ್ಗೆ ತನಿಖೆ ನಡೆಯಲಿದೆ. IPS ಅಧಿಕಾರಿಗಳಾದ ವಂಶಿಕೃಷ್ಣ, ಶಿವಪ್ರಕಾಶ್ ಡಿ. ಮತ್ತು ಲೋಕೇಶ್ ಜಗಲಾಸರ್ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ. ಪ್ರಕರಣದ ಸಂಪೂರ್ಣ ಜಾಲವನ್ನು ಬಯಲಿಗೆಳೆಯಲು SIT ಮುಂದಾಗಿದ್ದು, ಸರ್ಕಾರದ ಅನುಮತಿ ದೊರೆತ ಬಳಿಕ ತನಿಖೆ ಮತ್ತಷ್ಟು ವೇಗ ಪಡೆಯುವ ಸಾಧ್ಯತೆಯಿದೆ.





