ಬೆಂಗಳೂರು: ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ದೇಶಾದ್ಯಂತ ಜಾವಾ, ಯೆಜ್ಡಿ ಹಾಗೂ ಬಿಎಸ್‌ಎ ಬೈಕ್ ಸವಾರರು ಒಗ್ಗೂಡಿ ವಿಶೇಷ ಬೈಕ್ ರ‍್ಯಾಲಿಯನ್ನು ಹಮ್ಮಿಕೊಂಡಿದ್ದರು. ‘ನೊಮ್ಯಾಡ್ಸ್’ ಎಂಬ ಬ್ಯಾನರ್ ಅಡಿಯಲ್ಲಿ ನಡೆದ ಈ ಬೃಹತ್ ರ‍್ಯಾಲಿಯು, ಬೈಕಿಂಗ್ ಜಗತ್ತಿನ ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಮನೋಭಾವವನ್ನು ಸಂಭ್ರಮಿಸಿತು.
ದೇಶದ 150ಕ್ಕೂ ಹೆಚ್ಚು ಡೀಲರ್‌ಶಿಪ್‌ಗಳ ನೇತೃತ್ವದಲ್ಲಿ ನಡೆದ ಈ ಸ್ವಾತಂತ್ರ್ಯ ದಿನದ ಬೈಕ್ ರೈಡ್‌ನಲ್ಲಿ ಬರೋಬ್ಬರಿ 2,000ಕ್ಕೂ ಹೆಚ್ಚು ರೈಡರ್‌ಗಳು ಭಾಗವಹಿಸಿದ್ದರು. ವಿಭಿನ್ನ ಹಿನ್ನೆಲೆ, ವಯಸ್ಸು ಮತ್ತು ರೈಡಿಂಗ್ ಶೈಲಿಯನ್ನು ಹೊಂದಿದ್ದ ಸಾವಿರಾರು ಬೈಕರ್‌ಗಳು ಒಗ್ಗೂಡಿ, ಬೈಕಿಂಗ್ ಮೇಲಿನ ತಮ್ಮ ಪ್ರೀತಿ ಹಾಗೂ ದೇಶಭಕ್ತಿಯನ್ನು ಅನಾವರಣಗೊಳಿಸಿದರು.
ಏನಿದು ನೊಮ್ಯಾಡ್ಸ್?
ನೊಮ್ಯಾಡ್ಸ್ ಎಂಬುದು ಕೇವಲ ಒಂದು ಬ್ಯಾನರ್ ಅಲ್ಲ, ಇದು ಜಾವಾ, ಯೆಜ್ಡಿ ಮತ್ತು ಬಿಎಸ್‌ಎ ರೈಡರ್‌ಗಳ ಒಂದು ಸಮುದಾಯವಾಗಿದೆ. ಪ್ರಾಂತ್ಯ, ವಯಸ್ಸು ಹಾಗೂ ಬ್ರ್ಯಾಂಡ್‌ಗಳನ್ನು ಮೀರಿ ಬೈಕ್ ಸವಾರರನ್ನು ಒಗ್ಗೂಡಿಸುವ ಒಂದು ಗುರುತಾಗಿ ಇದು ಕೆಲಸ ಮಾಡುತ್ತದೆ. ಒಟ್ಟಾಗಿ ಸೇರಿ ಬೈಕ್ ಓಡಿಸುವ ಖುಷಿಯನ್ನು ಸವಿಯಲು ಇದು ಬೈಕರ್‌ಗಳಿಗೆ ವೇದಿಕೆಯನ್ನು ಕಲ್ಪಿಸಿದೆ.
ಸೈನಿಕರಿಗೆ ಗೌರವ ಸಲ್ಲಿಸಿದ್ದ ಕ್ಲಾಸಿಕ್ ಲೆಜೆಂಡ್ಸ್
ಇತ್ತೀಚೆಗಷ್ಟೇ, ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ಜಾವಾ, ಯೆಜ್ಡಿಯ ಮಾತೃಸಂಸ್ಥೆ ಕ್ಲಾಸಿಕ್ ಲೆಜೆಂಡ್ಸ್ ಭಾರತೀಯ ಸಶಸ್ತ್ರ ಪಡೆಗಳ ಜೊತೆಗೂಡಿ ‘ಶೌರ್ಯ ವಿಜಯ ಯಾತ್ರೆ’ಯನ್ನು ಆಯೋಜಿಸಿತ್ತು. ಆ ಮೂಲಕ ಭಾರತೀಯ ಸೈನಿಕರ ಶೌರ್ಯ, ಸೇವೆ ಹಾಗೂ ತ್ಯಾಗಕ್ಕೆ ಗೌರವ ಸಲ್ಲಿಸಿತ್ತು. ಇದೀಗ ಸ್ವಾತಂತ್ರ್ಯ ದಿನಾಚರಣೆಯ ಬೈಕ್ ರೈಡ್ ಕೂಡ ಅದೇ ರಾಷ್ಟ್ರೀಯ ಹೆಮ್ಮೆಯ ಪ್ರತಿರೂಪವಾಗಿ ಮೂಡಿಬಂದಿದೆ.
ಈ ಸಂಭ್ರಮದ ಬಗ್ಗೆ ಮಾತನಾಡಿದ ಕ್ಲಾಸಿಕ್ ಲೆಜೆಂಡ್ಸ್‌ನ ಸಹ – ಸಂಸ್ಥಾಪಕ ಅನುಪಮ್ ಥರೇಜಾ, “ನಮಗಿಷ್ಟವಾದ ದಾರಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಮತ್ತು ಆ ಪಯಣವನ್ನು ಇತರರೊಂದಿಗೆ ಹಂಚಿಕೊಳ್ಳುವ ಖುಷಿಯೇ ಮೋಟಾರ್‌ಸೈಕ್ಲಿಂಗ್‌ನ ಜೀವಾಳ. ಈ ಸ್ವಾತಂತ್ರ್ಯವನ್ನು ನಮಗೆ ತಂದುಕೊಟ್ಟ ಮತ್ತು ಇದನ್ನು ಇಂದಿಗೂ ರಕ್ಷಿಸುತ್ತಿರುವ ತ್ಯಾಗ ಬಲಿದಾನಗಳನ್ನು ಸ್ವಾತಂತ್ರ್ಯ ದಿನಾಚರಣೆಯು ನಮಗೆ ನೆನಪಿಸುತ್ತದೆ. ಕಳೆದ ತಿಂಗಳಷ್ಟೇ, ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ನಮ್ಮ ಸೈನಿಕರ ಶೌರ್ಯ, ಸೇವೆ ಹಾಗೂ ತ್ಯಾಗಕ್ಕೆ ಗೌರವ ಸಲ್ಲಿಸುವ ಅವಕಾಶ ನಮಗೆ ಸಿಕ್ಕಿತ್ತು. ಇಂದು ನೊಮ್ಯಾಡ್ಸ್ ಮೂಲಕ, ವಿಭಿನ್ನ ಪ್ರಾಂತ್ಯ ಮತ್ತು ತಲೆಮಾರಿನ ರೈಡರ್‌ಗಳು ಒಂದೆಡೆ ಸೇರಿ, ನಮ್ಮ ಸೈನಿಕರ ತ್ಯಾಗ ಮತ್ತು ದೇಶದ ಸ್ವಾತಂತ್ರ್ಯ ದಿನಾಚರಣೆಯನ್ನು ಒಟ್ಟಾಗಿ ಸಂಭ್ರಮಿಸಿದ್ದಾರೆ,” ಎಂದರು.
ಮುಂದಿನ ದಿನಗಳಲ್ಲಿ ನೊಮ್ಯಾಡ್ಸ್ ಕಮ್ಯುನಿಟಿ ಇನ್ನಷ್ಟು ಬೆಳೆಯಲಿದ್ದು, ಜಾವಾ, ಯೆಜ್ಡಿ ಮತ್ತು ಬಿಎಸ್‌ಎ ರೈಡರ್‌ಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ.





