ಬೆಂಗಳೂರು ಆ. 16: ರಾಷ್ಟ್ರೀಯ ಚಾಂಪಿಯನ್ಶಿಪ್ಗಳಲ್ಲಿ ಸಾಧನೆ ಮಾಡಿದ ಕರ್ನಾಟಕದ ಕಿರಿಯ ಹಾಗೂ ಯುವಕರ ಬಾಸ್ಕೆಟ್ಬಾಲ್ ತಂಡಗಳ ಅಭಿನಂದನಾ ಸಮಾರಂಭದಲ್ಲಿ ಡಿಸಿಎಂ ಡಾ. ಜಿ. ಪರಮೇಶ್ವರ ಮಾತನಾಡಿ, ರಾಜ್ಯವನ್ನು ದೇಶದ ಪ್ರಮುಖ ಕ್ರೀಡಾ ರಾಜ್ಯವನ್ನಾಗಿ ರೂಪಿಸಲು ಸರ್ಕಾರ ಸಮಗ್ರ ಯೋಜನೆಯೊಂದಿಗೆ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಕ್ರೀಡಾಪಟುಗಳಿಗೆ ಉದ್ಯೋಗ, ಆರ್ಥಿಕ ಪ್ರೋತ್ಸಾಹ, ಆಧುನಿಕ ಮೂಲಸೌಕರ್ಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ತರಬೇತಿ ಒದಗಿಸುವ ಮೂಲಕ ಕರ್ನಾಟಕವನ್ನು ಕ್ರೀಡಾ ಕೇಂದ್ರಸ್ಥಾನವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದರು.
ಕ್ರೀಡಾಪಟುಗಳಿಗೆ ಉದ್ಯೋಗದಲ್ಲಿ 3% ಮೀಸಲಾತಿ
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕ್ರೀಡಾಪಟುಗಳಿಗೆ ಆರಂಭದಲ್ಲಿ 2% ಮೀಸಲಾತಿ ನೀಡಲಾಗಿತ್ತು. ಬಳಿಕ ಅದನ್ನು 3%ಕ್ಕೆ ಹೆಚ್ಚಿಸಲಾಗಿದೆ. ಈಗಾಗಲೇ ಹಲವು ಕ್ರೀಡಾಪಟುಗಳು ಪಿಎಸ್ಐ ಮತ್ತು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕವಾಗಿದ್ದಾರೆ. ಪದಕ ವಿಜೇತರಿಗೆ ನೇರ ನೇಮಕಾತಿ ವ್ಯವಸ್ಥೆಯನ್ನೂ ಸರ್ಕಾರ ಜಾರಿಗೆ ತಂದಿದೆ.
ಇದರ ಜೊತೆಗೆ ಸರ್ಕಾರ ಭರ್ತಿ ಮಾಡಲು ಮುಂದಾಗಿರುವ 72,000 ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲೂ ಕ್ರೀಡಾಪಟುಗಳಿಗೆ ಮೀಸಲಾತಿ ಸೌಲಭ್ಯ ದೊರೆಯಲಿದೆ ಎಂದು ಡಿಸಿಎಂ ಹೇಳಿದರು.
ಪದಕ ವಿಜೇತರಿಗೆ 15 ರೂ. ಲಕ್ಷ ಪ್ರೋತ್ಸಾಹಧನ
ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಕ್ರೀಡಾಪಟುವಿಗೂ 5 ರೂ. ಲಕ್ಷ ಪ್ರೋತ್ಸಾಹಧನ ನೀಡಲಾಗಿದೆ. ಪದಕ ವಿಜೇತರಿಗೆ 15 5 ಲಕ್ಷ ರೂ. ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಘೋಷಿಸಿದರು.
ಪ್ಯಾರಾ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದ ಮೈಸೂರಿನ ಶಿಲ್ಪಾ ಅವರ ಸಾಧನೆಯನ್ನು ಉಲ್ಲೇಖಿಸಿದ ಪರಮೇಶ್ವರ, ಇಂತಹ ಸಾಧನೆಗಳು ರಾಜ್ಯದ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿವೆ ಎಂದರು.
ದೇವನಹಳ್ಳಿಯಲ್ಲಿ 60 ಎಕರೆ ಸ್ಪೋರ್ಟ್ಸ್ ಸಿಟಿ
ರಾಜ್ಯದಲ್ಲಿ ಕ್ರೀಡೆಗೆ ಉತ್ತೇಜನ ನೀಡಲು ದೇವನಹಳ್ಳಿ ಸಮೀಪ 60 ಎಕರೆ ಪ್ರದೇಶದಲ್ಲಿ ಸ್ಪೋರ್ಟ್ಸ್ ಸಿಟಿ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ವಿವಿಧ ಕ್ರೀಡೆಗಳಿಗೆ ಒಂದೇ ಸಮಗ್ರ ಕ್ರೀಡಾ ಸಂಕೀರ್ಣ ನಿರ್ಮಿಸಲು ನೀಲನಕ್ಷೆ ಸಿದ್ಧವಾಗಿದೆ.
ಅದೇ ವೇಳೆ, ಕಂಠೀರವ ಕ್ರೀಡಾಂಗಣವನ್ನು ಸುಮಾರು 5,000 ಕೋಟಿ 5 ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ ಯೋಜನೆಯೂ ಸರ್ಕಾರದ ಮುಂದಿದೆ. ಇದರಿಂದ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳನ್ನು ಬೆಂಗಳೂರಿನಲ್ಲಿ ಆಯೋಜಿಸಲು ಅವಕಾಶ ಸಿಗಲಿದೆ ಎಂದು ಹೇಳಿದರು.
ಬ್ಯಾಸ್ಕೆಟ್ಬಾಲ್ ಬೆಳವಣಿಗೆಗೆ ಗೋವಿಂದರಾಜ್ ಕೊಡುಗೆ
ಕರ್ನಾಟಕದಲ್ಲಿ ಬ್ಯಾಸ್ಕೆಟ್ಬಾಲ್ ಕ್ರೀಡೆ ಬೆಳೆಯಲು ಹಲವು ವರ್ಷಗಳಿಂದ ಶ್ರಮಿಸಿದ ಗೋವಿಂದರಾಜ್ ಅವರ ಕೊಡುಗೆಯನ್ನು ಪರಮೇಶ್ವರ ಪ್ರಶಂಸಿಸಿದರು. ಸರ್ಕಾರ ಈಗಾಗಲೇ ಬ್ಯಾಸ್ಕೆಟ್ಬಾಲ್ ಅಭಿವೃದ್ಧಿಗೆ 5 ಎಕರೆ ಜಾಗ ನೀಡಿದ್ದು, ಒಳಾಂಗಣ ಕ್ರೀಡಾಂಗಣ ಸೇರಿದಂತೆ ಅಗತ್ಯ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಂಡಿದೆ ಎಂದು ಹೇಳಿದರು.

