ಮುಂಬೈ, ಆ.16: ಮುಂಬೈನ ಕೊಲಾಬಾದ ನೇವಿ ನಗರದಲ್ಲಿರುವ ಭಾರತೀಯ ನೌಕಾಪಡೆಯ ವಸತಿ ಸಮುಚ್ಚಯದಲ್ಲಿ 30 ವರ್ಷದ ನೌಕಾಪಡೆ ಸಿಬ್ಬಂದಿ, ಅವರ ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳು ಶವವಾಗಿ ಪತ್ತೆಯಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಪ್ರಾಥಮಿಕ ತನಿಖೆಯಲ್ಲಿ ಇದು ಕೊಲೆ ಅಥವಾ ಆತ್ಮಹತ್ಯೆ ಪ್ರಕರಣವಾಗಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಮೃತರನ್ನು ಪೂರಣ್ಮಲ್ ಶಂಭುಲಾಲ್ ಮೆಹ್ರಾ (30), ಅವರ ಪತ್ನಿ ಓಮಾ ಮೆಹ್ರಾ (28), ಮೂರು ವರ್ಷದ ಪುತ್ರ ಯಶ್ ಹಾಗೂ ಎರಡು ತಿಂಗಳ ಮಗು ಎಂದು ಗುರುತಿಸಲಾಗಿದೆ. ನಾಲ್ವರೂ ಕೊಲಾಬಾದ ಅತ್ಯಂತ ಭದ್ರತಾ ವ್ಯವಸ್ಥೆ ಹೊಂದಿರುವ ನೇವಿ ನಗರ ಕ್ಯಾಂಟೋನ್ಮೆಂಟ್ ಪ್ರದೇಶದ ನಿವಾಸದಲ್ಲಿ ಶನಿವಾರ ಶವವಾಗಿ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಪೂರಣ್ಮಲ್ ಮೆಹ್ರಾ ಅವರು ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳ ಸಾವಿಗೆ ವಿಷಪ್ರಾಶನ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆದರೆ ಸಾವಿನ ನಿಖರ ಕಾರಣವನ್ನು ಮರಣೋತ್ತರ ಪರೀಕ್ಷೆಯ ವರದಿ ದೃಢಪಡಿಸಬೇಕಿದೆ.
ಈ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕೊಲಾಬಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಾಲ್ವರ ಮೃತದೇಹಗಳನ್ನು ಮುಂಬೈನ ಜೆಜೆ ಆಸ್ಪತ್ರೆಗೆ ರವಾನಿಸಲಾಗಿದ್ದು, ವೈದ್ಯಕೀಯ ಪರೀಕ್ಷೆ ಪ್ರಗತಿಯಲ್ಲಿದೆ. ಕುಟುಂಬದ ಹಿನ್ನೆಲೆ, ಘಟನೆಗೂ ಮುನ್ನ ನಡೆದ ಬೆಳವಣಿಗೆಗಳು ಹಾಗೂ ಸಾವಿಗೆ ಕಾರಣವಾಗಿರಬಹುದಾದ ಎಲ್ಲ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.
ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಮನೀಷ್ ಕಲ್ವಾನಿಯಾ ಅವರು, “ಪ್ರಾಥಮಿಕವಾಗಿ ನೌಕಾಪಡೆ ಸಿಬ್ಬಂದಿ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಪತ್ನಿ ಮತ್ತು ಮಕ್ಕಳ ಸಾವಿಗೆ ವಿಷಪ್ರಾಶನ ಕಾರಣವಾಗಿರುವ ಸಾಧ್ಯತೆ ಇದೆ. ಅಂತಿಮ ನಿರ್ಧಾರ ಮರಣೋತ್ತರ ಪರೀಕ್ಷೆಯ ಬಳಿಕವೇ ಸಾಧ್ಯ” ಎಂದು ತಿಳಿಸಿದ್ದಾರೆ.
ಇದೇ ವೇಳೆ ಭಾರತೀಯ ನೌಕಾಪಡೆಯೂ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿ, ನೇವಿ ನಗರದಲ್ಲಿರುವ ವಸತಿ ಪ್ರದೇಶದಲ್ಲಿ ಸಂಭವಿಸಿರುವ ಈ ದುಃಖದ ಘಟನೆಯ ಕುರಿತು ಸಂತಾಪ ವ್ಯಕ್ತಪಡಿಸಿದೆ. ಪ್ರಕರಣದ ತನಿಖೆಗೆ ಮುಂಬೈ ಪೊಲೀಸರಿಗೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದೆ ಎಂದು ನೌಕಾಪಡೆ ತಿಳಿಸಿದೆ.





