ನವದೆಹಲಿ: ಸಾಮಾಜಿಕ ಜಾಲತಾಣ ದೈತ್ಯ ಮೆಟಾ (Meta) ಹಾಗೂ ಕೇಂದ್ರ ಸರ್ಕಾರದ ನಡುವಿನ ವಿವಾದ ಮತ್ತಷ್ಟು ತೀವ್ರಗೊಂಡಿರುವ ಬೆನ್ನಲ್ಲೇ ಕಂಪನಿಯ ಸಿಇಒ ಮಾರ್ಕ್ ಜುಕರ್‌ಬರ್ಗ್ (Mark Zuckerberg) ಕ್ಷಮೆಯಾಚಿಸಿದ್ದಾರೆ. ಮಕ್ಕಳ ಲೈಂಗಿಕ ಶೋಷಣೆಗೆ ಸಂಬಂಧಿಸಿದ (CSAM) ವಿಷಯಗಳು, ಡೀಪ್‌ಫೇಕ್ (Deepfake) ಕಂಟೆಂಟ್‌ಗಳ ನಿಯಂತ್ರಣದಲ್ಲಿನ ಲೋಪಗಳು ಹಾಗೂ ಪ್ಲಾಟ್‌ಫಾರ್ಮ್ ನಿರ್ವಹಣೆಯಲ್ಲಿ ಕಂಡುಬಂದ ಹಲವು ಕೊರತೆಗಳ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಅವರು, ಸಂಸ್ಥೆಯ ಪರವಾಗಿ ಕ್ಷಮೆ ಕೋರಿದ್ದಾರೆ.
ಈ ಬೆಳವಣಿಗೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಫೇಸ್‌ಬುಕ್ ವಿಡಿಯೋ ಕೆಲ ಗಂಟೆಗಳ ಕಾಲ ವೇದಿಕೆಯಿಂದ ಕಾಣೆಯಾಗಿದ್ದ ಘಟನೆ ಇದಕ್ಕೆ ಪ್ರಮುಖ ಕಾರಣವಾಗಿದೆ. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕುರಿತು ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ನೀಡಿದ್ದ ಸಂದೇಶವನ್ನು ಒಳಗೊಂಡ ವಿಡಿಯೋ ಸುಮಾರು ಐದು ಗಂಟೆಗಳ ಕಾಲ ಫೇಸ್‌ಬುಕ್‌ನಲ್ಲಿ ಲಭ್ಯವಿರಲಿಲ್ಲ. ಈ ಘಟನೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು.
ವಿಡಿಯೋ ತೆಗೆದುಹಾಕಿರುವುದು ತಾಂತ್ರಿಕ ದೋಷದಿಂದ ಸಂಭವಿಸಿದೆ ಎಂದು ಮೆಟಾ ಮೊದಲಿಗೆ ಸ್ಪಷ್ಟನೆ ನೀಡಿತ್ತು. ಬಳಿಕ ಅದನ್ನು ಮರುಸ್ಥಾಪಿಸಿ ವಿಷಾದ ವ್ಯಕ್ತಪಡಿಸಿತು. ಆದರೆ ಈ ಸಮಜಾಯಿಷಿಯನ್ನು ಕೇಂದ್ರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಹಾಗೂ ಸಂಸದೀಯ ತಂತ್ರಜ್ಞಾನ ಸಮಿತಿಯ ಸದಸ್ಯರು ಸಮರ್ಪಕ ಕಾರಣವೆಂದು ಪರಿಗಣಿಸಲಿಲ್ಲ.
ಸಂಸದೀಯ ತಂತ್ರಜ್ಞಾನ ಸಮಿತಿಯ ಅಧ್ಯಕ್ಷ ನಿಶಿಕಾಂತ್ ದುಬೆ ಮೆಟಾಗೆ ಕಠಿಣ ಎಚ್ಚರಿಕೆ ನೀಡಿದ್ದರು. ಮೂರು ದಿನಗಳೊಳಗೆ ಮಾರ್ಕ್ ಜುಕರ್‌ಬರ್ಗ್ ವೈಯಕ್ತಿಕವಾಗಿ ಬೇಷರತ್ ಕ್ಷಮೆಯಾಚಿಸದಿದ್ದರೆ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79ರ ಅಡಿಯಲ್ಲಿ ಮೆಟಾ ಪಡೆಯುತ್ತಿರುವ ‘ಸೇಫ್ ಹಾರ್ಬರ್’ (Safe Harbour) ರಕ್ಷಣೆಯನ್ನು ಹಿಂಪಡೆಯುವಂತೆ ಶಿಫಾರಸು ಮಾಡುವುದಾಗಿ ಅವರು ಸ್ಪಷ್ಟಪಡಿಸಿದ್ದರು.
ಈ ಎಚ್ಚರಿಕೆಯ ನಂತರ ಜುಕರ್‌ಬರ್ಗ್ ವಿಷಾದ ವ್ಯಕ್ತಪಡಿಸಿದ್ದಾರೆ. ನಿರ್ದಿಷ್ಟ ರೀತಿಯ ವಿಷಯಗಳನ್ನು ಹೆಚ್ಚಿನ ಹಣ ಪಾವತಿಸುವ ಮೂಲಕ ಪ್ರಚಾರಕ್ಕೆ ಉತ್ತೇಜನ ನೀಡುವ ವ್ಯವಸ್ಥೆಯಲ್ಲಿ ಲೋಪಗಳಿರುವುದನ್ನು ಅವರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ ಪ್ಲಾಟ್‌ಫಾರ್ಮ್ ನಲ್ಲಿನ ಕೆಲವು ನಿರ್ವಹಣಾ ವೈಫಲ್ಯಗಳ ಬಗ್ಗೆಯೂ ಮೆಟಾ ತನ್ನ ಜವಾಬ್ದಾರಿಯನ್ನು ಒಪ್ಪಿಕೊಂಡಿದೆ.
ಇದೇ ವೇಳೆ ಸಂಸದೀಯ ಸಮಿತಿಯು ಮೆಟಾ ಪ್ರತಿನಿಧಿಗಳನ್ನು ತೀವ್ರವಾಗಿ ಪ್ರಶ್ನಿಸಿತು. ಪ್ರಧಾನಿ ಅವರ ಅಧಿಕೃತ ವಿಡಿಯೋವನ್ನು ತೆಗೆದುಹಾಕಲು ಯಾರು ಅನುಮತಿ ನೀಡಿದರು? ಆಕ್ಷೇಪಾರ್ಹ ಹಾಗೂ ಕಾನೂನುಬಾಹಿರ ವಿಷಯಗಳು ವೇದಿಕೆಯಲ್ಲಿ ಲಭ್ಯವಿರುವಾಗ, ಪ್ರಧಾನಿ ಅವರ ವಿಡಿಯೋವನ್ನೇ ಏಕೆ ತೆಗೆದುಹಾಕಲಾಯಿತು? ದೇಶದ ಪ್ರಧಾನಿಯವರ ಪೋಸ್ಟ್ ಗೂ ಸುರಕ್ಷತೆ ಇಲ್ಲದಿದ್ದರೆ ಸಾಮಾನ್ಯ ಬಳಕೆದಾರರ ಪೋಸ್ಟ್ಗಳ ಸ್ಥಿತಿ ಏನು? ಮೆಟಾದ ಆರಿದಮ್ ತಾರತಮ್ಯದಿಂದ ಕಾರ್ಯನಿರ್ವಹಿಸುತ್ತಿದೆಯೇ? ಎಂಬ ಪ್ರಶ್ನೆಗಳನ್ನು ಸದಸ್ಯರು ಮುಂದಿಟ್ಟರು.
ಮೆಟಾ ಪ್ರತಿನಿಧಿಗಳು ಸಮಿತಿಯ ಮುಂದೆ ವಿಷಾದ ವ್ಯಕ್ತಪಡಿಸಿದರೂ, ಕೇವಲ ಕ್ಷಮೆಯಾಚನೆ ಸಾಕಾಗುವುದಿಲ್ಲ ಎಂದು ಸಂಸದರು ಅಭಿಪ್ರಾಯಪಟ್ಟರು. ಈ ಲೋಪಕ್ಕೆ ಕಾರಣರಾದ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯ ಜವಾಬ್ದಾರಿಯನ್ನು ನಿಗದಿಪಡಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಒಂದು ವೇಳೆ ಮೆಟಾಗೆ ದೊರೆಯುತ್ತಿರುವ ‘ಸೇಫ್ ಹಾರ್ಬರ್’ ರಕ್ಷಣೆ ರದ್ದಾದರೆ, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಬಳಕೆದಾರರು ಪ್ರಕಟಿಸುವ ಕಾನೂನುಬಾಹಿರ ಅಥವಾ ಆಕ್ಷೇಪಾರ್ಹ ವಿಷಯಗಳಿಗೆ ಕಂಪನಿಯ ಅಧಿಕಾರಿಗಳೇ ನೇರ ಹೊಣೆಗಾರರಾಗುವ ಸಾಧ್ಯತೆ ಇದೆ. ಅಂತಹ ಪರಿಸ್ಥಿತಿಯಲ್ಲಿ ಸಂಬಂಧಿತ ಅಧಿಕಾರಿಗಳ ವಿರುದ್ಧ ನೇರವಾಗಿ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸಲು ಅವಕಾಶ ಸಿಗಲಿದೆ.




