ವಾಷಿಂಗ್ಟನ್ (ಜುಲೈ 28 ) : ಇರಾನ್‌ನೊಂದಿಗೆ ನಡೆಯುತ್ತಿರುವ ರಾಜತಾಂತ್ರಿಕ ಮಾತುಕತೆಗಳು ವಿಫಲವಾದರೆ ಅಮೆರಿಕ ಅತ್ಯಂತ ಬಲಿಷ್ಠ ಮಿಲಿಟರಿ ಕ್ರಮ ಕೈಗೊಳ್ಳಲು ಸಿದ್ಧವಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಟೆಹ್ರಾನ್‌ಗೆ ಮತ್ತೊಂದು ಅವಕಾಶ ನೀಡುವ ಉದ್ದೇಶದಿಂದ ಯೋಜಿಸಲಾಗಿದ್ದ ಸೇನಾ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
‘ಆಕ್ಸಿಯೋಸ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ರಾಜತಾಂತ್ರಿಕ ಪ್ರಯತ್ನಗಳಿಗೆ ಸೀಮಿತ ಸಮಯ ಮಾತ್ರ ನೀಡಲಾಗಿದ್ದು, ಮಾತುಕತೆ ಫಲಕಾರಿಯಾಗದಿದ್ದರೆ ತಕ್ಷಣವೇ ಮಿಲಿಟರಿ ಕಾರ್ಯಾಚರಣೆ ಆರಂಭಿಸುವ ಸಾಧ್ಯತೆ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಸ್ತುತ ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಗಳಿಗೆ ಓಮನ್ ಪ್ರಮುಖ ಮಧ್ಯಸ್ಥಿಕೆ ವಹಿಸುತ್ತಿದೆ. ಇದರೊಂದಿಗೆ ಕತಾರ್, ಪಾಕಿಸ್ತಾನ ಹಾಗೂ ಈಜಿಪ್ಟ್ ಸೇರಿದಂತೆ ಹಲವು ರಾಷ್ಟ್ರಗಳು ಶಾಂತಿ ಮಾತುಕತೆಯನ್ನು ಯಶಸ್ವಿಗೊಳಿಸಲು ಪ್ರಯತ್ನಿಸುತ್ತಿವೆ. ಹಾರ್ಮುಜ್ ಜಲಸಂಧಿಯ ಸುರಕ್ಷಿತ ಸಂಚಾರ ಮತ್ತು ಹೊಸ ಪರಮಾಣು ಒಪ್ಪಂದ ರೂಪಿಸುವುದು ಈ ಮಾತುಕತೆಯ ಪ್ರಮುಖ ಉದ್ದೇಶವಾಗಿದೆ.
ಈ ಬೆಳವಣಿಗೆಗಳ ನಡುವೆಯೇ ಉತ್ತರ ಇರಾಕ್‌ನ ಎರ್ಬಿಲ್‌ನಲ್ಲಿರುವ ಅಮೆರಿಕ ಕಾನ್ಸುಲೇಟ್ ಸಮೀಪ ಇರಾನ್ ಬೆಂಬಲಿತ ಡ್ರೋನ್ ದಾಳಿ ನಡೆದಿರುವುದು ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ದಾಳಿಯ ಬಳಿಕ ಅಮೆರಿಕ ಎರ್ಬಿಲ್ ಆಕಾಶದಲ್ಲಿ ಯುದ್ಧವಿಮಾನಗಳು ಮತ್ತು ಡ್ರೋನ್‌ಗಳ ಗಸ್ತು ಹೆಚ್ಚಿಸಿ ಭದ್ರತೆಯನ್ನು ಬಿಗಿಗೊಳಿಸಿದೆ.
ಈ ಹಿಂದೆ ಉದ್ವಿಗ್ನತೆ ಕಡಿಮೆಯಾಗುವ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿತ್ತು. ಆದರೆ ಹೊಸ ಡ್ರೋನ್ ದಾಳಿಗಳಿಂದ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಮತ್ತೆ ಅನಿಶ್ಚಿತತೆ ಉಂಟಾಗುವ ಸಾಧ್ಯತೆ ವ್ಯಕ್ತವಾಗಿದೆ. ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರಗೊಂಡರೆ ಜಾಗತಿಕ ಆರ್ಥಿಕತೆ, ತೈಲ ಪೂರೈಕೆ ಹಾಗೂ ವ್ಯಾಪಾರದ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದ್ದು, ವಿಶ್ವ ನಾಯಕರು ರಾಜತಾಂತ್ರಿಕ ಪರಿಹಾರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.





