ಬೆಂಗಳೂರು, ಜುಲೈ 28: ಅಪರಿಚಿತ ವ್ಯಕ್ತಿಯ ಮಾತುಗಳನ್ನು ನಂಬಿ, ವಿದೇಶದಿಂದ ಬರಲಿದೆ ಎಂದಿದ್ದ ದುಬಾರಿ ಸೀರೆ ಹಾಗೂ ವಜ್ರಾಭರಣಗಳ ಗಿಫ್ಟ್ ಆಸೆಗೆ ಬಿದ್ದು ಮಹಿಳೆಯೊಬ್ಬರು 1.75 ಕೋಟಿ ರೂಪಾಯಿ ವಂಚನೆಗೊಳಗಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸೈಬರ್ ವಂಚಕರ ಜಾಲಕ್ಕೆ ಸಿಲುಕಿದ ಮಹಿಳೆಗೆ ಈಗ ಅರಿವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಫೇಸ್ಬುಕ್ ಮೂಲಕ ಪರಿಚಯ
ಪೊಲೀಸರ ವರದಿಯ ಪ್ರಕಾರ, ಸಾಹಿಲ್ ಜುಗ್ಗಲ್ ಎಂಬ ಪ್ರೊಫೈಲ್ ಮೂಲಕ ಫೇಸ್ಬುಕ್‌ನಲ್ಲಿ ಪರಿಚಯವಾಗಿದ್ದ ವ್ಯಕ್ತಿಯೊಬ್ಬ ಮಹಿಳೆಯೊಂದಿಗೆ ಫೋನ್ ಸಂಖ್ಯೆ ಪಡೆದು ಹತ್ತಿರವಾಗಿದ್ದ. ತಾನು ಲಂಡನ್‌ನಲ್ಲಿ ನೆಲೆಸಿದ್ದು, ಭಾರತದಲ್ಲಿರುವ ನಿಮಗೆ ಐಷಾರಾಮಿ ಸೀರೆಗಳು, ಅಪರೂಪದ ರತ್ನ ಹಾಗೂ ವಜ್ರದ ಆಭರಣಗಳನ್ನು ಪಾರ್ಸೆಲ್ ಮೂಲಕ ಕೊಡುಗೆಯಾಗಿ ಕಳುಹಿಸುತ್ತಿದ್ದೇನೆ ಎಂದು ನಂಬಿಸಿದ್ದ.
ಸಿನಿಮಾ ಸ್ಟೈಲ್‌ನಲ್ಲಿ ವಂಚನೆ
ಕೆಲವು ದಿನಗಳ ನಂತರ ಮಹಿಳೆಗೆ ಕರೆ ಮಾಡಿದ ಖದೀಮ, ಗಿಫ್ಟ್ ಪಾರ್ಸೆಲ್ ಭಾರತಕ್ಕೆ ತಲುಪಿದೆ. ಆದರೆ ಕಸ್ಟಮ್ಸ್ ಕ್ಲಿಯರೆನ್ಸ್ ಮಾಡಲು ತನ್ನ ಬಳಿ ಭಾರತೀಯ ರೂಪಾಯಿ ಇಲ್ಲದ ಕಾರಣ ತುರ್ತಾಗಿ 40 ಲಕ್ಷ ರೂ. ನೀಡುವಂತೆ ಕೇಳಿದ್ದ. ಹಣ ಹಸ್ತಾಂತರಕ್ಕೆ ಆತ ಮಾಡಿದ ಪ್ಲ್ಯಾನ್ ಸಂಪೂರ್ಣ ಸಿನಿಮಾ ಶೈಲಿಯಲ್ಲಿತ್ತು.
ಅರ್ಧಕ್ಕೆ ಹರಿದ 10 ರೂಪಾಯಿಯ ನೋಟಿನ ಫೋಟೋ ಕಳುಹಿಸಿದ ಆತ, ನಿಗದಿತ ಹೋಟೆಲ್‌ನಲ್ಲಿ ಈ ನೋಟಿನ ಇನ್ನರ್ಧ ಭಾಗ ತೋರಿಸುವ ವ್ಯಕ್ತಿಗೆ ಹಣ ನೀಡಲು ತಿಳಿಸಿದ್ದ. ಆತನ ಮಾತು ನಂಬಿದ ಮಹಿಳೆ 40 ಲಕ್ಷ ನಗದನ್ನು ಹೋಟೆಲ್‌ನಲ್ಲಿ ಅಪರಿಚಿತ ವ್ಯಕ್ತಿಗೆ ನೀಡಿದ್ದರು.
ಹಂತ ಹಂತವಾಗಿ ಲೂಟಿ
ಇಷ್ಟಕ್ಕೇ ನಿಲ್ಲದ ವಂಚನೆ ಜಾಲ, ಮುಂದೆ ಕಸ್ಟಮ್ಸ್ ಅಧಿಕಾರಿಯ ಸೋಗಿನಲ್ಲಿ ಕರೆ ಮಾಡಲು ಶುರುಮಾಡಿತ್ತು. ಪಾರ್ಸೆಲ್‌ನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಜ್ರಗಳಿರುವುದರಿಂದ ಜಿಎಸ್ಟಿ, ಆಮದು ಸುಂಕ ಹಾಗೂ ದಂಡದ ಹೆಸರಿನಲ್ಲಿ ವಿವಿಧ ಖಾತೆಗಳಿಗೆ ಹಣ ವರ್ಗಾಯಿಸುವಂತೆ ಬೆದರಿಸಿ ನಂಬಿಸಲಾಯಿತು.
ಹೀಗೆ ಹಂತ ಹಂತವಾಗಿ ಒಟ್ಟು 1.75 ಕೋಟಿ ರೂಪಾಯಿಯನ್ನು ಮಹಿಳೆಯಿಂದ ಲಪಟಾಯಿಸಿದ್ದಾನೆ. ಲಕ್ಷಾಂತರ ರೂಪಾಯಿ ಬೆಲೆಬಾಳುವ ಗಿಫ್ಟ್ ಬರುವ ಭರವಸೆಯಲ್ಲಿದ್ದ ಮಹಿಳೆಗೆ ದಿನಗಳು ಕಳೆದರೂ ಪಾರ್ಸೆಲ್ ಕೈಸೇರಲಿಲ್ಲ. ಬಳಿಕ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಫೋನ್ ಸಂಖ್ಯೆಗಳು ಸ್ವಿಚ್ ಆಫ್ ಆದಾಗ ತಾನು ವಂಚನೆಗೆ ಒಳಗಾಗಿರುವುದು ಅರಿವಾಗಿದೆ.
ಪೊಲೀಸ್ ತನಿಖೆ
ಸಂತ್ರಸ್ತೆ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಜಾಲಕ್ಕಾಗಿ ಬಲೆ ಬೀಸಿದ್ದಾರೆ. ಸೈಬರ್ ಕ್ರೈಂ ತಜ್ಞರು ವಿವಿಧ ಖಾತೆಗಳಿಗೆ ವರ್ಗಾವಣೆಯಾದ ಹಣದ ಜಾಡು ಹಿಡಿಯಲು ತನಿಖೆ ನಡೆಸುತ್ತಿದ್ದಾರೆ.





