ರಾಮನಗರ, ಮಾರ್ಚ್ 25: ರಾಮನಗರ ಜಿಲ್ಲೆಯ ಬಿಡದಿ ರೈಲ್ವೆ ನಿಲ್ದಾಣವನ್ನು ಸ್ಫೋಟಿಸುವುದಾಗಿ ಮಂಗಳವಾರ ಬೆದರಿಕೆ ಕರೆ ಬಂದಿದೆ. ಈ ಬೆದರಿಕೆ ಕರೆ ಹೊರಬಿದ್ದ ಬಳಿಕ ಬಿಡದಿ ರೈಲ್ವೆ ನಿಲ್ದಾಣದಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆದಿದೆ. ಶ್ವಾನದಳ ಮತ್ತು ಬಾಂಬ್ ಸ್ಕ್ವಾಡ್ ಅನ್ನು ಸ್ಥಳಕ್ಕೆ ಕರೆಸಿಕೊಂಡು ಪರಿಶೀಲನೆ ನಡೆಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಅಧಿಕಾರಿಗಳು ಹಾಗೂ ರಾಮನಗರ ಡಿವೈಎಸ್‌ಪಿ ನೇತೃತ್ವದಲ್ಲಿ ವಿಸ್ತೃತ ಪರಿಶೀಲನೆ ನಡೆದಿದ್ದು, ಬಾಂಬ್ ಡಿಟೆಕ್ಟರ್ ಮೂಲಕ ನಿಖರ ಶೋಧ ಕಾರ್ಯ ಕೈಗೊಳ್ಳಲಾಗಿದೆ. ಪಾಕಿಸ್ತಾನ ಪರ ಗೋಡೆ ಬರಹ ಬರೆದಿದ್ದ ಆರೋಪಿಗಳಿಂದ ಈ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ. ಈ ಹಿಂದೆ ಬಿಡದಿ ಪ್ರದೇಶದ ಒಂದು ಕಂಪನಿಯ ಗೋಡೆ ಮೇಲೆ ಪಾಕಿಸ್ತಾನ ಪರ ಬರಹಗಳನ್ನು ಬರೆದ ಆರೋಪದಲ್ಲಿ ಹೈಮದ್ ಹುಸೇನ್ ಮತ್ತು ಸಾಧಿಕ್ ಎಂಬುವರನ್ನು ಬಂಧಿಸಲಾಗಿತ್ತು.
ಈ ಬಂಧನದ ಹಿನ್ನೆಲೆಯಲ್ಲಿ ಪ್ರತಿಕಾರ ತೀರಿಸಿಕೊಳ್ಳಲು ಬಿಡದಿ ರೈಲ್ವೆ ನಿಲ್ದಾಣವನ್ನು ಸ್ಫೋಟಿಸುವುದಾಗಿ ದೂರವಾಣಿ ಕರೆ ಮೂಲಕ ಬೆದರಿಕೆ ಹಾಕಲಾಗಿದೆ. ಬೆಂಗಳೂರಿನ ರೈಲ್ವೆ ಕಂಟ್ರೋಲ್ ರೂಂಗೆ ಅಪರಿಚಿತ ವ್ಯಕ್ತಿಗಳಿಂದ ಈ ಕರೆ ಬಂದಿದ್ದು, ಈ ಹಿನ್ನೆಲೆ ಶೋಧ ಕಾರ್ಯ ಆರಂಭಿಸಲಾಯಿತು. ಪೊಲೀಸ್ ಇಲಾಖೆ, ಶ್ವಾನದಳ, ಬಾಂಬ್ ನಿಷ್ಕ್ರಿಯಕರಣ ದಳಗಳು ನಿಲ್ದಾಣದ ಎಲ್ಲ ಭಾಗಗಳನ್ನು ಪರಿಶೀಲನೆ ನಡೆಸಲಾಗಿದೆ.
ರೈಲ್ವೆ ನಿಲ್ದಾಣದಲ್ಲಿ ನಿರಂತರವಾಗಿ ಪ್ರಯಾಣಿಕರ ಮೇಲೆ ನಿಗಾವಹಿಸಲಾಗುತ್ತಿದ್ದು, ಯಾವುದೇ ಅನುಮಾನಾಸ್ಪದ ಚಲನೆ ಕಂಡುಬಂದರೆ ತಕ್ಷಣವೇ ಅಧಿಕಾರಿಗಳಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ. ಬೆದರಿಕೆ ಕರೆಗಿಂತಲೂ ಜನರಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ, ಆದರೆ ಪೊಲೀಸರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮಕೈಗೊಂಡಿದ್ದಾರೆ.
ಈ ಬೆದರಿಕೆ ಕರೆಗೆ ಕಾರಣವಾದವರನ್ನು ಪತ್ತೆಹಚ್ಚಲು ಪೊಲೀಸರು ತೀವ್ರ ಶೋಧ ಮುಂದುವರಿಸಿದ್ದಾರೆ. ಸುರಕ್ಷತಾ ಕ್ರಮವಾಗಿ ಬಿಡದಿ ರೈಲ್ವೆ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಿಗೂ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ರೈಲ್ವೆ ಇಲಾಖೆಯು ಕೂಡ ಎಲ್ಲಾ ರೈಲುಗಳ ಮೇಲೆ ಕಟ್ಟುನಿಟ್ಟಿನ ನಿಗಾವಹಿಸಿದ್ದು, ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಕ್ರಮಗಳನ್ನು ಕೈಗೊಂಡಿದೆ.





