ನವದೆಹಲಿ: ನೀಟ್ (NEET) ಪರೀಕ್ಷಾ ಅಕ್ರಮದ ವಿರುದ್ಧ ದೆಹಲಿಯ ಜಂತರ್-ಮಂತರ್ನಲ್ಲಿ ಕಳೆದ 35 ದಿನಗಳಿಂದ ನಡೆಯುತ್ತಿದ್ದ ವಿದ್ಯಾರ್ಥಿಗಳ ಪ್ರತಿಭಟನೆ ಅಂತ್ಯಗೊಂಡಿದೆ. ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆದ ಈ ಹೋರಾಟವನ್ನು ಅಧಿಕೃತವಾಗಿ ಹಿಂಪಡೆಯಲಾಗಿದೆ ಎಂದು ಪಕ್ಷದ ವಕ್ತಾರ ಸೌರವ್ ದಾಸ್ ಘೋಷಣೆ ಮಾಡಿದ್ದಾರೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬಳಿಕ ಕೇಂದ್ರ ಸರ್ಕಾರ ಮತ್ತು ಸಿಜೆಪಿ ಮುಖಂಡರ ನಡುವೆ ಮೂರನೇ ಸುತ್ತಿನ ಮಹತ್ವದ ಮಾತುಕತೆ ನಡೆಯಿತು. ಈ ಸಭೆಯಲ್ಲಿ ನೀಟ್ ಅಕ್ರಮದ ಕುರಿತು ಪ್ರತಿಭಟನಾಕಾರರು ಮುಂದಿಟ್ಟಿದ್ದ ಬೇಡಿಕೆಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿರುವುದರಿಂದ ತಮ್ಮ ಪ್ರಮುಖ ಬೇಡಿಕೆಗಳಲ್ಲಿ ಒಂದನ್ನು ಸರ್ಕಾರ ಈಡೇರಿಸಿದೆ ಎಂದು ಸಿಜೆಪಿ ಪ್ರತಿನಿಧಿಗಳು ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಹಾಗೂ ಜಿತೇಂದ್ರ ಸಿಂಗ್ ಭಾಗವಹಿಸಿದ್ದರು. ಉಳಿದ ಎರಡು ಬೇಡಿಕೆಗಳನ್ನೂ ಸರ್ಕಾರ ಹಂತ ಹಂತವಾಗಿ ಈಡೇರಿಸಲು ಪ್ರಯತ್ನಿಸಲಾಗುವುದು ಎಂದು ಅವರು ಭರವಸೆ ನೀಡಿರುವುದಾಗಿ ಸಿಜೆಪಿ ತಿಳಿಸಿದೆ. ಈ ಭರವಸೆಯ ಹಿನ್ನೆಲೆ ಪ್ರತಿಭಟನೆ ಮುಂದುವರಿಸುವ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದಿರುವುದಾಗಿ ಪಕ್ಷದ ನಾಯಕರು ಹೇಳಿದರು.
ಮಾತುಕತೆ ಬಳಿಕ ಬಿಜೆಪಿ ಹಾಗೂ ಸಿಜೆಪಿ ಮುಖಂಡರು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಸಿಜೆಪಿ ವಕ್ತಾರ ಸೌರವ್ ದಾಸ್, “ನಮ್ಮ ಹೋರಾಟಕ್ಕೆ ಮೊದಲ ಯಶಸ್ಸು ದೊರೆತಿದೆ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿರುವುದು ವಿದ್ಯಾರ್ಥಿಗಳ ಹೋರಾಟದ ಗೆಲುವಾಗಿದೆ. ಸರ್ಕಾರ ಉಳಿದ ಬೇಡಿಕೆಗಳನ್ನೂ ಈಡೇರಿಸುವ ಭರವಸೆ ನೀಡಿರುವುದರಿಂದ ಪ್ರತಿಭಟನೆಯನ್ನು ಹಿಂಪಡೆಯಲು ನಿರ್ಧರಿಸಿದ್ದೇವೆ” ಎಂದು ಹೇಳಿದರು.
ಪ್ರತಿಭಟನೆ ವೇಳೆ ಬಂಧನಕ್ಕೊಳಗಾದ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಎಫ್ಐಆರ್ಗಳನ್ನು ಶೀಘ್ರದಲ್ಲೇ ರದ್ದುಗೊಳಿಸಲಾಗುವುದು ಎಂಬ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿದೆ ಎಂದು ಸೌರವ್ ದಾಸ್ ಮಾಹಿತಿ ನೀಡಿದರು. ವಿದ್ಯಾರ್ಥಿಗಳ ವಿರುದ್ಧದ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಶೀಘ್ರ ಆರಂಭವಾಗಲಿದೆ ಎಂದು ಅವರು ತಿಳಿಸಿದರು.
ಇದೇ ವೇಳೆ ನೀಟ್ ಅಕ್ರಮದಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ನೀಡುವ ವಿಚಾರವೂ ಸಭೆಯಲ್ಲಿ ಚರ್ಚೆಯಾಯಿತು. ಪ್ರತಿಭಟನಾಕಾರರು ಪ್ರತಿ ಕುಟುಂಬಕ್ಕೂ ₹1 ಕೋಟಿ ಪರಿಹಾರ ನೀಡುವಂತೆ ಒತ್ತಾಯಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸರ್ಕಾರ, ₹1 ಕೋಟಿ ಪರಿಹಾರ ನೀಡುವುದು ಸಾಧ್ಯವಾಗದಿದ್ದರೂ, ಸಾಧ್ಯವಾದಷ್ಟು ಹೆಚ್ಚಿನ ಆರ್ಥಿಕ ನೆರವು ನೀಡುವ ಬಗ್ಗೆ ಸಕಾರಾತ್ಮಕ ಚಿಂತನೆ ನಡೆಸುವುದಾಗಿ ತಿಳಿಸಿದೆ ಎಂದು ಸಿಜೆಪಿ ಹೇಳಿದೆ.
ಈ ವಿಷಯದ ಕುರಿತು ಸರ್ಕಾರದ ವಿವಿಧ ಹಂತಗಳಲ್ಲಿ ಚರ್ಚೆ ನಡೆಯಲಿದ್ದು, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಲಾಗಿದೆ. ಪರಿಹಾರ ನೀಡುವ ತತ್ವವನ್ನು ಸರ್ಕಾರ ಒಪ್ಪಿಕೊಂಡಿರುವುದು ಹೋರಾಟದ ಮತ್ತೊಂದು ಮಹತ್ವದ ಬೆಳವಣಿಗೆ ಎಂದು ಸಿಜೆಪಿ ಅಭಿಪ್ರಾಯಪಟ್ಟಿದೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆ ಜಂತರ್-ಮಂತರ್ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಅಧಿಕೃತವಾಗಿ ಅಂತ್ಯಗೊಳಿಸಲಾಗಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಲ್ಲಾ ವಿದ್ಯಾರ್ಥಿಗಳು ಶಾಂತಿಯುತವಾಗಿ ತಮ್ಮ ತಮ್ಮ ಮನೆಗಳಿಗೆ ಮರಳುವಂತೆ ಸಿಜೆಪಿ ವಕ್ತಾರರು ಮನವಿ ಮಾಡಿದ್ದಾರೆ.




