ಚಿತ್ರದುರ್ಗ, (ಜುಲೈ 24): ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಾಳೆ ಜುಲೈ 25 ಮತ್ತು ಜುಲೈ 26ರಂದು ಎರಡು ದಿನಗಳ ಕಾಲ ಚಿತ್ರದುರ್ಗ ಜಿಲ್ಲೆಯಲ್ಲಿ ವಿವಿಧ ಸರ್ಕಾರಿ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಈ ಪ್ರವಾಸದ ವೇಳೆ ಬೆಂಗಳೂರು ಪ್ರಾದೇಶಿಕ ವಿಭಾಗದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ, ಪ್ರವಾಹಪೀಡಿತ ಪ್ರದೇಶಗಳ ವೀಕ್ಷಣೆ ಹಾಗೂ ವಿವಿಧ ಸಭೆಗಳಲ್ಲಿ ಡಿಕೆಶಿ ಅವರು ಭಾಗವಹಿಸಲಿದ್ದಾರೆ.
ಜುಲೈ 25ರಂದು ಬೆಳಿಗ್ಗೆ 10 ಗಂಟೆಗೆ ಹಿರಿಯೂರು ಪಟ್ಟಣದ ಹುಳಿಯಾರು ರಸ್ತೆಯಲ್ಲಿರುವ ವಾಣಿ ವಿಲಾಸ ಕಾಲೇಜಿನ ಹೆಲಿಪ್ಯಾಡ್‌ಗೆ ಸಿಎಂ ಡಿಕೆ ಶಿವಕುಮಾರ್ ಅವರು ಆಗಮಿಸಲಿದ್ದಾರೆ. ಬಳಿಕ ಇತ್ತೀಚಿಗೆ ಮಳೆಯಿಂದ ಹಾನಿಗೊಳಗಾದ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಮಧ್ಯಾಹ್ನ 12.30ಕ್ಕೆ ಚಿತ್ರದುರ್ಗದ ಮುರುಘಾ ಮಠದ ಅನುಭವ ಮಂಟಪದಲ್ಲಿ ಬೆಂಗಳೂರು ಪ್ರಾದೇಶಿಕ ವಿಭಾಗದ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ. ಈ ಸಭೆಯಲ್ಲಿ ಬೆಂಗಳೂರು ವಿಭಾಗದ ಒಂಬತ್ತು ಜಿಲ್ಲೆಗಳ ಅಭಿವೃದ್ಧಿ ಯೋಜನೆಗಳು, ಮೂಲಸೌಕರ್ಯ ಕಾಮಗಾರಿಗಳು ಹಾಗೂ ವಿವಿಧ ಇಲಾಖೆಗಳ ಕಾರ್ಯಪ್ರಗತಿ ಕುರಿತು ಸಮಗ್ರ ಪರಿಶೀಲನೆ ನಡೆಸಲಾಗುತ್ತದೆ. ಸಭೆಯಲ್ಲಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಸಭೆಯ ನಂತರ ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಚಿತ್ರದುರ್ಗದಿಂದ ಬೆಂಗಳೂರಿಗೆ ತಮ್ಮ ಪ್ರಯಾಣವನ್ನು ಬೆಳೆಸಲಿದ್ದಾರೆ.
ಜುಲೈ 26ರಂದು ಮತ್ತೆ ಬೆಳಿಗ್ಗೆ 11.30ಕ್ಕೆ ಹಿರಿಯೂರಿನ ವಾಣಿ ವಿಲಾಸ ಕಾಲೇಜಿನ ಹೆಲಿಪ್ಯಾಡ್‌ಗೆ ಆಗಮಿಸಲಿರುವ ಡಿಕೆ ಶಿವಕುಮಾರ್, ಹಿರಿಯೂರಿನ ನೆಹರು ಮೈದಾನದಲ್ಲಿ ಆಯೋಜಿಸಿರುವ ಸಚಿವ ದಿವಂಗತ ಡಿ.ಡಿ. ಸುಧಾಕರ್ ಅವರ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೌರವ ನಮನ ಸಲ್ಲಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ರಾಜ್ಯದ ಸಚಿವರು, ಶಾಸಕರು ಹಾಗೂ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಬಳಿಕ ಮಧ್ಯಾಹ್ನ 3 ಗಂಟೆಗೆ ಚಿತ್ರದುರ್ಗದಿಂದ ಹೊರಟು ಸಂಜೆ 4 ಗಂಟೆಗೆ ಬೆಂಗಳೂರಿನ HAL ವಿಮಾನ ನಿಲ್ದಾಣ ತಲುಪಲಿದ್ದಾರೆ.
ಈ ಎರಡು ದಿನಗಳ ಪ್ರವಾಸದಲ್ಲಿ ಆಡಳಿತಾತ್ಮಕ ಸಭೆಗಳು, ಅಭಿವೃದ್ಧಿ ಪರಿಶೀಲನೆ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಡಿಕೆ ಶಿವಕುಮಾರ್ ಆದ್ಯತೆ ನೀಡುತ್ತಿರುವುದು ಗಮನಾರ್ಹವಾಗಿದೆ.





