ತಂದೆ ಮಾಡಿದ ಕೇವಲ 4 ಸಾವಿರ ರೂಪಾಯಿ ಸಾಲ ಅದನ್ನು ತೀರಿಸಲು 9ನೇ ತರಗತಿಯಿಂದಲೇ ಶಾಲೆ ಬಿಟ್ಟು ಜೀತ ಕಾರ್ಮಿಕನಾದ ಯುವಕ! ಇದು ಕೆಜಿಎಫ್ ನಂತಹ ಸಿನಿಮಾ ಕಥೆಯಲ್ಲ ತುಮಕೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದ ಬೆಚ್ಚಿಬೀಳಿಸುವ ನೈಜ ಘಟನೆ. ಸಾಲದ ಹೆಸರಿನಲ್ಲಿ 20ರಿಂದ 25 ವರ್ಷಗಳ ಕಾಲ ಕುಟುಂಬಗಳನ್ನು ಬಂಧಿತರಂತೆ ದುಡಿಸಿಕೊಳ್ಳುವುದು. ರಜೆ ಕೇಳಿದರೆ ದಂಡ ಅನಾರೋಗ್ಯವಾದರೆ ಮತ್ತಷ್ಟು ಸಾಲಸ್ವತಂತ್ರವಾಗಿ ಹೊರಗೆ ಹೋಗುವ ಹಕ್ಕೂ ಇಲ್ಲಇಂತಹ ಜೀತ ಕಾರ್ಮಿಕ ಪದ್ಧತಿಯ ಕರಾಳತೆಯನ್ನು ರಕ್ಷಣೆಗೊಂಡ ಕಾರ್ಮಿಕರ ಹೇಳಿಕೆಗಳ ಆಧಾರದಲ್ಲಿ ತುಮಕೂರು ಉಪವಿಭಾಗಾಧಿಕಾರಿ ನಾಹೀದಾ ಜಂಜಂ ಮಾಧ್ಯಮದ ಮುಂದೆ ಬಿಚ್ಚಿಟ್ಟಿದ್ದಾರೆ.
ಈ ಅಮಾನವೀಯ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ಪಾವಸಂದ್ರ ಗ್ರಾಮದ ಅಕ್ರಮ ಕಲ್ಲು ಕ್ವಾರಿಯಲ್ಲಿ ನಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಜುಲೈ 20ರಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಮೂವರು ಜೀತ ಕಾರ್ಮಿಕರು ತಪ್ಪಿಸಿಕೊಂಡು ಬಂದು ನೀಡಿದ ದೂರಿನ ಮೇರೆಗೆ ಪ್ರಕರಣ ಬೆಳಕಿಗೆ ಬಂದಿದೆ. ಪ್ರಾಥಮಿಕ ವಿಚಾರಣೆಯಲ್ಲಿ ಅವರು ಹಲವು ವರ್ಷಗಳಿಂದ ಸಾಲದ ಹೆಸರಿನಲ್ಲಿ ಜೀತ ಕಾರ್ಮಿಕರಾಗಿ ದುಡಿಸಿಕೊಳ್ಳಲಾಗುತ್ತಿದ್ದು, ಯಾವುದೇ ಸ್ವಾತಂತ್ರ್ಯವಿಲ್ಲದೆ ಬದುಕುತ್ತಿದ್ದೇವೆ ಎಂದು ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಇದಾದ ಬಳಿಕ ಜಿಲ್ಲಾ ಆಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ‘ಮುಕ್ತಿ ಒಕ್ಕೂಟ’ ಸಂಸ್ಥೆ ಜಂಟಿಯಾಗಿ ಮರುದಿನ ಕಾರ್ಯಾಚರಣೆ ನಡೆಸಿ ಕ್ವಾರಿಗೆ ಭೇಟಿ ನೀಡಿದೆ. ಸ್ಥಳದಲ್ಲಿ ಆರು ಕುಟುಂಬಗಳಿಗೆ ಸೇರಿದ 12 ಮಂದಿ ಜೀತ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.
ವಿಚಾರಣೆ ವೇಳೆ ಸಂತ್ರಸ್ತರು ಬೆಚ್ಚಿಬೀಳಿಸುವ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ತಂದೆ ಮಾಡಿದ ಕೇವಲ ನಾಲ್ಕು ಸಾವಿರ ರೂಪಾಯಿ ಸಾಲ ತೀರಿಸಲು 9ನೇ ತರಗತಿಯಲ್ಲೇ ಶಾಲೆ ಬಿಟ್ಟು ಜೀತ ಕಾರ್ಮಿಕನಾದ ಯುವಕನ ಹೇಳಿಕೆ ಅಧಿಕಾರಿಗಳನ್ನು ಬೆಚ್ಚಿಬೀಳಿಸಿದೆ. ಹಲವು ವರ್ಷಗಳ ಹಿಂದೆ ಪಡೆದಿದ್ದ ಸಾಲಕ್ಕೆ ಬಡ್ಡಿ, ದಂಡ ಹಾಗೂ ವಿವಿಧ ನೆಪಗಳಲ್ಲಿ ಹಣ ಸೇರಿಸಿ ಈಗ ನಾಲ್ಕರಿಂದ ಐದು ಲಕ್ಷ ರೂಪಾಯಿವರೆಗೆ ಸಾಲವಾಗಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.
ಅಷ್ಟೇ ಅಲ್ಲ, ಕ್ವಾರಿಯಿಂದ ಹೊರಗೆ ಸ್ವತಂತ್ರವಾಗಿ ಹೋಗಲು ಅವಕಾಶವಿರಲಿಲ್ಲ. ವಾರದಲ್ಲಿ ಕೇವಲ ಒಂದು ದಿನ ಮಾತ್ರ ರಜೆ. ಪ್ರತಿದಿನ ಬೆಳಗ್ಗೆ ಆರು ಗಂಟೆಯಿಂದ ರಾತ್ರಿ ತನಕ ಕಲ್ಲು ಒಡೆಯುವ ಕೆಲಸ. ರಜೆ ತೆಗೆದುಕೊಂಡರೂ, ಅನಾರೋಗ್ಯವಾದರೂ ದಂಡ ವಿಧಿಸುತ್ತಿದ್ದರು ಎಂದು ಕಾರ್ಮಿಕರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಧಿಕಾರಿಗಳ ಪರಿಶೀಲನೆಯಲ್ಲಿ ಕಾರ್ಮಿಕರ ವಾಸದ ಸ್ಥಳದಲ್ಲಿ ಶೌಚಾಲಯ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯಗಳಿರಲಿಲ್ಲ. ಮಹಿಳೆಯರ ಸುರಕ್ಷತೆಯೂ ಗಂಭೀರ ಪ್ರಶ್ನೆಯಾಗಿರುವುದು ಬೆಳಕಿಗೆ ಬಂದಿದೆ. ಕ್ವಾರಿಗೆ ಯಾವುದೇ ಪರವಾನಗಿ ಇಲ್ಲದಿರುವುದು ಹಾಗೂ ಅಲ್ಲಿನ ಕಾರ್ಮಿಕರು ಯಾರೂ ನೋಂದಾಯಿತ ಕಾರ್ಮಿಕರಲ್ಲ ಎಂಬುದನ್ನು ಸಂಬಂಧಪಟ್ಟ ಇಲಾಖೆಗಳು ದೃಢಪಡಿಸಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ವಾರಿ ಮಾಲೀಕರಾದ ಶಶಿಕುಮಾರ್, ರಘು ಹಾಗೂ ಚೆನ್ನಗೌಡ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ, ಬಂಧಿತ ಕಾರ್ಮಿಕ ಪದ್ಧತಿ ನಿರ್ಮೂಲನೆ ಕಾಯ್ದೆ, ಬಾಲ ಕಾರ್ಮಿಕ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ರಕ್ಷಣೆಗೊಳಗಾದ 12 ಮಂದಿಗೆ ಬಿಡುಗಡೆ ಪ್ರಮಾಣಪತ್ರ ವಿತರಿಸಲಾಗಿದ್ದು, ಸುರಕ್ಷಿತ ಆಶ್ರಯ, ಕೌನ್ಸೆಲಿಂಗ್ ಹಾಗೂ ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಇಂತಹ ಜೀತ ಕಾರ್ಮಿಕ ಪದ್ಧತಿ ಎಲ್ಲಿಯೇ ಕಂಡುಬಂದರೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಪವಿಭಾಗಾಧಿಕಾರಿ ನಾಹೀದಾ ಜಂಜಂ ಎಚ್ಚರಿಕೆ ನೀಡಿದ್ದಾರೆ.





