ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರನ್ನು ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ನಟಿ ರಕ್ಷಿತಾ ಪ್ರೇಮ್ ಮಂಗಳವಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಭೇಟಿ ಮಾಡಿ ಆರೋಗ್ಯ ಹಾಗೂ ಯೋಗಕ್ಷೇಮ ವಿಚಾರಿಸಿದರು. ಇಬ್ಬರೂ ಬೇರೆ ಬೇರೆ ಕಾರುಗಳಲ್ಲಿ ಜೈಲಿಗೆ ಆಗಮಿಸಿದ್ದು, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ದರ್ಶನ್ ಅವರೊಂದಿಗೆ ಮಾತುಕತೆ ನಡೆಸಿದರೆಂದು ತಿಳಿದುಬಂದಿದೆ.
ದರ್ಶನ್ ವಿರುದ್ಧ ದಾಖಲಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಮತ್ತು ನ್ಯಾಯಾಂಗ ಪ್ರಕ್ರಿಯೆ ಮುಂದುವರೆದಿರುವ ಹಿನ್ನೆಲೆ, ಕುಟುಂಬದ ಸದಸ್ಯರು ಹಾಗೂ ಆಪ್ತರು ಜೈಲಿಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸುತ್ತಿದ್ದಾರೆ. ಇಂದು ಕೂಡ ಪತ್ನಿ ವಿಜಯಲಕ್ಷ್ಮಿ ಮತ್ತೊಮ್ಮೆ ಜೈಲಿಗೆ ಭೇಟಿ ನೀಡಿದರು. ಅವರೊಂದಿಗೆ ನಟಿ ರಕ್ಷಿತಾ ಪ್ರೇಮ್ ಕೂಡ ಆಗಮಿಸಿದ್ದರು…
ವಿಜಯಲಕ್ಷ್ಮಿ ಇತ್ತೀಚೆಗೆ ತಮ್ಮ ಪುತ್ರನೊಂದಿಗೆ ಜೈಲಿಗೆ ತೆರಳಿ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ದರ್ಶನ್ ಅವರನ್ನು ಭೇಟಿಯಾಗಿದ್ದರು. ಇದೀಗ ಕೆಲವೇ ದಿನಗಳ ಅಂತರದಲ್ಲಿ ಮತ್ತೊಮ್ಮೆ ಭೇಟಿ ನೀಡಿ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ.
ಇನ್ನೊಂದೆಡೆ, ನಟಿ ರಕ್ಷಿತಾ ಪ್ರೇಮ್ ದರ್ಶನ್ ಅವರನ್ನು ಭೇಟಿ ಮಾಡಲು ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿರುವುದು ಇದು ಎರಡನೇ ಬಾರಿ. ಈ ಹಿಂದೆ ಪತಿ ನಿರ್ದೇಶಕ ಪ್ರೇಮ್ ಅವರೊಂದಿಗೆ ಭೇಟಿ ನೀಡಿದ್ದ ಅವರು, ಈ ಬಾರಿ ಒಬ್ಬರೇ ಆಗಮಿಸಿ ದರ್ಶನ್ ಅವರನ್ನು ಭೇಟಿಯಾದರು.
ಜೈಲಿನ ಭೇಟಿಯ ವೇಳೆ ದರ್ಶನ್ ಅವರ ಆರೋಗ್ಯ, ಮನಸ್ಥಿತಿ ಹಾಗೂ ಇತರ ವಿಚಾರಗಳ ಕುರಿತು ಚರ್ಚೆ ನಡೆದಿರಬಹುದು ಎನ್ನಲಾಗಿದೆ. ಇಬ್ಬರ ನಡುವೆ ಏನು ಮಾತುಕತೆ ನಡೆಯಿತು ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಜೈಲಿನಿಂದ ಹೊರಬಂದ ಬಳಿಕವೂ ರಕ್ಷಿತಾ ಪ್ರೇಮ್ ಮಾಧ್ಯಮಗಳೊಂದಿಗೆ ಯಾವುದೇ ವಿವರ ಹಂಚಿಕೊಳ್ಳದೆ ಹೊರಟು ಹೋದರು..
ಮಾಧ್ಯಮ ಪ್ರತಿನಿಧಿಗಳು “ದರ್ಶನ್ ಹೇಗಿದ್ದಾರೆ?” ಎಂದು ಪ್ರಶ್ನಿಸಿದಾಗ, “ಚೆನ್ನಾಗಿದ್ದಾರೆ” ಎಂಬ ಸಂಕ್ಷಿಪ್ತ ಉತ್ತರ ನೀಡಿದ ರಕ್ಷಿತಾ, ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿ ಸ್ಥಳದಿಂದ ತೆರಳಿದರು. ವಿಜಯಲಕ್ಷ್ಮಿ ಕೂಡ ಯಾವುದೇ ಹೇಳಿಕೆ ನೀಡದೆ ಹೊರಟರು.
ಇತ್ತೀಚೆಗೆ ವಿಜಯಲಕ್ಷ್ಮಿ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ದರ್ಶನ್ ಅವರೊಂದಿಗಿನ ಹಳೆಯ ಫೋಟೋ ಹಂಚಿಕೊಂಡು, “ನಗುವ ಮುಖದ ಹಿಂದಿರುವ ನೋವು ದೇವರಿಗಷ್ಟೇ ಗೊತ್ತು” ಎಂಬ ಭಾವುಕ ಸಾಲು ಬರೆದುಕೊಂಡಿದ್ದರು. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದರ್ಶನ್ ಅಭಿಮಾನಿಗಳಿಂದ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸಂಕಷ್ಟದ ಸಮಯದಲ್ಲಿ ಗಂಡನ ಬೆನ್ನಿಗೆ ನಿಂತಿರುವ ವಿಜಯಲಕ್ಷ್ಮಿ ಅವರ ನಡೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇದೇ ವೇಳೆ, ದರ್ಶನ್ ಪರವಾಗಿ ಸಲ್ಲಿಸಲಾಗಿದ್ದ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ ಎದುರಾಗಿದೆ. ಪ್ರಾಥಮಿಕ ಹಂತದಲ್ಲೇ ಸಲ್ಲಿಸಿದ್ದ ಅರ್ಜಿಯನ್ನು ರಿಜಿಸ್ಟ್ರಾರ್ ಕಚೇರಿ ವಿಚಾರಣೆಗೆ ಅರ್ಹವಲ್ಲ ಎಂದು ಪರಿಗಣಿಸಿ ತಿರಸ್ಕರಿಸಿರುವುದರಿಂದ, ಅರ್ಜಿ ನ್ಯಾಯಮೂರ್ತಿಗಳ ಪೀಠದ ಮುಂದೆ ವಿಚಾರಣೆಗೆ ಬರಲಿಲ್ಲ. ಇದರಿಂದ ಜಾಮೀನು ಪಡೆಯುವ ಪ್ರಯತ್ನಕ್ಕೆ ತಾತ್ಕಾಲಿಕ ಅಡ್ಡಿಯಾಗಿದ್ದು, ಮುಂದಿನ ಕಾನೂನು ಕ್ರಮಗಳತ್ತ ದರ್ಶನ್ ಪರ ವಕೀಲರು ಗಮನ ಹರಿಸಿದ್ದಾರೆ.





