ಮಹಾರಾಷ್ಟ್ರದಲ್ಲಿ ಸುರಿದ ಭಾರೀ ಮಳೆಯ ಪರಿಣಾಮ ಭೋರ್ ಘಾಟ್ ವಿಭಾಗದಲ್ಲಿ ಸಂಭವಿಸಿದ ಭೂಕುಸಿತದಿಂದ ಮುಂಬೈ–ಪುಣೆ ಕಾರಿಡಾರ್‌ನ ರೈಲು ಸಂಚಾರ ಭಾರೀ ವ್ಯತ್ಯಯಕ್ಕೊಳಗಾಗಿದೆ. ಕರ್ಜತ್ ಮತ್ತು ಲೋನಾವಾಲಾ ನಡುವಿನ ಮಾರ್ಗದಲ್ಲಿ ಭೂಕುಸಿತಗಳಿಂದ ಮೂರು ರೈಲು ಮಾರ್ಗಗಳಿಗೆ ತೀವ್ರ ಹಾನಿಯಾಗಿರುವ ಹಿನ್ನೆಲೆಯಲ್ಲಿ, ಕೇಂದ್ರ ರೈಲ್ವೆ ಜುಲೈ 17ರವರೆಗೆ 30 ದೀರ್ಘದೂರ ಹಾಗೂ ಇಂಟರ್‌ಸಿಟಿ ರೈಲು ಸೇವೆಗಳನ್ನು ರದ್ದುಗೊಳಿಸಿದೆ.
ಅಧಿಕಾರಿಗಳ ಪ್ರಕಾರ, ಜುಲೈ 6ರಂದು ಸುರಿದ ಧಾರಾಕಾರ ಮಳೆಯಿಂದ ಭೋರ್ ಘಾಟ್ ವಿಭಾಗದ ಠಾಕೂರ್ವಾಡಿ ಮತ್ತು ಮಂಕಿ ಹಿಲ್ ಕ್ಯಾಬಿನ್‌ಗಳ ಸಮೀಪ ಅನೇಕ ಭೂಕುಸಿತಗಳು ಸಂಭವಿಸಿವೆ. ಇದರ ಪರಿಣಾಮ ಕರ್ಜತ್–ಲೋನಾವಾಲಾ ನಡುವೆ ಸಂಚರಿಸುವ ಪ್ರಮುಖ ರೈಲು ಮಾರ್ಗಗಳು ಹಾನಿಗೊಳಗಾಗಿದ್ದು, ಮುಂಬೈ–ಪುಣೆ ರೈಲು ಸಂಚಾರಕ್ಕೆ ದೀರ್ಘಕಾಲದ ಅಡಚಣೆ ಉಂಟಾಗಿದೆ.
ರೈಲು ಮಾರ್ಗಗಳ ಪುನಃಸ್ಥಾಪನೆ ಕಾರ್ಯವನ್ನು ಯುದ್ಧೋಪಾಯದಲ್ಲಿ ಕೈಗೊಳ್ಳಲಾಗುತ್ತಿದೆಯಾದರೂ, ಕಷ್ಟಕರ ಭೂಪ್ರದೇಶ ಮತ್ತು ಅಪಾಯಕಾರಿ ಕೆಲಸದ ಪರಿಸ್ಥಿತಿಗಳಿಂದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಭೂಕುಸಿತದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಮಣ್ಣು, ಕಲ್ಲು ಮತ್ತು ಮಳೆಯಿಂದ ಉಂಟಾದ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಮುಂದುವರಿದಿದೆ.
ಕೇಂದ್ರ ರೈಲ್ವೆ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಒಟ್ಟು 30 ರೈಲು ಸೇವೆಗಳು ರದ್ದಾಗಿದ್ದು, ಇದರಲ್ಲಿ 14 ದೈನಂದಿನ ರೈಲುಗಳು, ನಿರ್ದಿಷ್ಟ ದಿನಾಂಕಗಳಲ್ಲಿ ಸಂಚರಿಸುವ 8 ರೈಲುಗಳು ಹಾಗೂ 8 ವಿಶೇಷ ರೈಲುಗಳು ಸೇರಿವೆ. ಜುಲೈ 10ರಿಂದ 17ರವರೆಗೆ ಡೆಕ್ಕನ್ ಕ್ವೀನ್, ಡೆಕ್ಕನ್ ಎಕ್ಸ್‌ಪ್ರೆಸ್, ಮುಂಬೈ–ಪುಣೆ ಇಂಟರ್‌ಸಿಟಿ ಎಕ್ಸ್‌ಪ್ರೆಸ್, ಸಿಎಸ್‌ಎಂಟಿ–ಹೈದರಾಬಾದ್ ಎಕ್ಸ್‌ಪ್ರೆಸ್, ಚೆನ್ನೈ ಎಗ್ಮೋರ್ ಸೂಪರ್‌ಫಾಸ್ಟ್ ಮೇಲ್ ಮತ್ತು ಹುಬ್ಬಳ್ಳಿ–ದಾದರ್ ಎಕ್ಸ್‌ಪ್ರೆಸ್ ಸೇರಿದಂತೆ ಹಲವು ಪ್ರಮುಖ ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.
ಇದರ ಜೊತೆಗೆ ಮಹಾಲಕ್ಷ್ಮಿ ಎಕ್ಸ್‌ಪ್ರೆಸ್, ಜೋಧ್‌ಪುರ್–ಹಡಪ್ಸರ್ ಎಕ್ಸ್‌ಪ್ರೆಸ್, ದಾದರ್–ಸತಾರಾ ಎಕ್ಸ್‌ಪ್ರೆಸ್ ಮತ್ತು ದಾದರ್–ಸಾಯಿನಗರ ಶಿರಡಿ ಎಕ್ಸ್‌ಪ್ರೆಸ್ ರೈಲುಗಳೂ ಕೆಲವು ನಿರ್ದಿಷ್ಟ ದಿನಾಂಕಗಳಲ್ಲಿ ರದ್ದಾಗಿವೆ. ಮುಂಬೈ ಮತ್ತು ಪುಣೆಯನ್ನು ಗೋರಖ್‌ಪುರ್, ಘಾಜಿಪುರ ನಗರ ಹಾಗೂ ಹಜರತ್ ನಿಜಾಮುದ್ದೀನ್‌ಗೆ ಸಂಪರ್ಕಿಸುವ ಕೆಲವು ವಿಶೇಷ ರೈಲುಗಳ ಸಂಚಾರವೂ ಸ್ಥಗಿತಗೊಂಡಿದೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಪುನಃಸ್ಥಾಪನಾ ಕಾಮಗಾರಿಯನ್ನು ಪರಿಶೀಲಿಸಿದ್ದು, ಭೂಕುಸಿತದಿಂದ ರೈಲು ಮಾರ್ಗಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ದೊಡ್ಡ ಪ್ರಮಾಣದ ಹಾನಿಯಾಗಿದೆ ಎಂದು ತಿಳಿಸಿದ್ದಾರೆ. ರೈಲು ಸಂಚಾರವನ್ನು ಶೀಘ್ರ ಸಾಮಾನ್ಯ ಸ್ಥಿತಿಗೆ ತರಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.





