ಚೀನಾದ ಫುಜಿಯಾನ್ ಪ್ರಾಂತ್ಯದ ಜಿಂಜಿಯಾಂಗ್‌ನಲ್ಲಿ ಇರುವ ಶೂ ಕಾರ್ಖಾನೆಯಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ಕನಿಷ್ಠ 28 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಅಗ್ನಿ ಅವಘಡದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕಾರ್ಖಾನೆಯಿಂದ ಆಕಾಶಮುಟ್ಟುವಷ್ಟು ದಟ್ಟ ಹೊಗೆ ಎದ್ದಿರುವುದು, ಕಟ್ಟಡದ ಮೇಲ್ಚಾವಣಿಯಲ್ಲಿ ಕೆಲವರು ಸಿಲುಕಿಕೊಂಡಿರುವುದು ವಿಡಿಯೋಗಳಲ್ಲಿ ಕಂಡುಬಂದಿದೆ. ಬೆಂಕಿ ಹೊತ್ತಿಕೊಂಡ ಸಮಯದಲ್ಲಿ ಕಾರ್ಖಾನೆಯಲ್ಲಿ ಸುಮಾರು 240 ಮಂದಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ. ಅವರಲ್ಲಿ ಹಲವರು ಸುರಕ್ಷಿತವಾಗಿ ಹೊರಬಂದಿದ್ದರೂ, ಕೆಲವರು ಇನ್ನೂ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಈ ಅವಘಡದ ಬಳಿಕ ತುರ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದ್ದು, 200ಕ್ಕೂ ಹೆಚ್ಚು ಮಂದಿಯನ್ನು ಕಾರ್ಖಾನೆ ಆವರಣದಿಂದ ಸ್ಥಳಾಂತರಿಸಲಾಗಿದೆ. ನೂರಾರು ಅಗ್ನಿಶಾಮಕ ಸಿಬ್ಬಂದಿ, ರಕ್ಷಣಾ ಪಡೆಗಳು ಮತ್ತು ಸ್ಥಳೀಯ ಆಡಳಿತ ಸಿಬ್ಬಂದಿ ರಾತ್ರಿಯಿಡೀ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಆದರೆ ಈವರೆಗೆ ಎಷ್ಟು ಮಂದಿ ಗಾಯಗೊಂಡಿದ್ದಾರೆ ಎಂಬ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ನಾಪತ್ತೆಯಾಗಿರುವವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಅಗ್ನಿ ಅವಘಡದ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ. ಆದರೆ ಘಟನೆಯ ಬಳಿಕ ಕಾರ್ಖಾನೆಗೆ ಸಂಬಂಧಪಟ್ಟ ಕೆಲ ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿ ಆಗಿದೆ. ಕಂಪನಿಯ ಬ್ಯಾಂಕ್ ಖಾತೆಯನ್ನೂ ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ. ಈ ಕ್ರಮಗಳಿಂದ, ಅಧಿಕಾರಿಗಳು ಅವಘಡದ ಹಿಂದಿರುವ ನಿರ್ಲಕ್ಷ್ಯ ಅಥವಾ ಸುರಕ್ಷತಾ ಲೋಪಗಳ ಬಗ್ಗೆ ಗಂಭೀರ ತನಿಖೆ ನಡೆಸುತ್ತಿರುವುದು ಸ್ಪಷ್ಟವಾಗಿದೆ.
ಘಟನೆಗೆ ಪ್ರತಿಕ್ರಿಯಿಸಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಈ ದುರಂತವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವುದಾಗಿ ಹೇಳಿದ್ದಾರೆ. ನಿರ್ಲಕ್ಷ್ಯದಿಂದ ಈ ಸಾವುನೋವುಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ, ಈ ವರ್ಷ ದೇಶದ ಹಲವಾರು ಕೈಗಾರಿಕೆಗಳಲ್ಲಿ ಸಂಭವಿಸಿರುವ ಅಪಘಾತಗಳನ್ನು ಉಲ್ಲೇಖಿಸಿದ ಅವರು, ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಕೈಗಾರಿಕಾ ಘಟಕಗಳಲ್ಲಿ ಕಠಿಣ ಮತ್ತು ಪರಿಣಾಮಕಾರಿ ಸುರಕ್ಷತಾ ವ್ಯವಸ್ಥೆಗಳನ್ನು ಜಾರಿಗೆ ತರಬೇಕು ಎಂದು ಅವರು ಸೂಚಿಸಿದ್ದಾರೆ.
ಫುಜಿಯಾನ್ ಪ್ರಾಂತ್ಯದ ಜಿಂಜಿಯಾಂಗ್ ವಿಶ್ವದ ಕ್ರೀಡಾ ಶೂ ಉತ್ಪಾದನೆಯಲ್ಲಿ ಪ್ರಮುಖ ಕೇಂದ್ರವಾಗಿದೆ. ವಿಶ್ವದ ಒಟ್ಟು ಕ್ರೀಡಾ ಶೂಗಳ ಸುಮಾರು 20 ಶೇಕಡಾ ಉತ್ಪಾದನೆ ಇಲ್ಲಿ ನಡೆಯುತ್ತದೆ ಎಂದು ಅಂದಾಜಿಸಲಾಗಿದೆ. ಇದೇ ಕಾರಣಕ್ಕೆ ಈ ನಗರಕ್ಕೆ ‘ಶೂ ರಾಜಧಾನಿ’ ಎಂಬ ಹೆಸರು ಬಂದಿದೆ.
ಇದಕ್ಕೂ ಮೊದಲು, ಕಳೆದ ನವೆಂಬರ್‌ನಲ್ಲಿ ಹಾಂಗ್ ಕಾಂಗ್‌ನ ಹಲವು ಅಪಾರ್ಟ್‌ಮೆಂಟ್ ಕಟ್ಟಡಗಳಲ್ಲಿ ಸಂಭವಿಸಿದ್ದ ಭೀಕರ ಅಗ್ನಿ ಅವಘಡದಲ್ಲಿ 168 ಮಂದಿ ಮೃತಪಟ್ಟಿದ್ದರು. ಆ ಘಟನೆಯ ಬಳಿಕ ಚೀನಾ ಸರ್ಕಾರ ಬಹುಮಹಡಿ ಕಟ್ಟಡಗಳು ಮತ್ತು ಕೈಗಾರಿಕಾ ಘಟಕಗಳಲ್ಲಿ ಅಗ್ನಿ ಅವಘಡ ತಡೆಗಟ್ಟುವ ವಿಶೇಷ ಅಭಿಯಾನ ಆರಂಭಿಸಿತ್ತು. ಆದರೂ ಇಂತಹ ದುರಂತಗಳು ಮರುಕಳಿಸುತ್ತಿರುವುದು ಚೀನಾದ ಕೈಗಾರಿಕಾ ಸುರಕ್ಷತಾ ವ್ಯವಸ್ಥೆಯ ಮೇಲಿನ ಪ್ರಶ್ನೆಗಳನ್ನು ಮತ್ತೆ ಎಬ್ಬಿಸಿದೆ.





