ಕಲಬುರಗಿ, ಜುಲೈ 7: ರಾಜ್ಯವನ್ನು ಕಾಡುತ್ತಿರುವ ಬರಗಾಲ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ನಿರ್ಲಕ್ಷ್ಯ ತೋರಿಸುವ ಅಧಿಕಾರಿಗಳ ವಿರುದ್ಧ ಯಾವುದೇ ಹಿಂಜರಿಕೆ ಇಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಕಲಬುರಗಿಯಲ್ಲಿ ಮಂಗಳವಾರ ನಡೆದ ಕಲ್ಬುರ್ಗಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಸ್ತಾವಿಕ ಭಾಷಣ ಮಾಡಿದ ಅವರು, ಜನಪರವಾಗಿ ಕೆಲಸ ಮಾಡದ ಅಧಿಕಾರಿಗಳನ್ನು ಸರ್ಕಾರ ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟ ಸಂದೇಶ ನೀಡಿದರು. ಉತ್ತರ ಕರ್ನಾಟಕದ ಮೊದಲ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಕಲಬುರಗಿಯಲ್ಲಿ ಆಯೋಜಿಸಲಾಗಿದ್ದು, ಆಡಳಿತದ ಜವಾಬ್ದಾರಿ, ಅಭಿವೃದ್ಧಿ ಮತ್ತು ಜನಸೇವೆ ಕುರಿತು ಮುಖ್ಯಮಂತ್ರಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
ಸರ್ವರನ್ನೂ ಒಳಗೊಂಡ ಪರಿಶುದ್ಧ ಆಡಳಿತ, ಸಮಗ್ರ ಅಭಿವೃದ್ಧಿ ಮತ್ತು ಕಟ್ಟಕಡೆಯ ವ್ಯಕ್ತಿಗೂ ನಾಗರಿಕ ಹಕ್ಕುಗಳನ್ನು ತಲುಪಿಸುವುದೇ ನಮ್ಮ ಸರ್ಕಾರದ ಪ್ರಮುಖ ಗುರಿಯಾಗಿದೆ. ಈ ಗುರಿ ಸಾಧಿಸಲು ಅಧಿಕಾರಿ ವರ್ಗ ಕ್ರಿಯಾಶೀಲ, ಜನಪರ ಹಾಗೂ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಎಂದು ಸಿಎಂ ಹೇಳಿದರು.
ತಾವು ಬಸವಾದಿ ಶರಣರ ಸಮಾನತೆಯ ತತ್ವದಲ್ಲಿ ನಂಬಿಕೆ ಇಟ್ಟಿರುವುದಾಗಿ ಹೇಳಿದ ಅವರು, ಅದಕ್ಕಾಗಿಯೇ ತಮ್ಮ ಮೊದಲ ಉತ್ತರ ಕರ್ನಾಟಕ ಪ್ರವಾಸವನ್ನು ಬಸವಕಲ್ಯಾಣದಿಂದ ಆರಂಭಿಸಿರುವುದಾಗಿ ತಿಳಿಸಿದರು. “ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿ ಒಂದೇ ವೇಗದಲ್ಲಿ ಸಾಗಬೇಕು. ಜನತೆ ನಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡುವುದು ನಮ್ಮೆಲ್ಲರ ಕರ್ತವ್ಯ” ಎಂದರು.
ಬೀದರ್ ಹಾಗೂ ಕಲ್ಬುರ್ಗಿ ಜಿಲ್ಲೆಯ ಜನತೆ ತೋರಿದ ಬೆಂಬಲ, ಪ್ರೀತಿ ಮತ್ತು ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸಿದ ಮುಖ್ಯಮಂತ್ರಿ, ಜನರ ನಂಬಿಕೆಯೇ ಸರ್ಕಾರದ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿದರು. “ನಮ್ಮನ್ನು ಈ ಸ್ಥಾನದಲ್ಲಿ ಕೂರಿಸಿರುವ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು. ಅದು ಅಧಿಕಾರಿಗಳಿಂದ ಆರಂಭವಾಗಿ ಸರ್ಕಾರದ ಪ್ರತಿಯೊಂದು ಹಂತದಲ್ಲೂ ಪ್ರತಿಬಿಂಬಿಸಬೇಕು” ಎಂದು ಹೇಳಿದರು.
ಆಡಳಿತದ ತಮ್ಮ ಅನುಭವವನ್ನು ಹಂಚಿಕೊಂಡ ಅವರು, ನಾನು ತಾಲೂಕು ಪಂಚಾಯಿತಿ ಅಧ್ಯಕ್ಷನಾಗಿ ಕೆಲಸ ಆರಂಭಿಸಿ ಮುಖ್ಯಮಂತ್ರಿ ಹುದ್ದೆಯವರೆಗೆ ಎಲ್ಲಾ ಹಂತಗಳನ್ನು ದಾಟಿಕೊಂಡು ಬಂದಿದ್ದೇನೆ. ಆಡಳಿತದ ಪ್ರತಿಯೊಂದು ಹಂತದಲ್ಲಿ ಏನು ನಡೆಯುತ್ತದೆ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ನೆಪಗಳನ್ನು ಕೇಳಲು ನಾನು ಸಿದ್ಧನಿಲ್ಲ. ನನಗೆ ಫಲಿತಾಂಶವೇ ಮುಖ್ಯ ಎಂದು ಅಧಿಕಾರಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದರು.
ಅಧಿಕಾರಿಗಳ ಕಾರ್ಯಕ್ಷಮತೆ ಕುರಿತು ಎಚ್ಚರಿಕೆ ನೀಡಿದ ಸಿಎಂ, ನಿಮ್ಮ ಕಾರ್ಯಕ್ಷಮತೆ ಉತ್ತಮವಾಗಿದ್ದರೆ ನಾಡಿನ ಜನತೆಯ ಋಣ ತೀರಿಸಿದಂತಾಗುತ್ತದೆ. ಆದರೆ ಜನಪರವಾಗಿ ಕೆಲಸ ಮಾಡದಿದ್ದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು.
ಮತದಾರರ ಪಟ್ಟಿಯ ಪರಿಷ್ಕರಣೆ ವಿಷಯದಲ್ಲಿಯೂ ಮುಖ್ಯಮಂತ್ರಿ ವಿಶೇಷ ಗಮನ ಹರಿಸಿದರು. ಒಬ್ಬನೇ ಒಬ್ಬ ಅರ್ಹ ಮತದಾರನೂ ತನ್ನ ಮತದಾನದ ಹಕ್ಕು ಕಳೆದುಕೊಳ್ಳಬಾರದು. ಇಲ್ಲಿ ರಾಜಕಾರಣ ಮುಖ್ಯವಲ್ಲ; ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕು ರಕ್ಷಿಸುವುದು ಸರ್ಕಾರದ ಜವಾಬ್ದಾರಿ. ಬಿಎಲ್ಒಗಳು ಪ್ರತಿಯೊಂದು ಮನೆಗೆ ಕನಿಷ್ಠ ಮೂರು ಬಾರಿ ಭೇಟಿ ನೀಡಿ ಅರ್ಹ ಮತದಾರರ ಹೆಸರನ್ನು ಪರಿಶೀಲಿಸಬೇಕು. ಈ ವಿಚಾರದಲ್ಲಿ ಯಾವುದೇ ರಾಜಿ ಪ್ರಶ್ನೆಯೇ ಇಲ್ಲ ಎಂದು ಸೂಚನೆ ನೀಡಿದರು.
ರಾಜ್ಯದ ಅಭಿವೃದ್ಧಿ ಮತ್ತು ನೀರಿನ ನಿರ್ವಹಣೆ ಕುರಿತು ಮಾತನಾಡಿದ ಮುಖ್ಯಮಂತ್ರಿ, ದೇಶಾದ್ಯಂತ ಮಳೆಯ ಅಭಾವದ ಬಗ್ಗೆ ಆತಂಕ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ ಕರ್ನಾಟಕದ ಪರಿಸ್ಥಿತಿ ಸಮಾಧಾನಕರವಾಗಿದೆ ಎಂದರು. ಅಂತರರಾಜ್ಯ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರೊಂದಿಗೆ ಐತಿಹಾಸಿಕ ಮಟ್ಟದ ಚರ್ಚೆ ನಡೆಸಿರುವುದಾಗಿ ತಿಳಿಸಿದರು.
ಕೃಷ್ಣ, ಕಾವೇರಿ ಮತ್ತು ಗೋದಾವರಿ ನದಿಗಳ ಜೋಡಣೆ ಯೋಜನೆಯನ್ನು ಸುಮಾರು ಒಂದು ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ಮುಂದುವರಿಸುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರವೂ ಸಕಾರಾತ್ಮಕ ಸ್ಪಂದನೆ ನೀಡಿದೆ ಎಂದು ಅವರು ಹೇಳಿದರು. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ರಾಜ್ಯದ ಜನರ ಹಿತಾಸಕ್ತಿ ರಕ್ಷಣೆ ನಮ್ಮ ಆದ್ಯತೆ. ಅದಕ್ಕಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಲು ತೀರ್ಮಾನಿಸಿದ್ದೇವೆ ಎಂದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಆರಂಭಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಸ್ಪಷ್ಟನೆ ನೀಡಿದ ಮುಖ್ಯಮಂತ್ರಿ, ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದ ಅವಧಿಯಲ್ಲಿ ಆರಂಭಗೊಂಡಿರುವ ಎಲ್ಲಾ ಅಭಿವೃದ್ಧಿ ಕಾಮಗಾರಿಗಳು ಯಥಾವತ್ತಾಗಿ ಮುಂದುವರಿಯಲಿವೆ ಎಂದು ಹೇಳಿದರು. ಜೊತೆಗೆ, ಅಭಿವೃದ್ಧಿಯ ವೇಗ ಹೆಚ್ಚಿಸುವುದರೊಂದಿಗೆ ಆಡಳಿತದಲ್ಲಿ ಇನ್ನಷ್ಟು ಪಾರದರ್ಶಕತೆ, ಕಾರ್ಯಕ್ಷಮತೆ ಮತ್ತು ಜನಕೇಂದ್ರಿತ ದೃಷ್ಟಿಕೋನಕ್ಕೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.





