ಅಯೋಧ್ಯೆ: ರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಹತ್ವದ ತೀರ್ಮಾನ ಕೈಗೊಂಡಿದೆ. ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಡಾ. ಅನಿಲ್ ಮಿಶ್ರಾ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ಈ ರಾಜೀನಾಮೆಯನ್ನು ಸುಮಾರು 2 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅಂಗೀಕರಿಸಲಾಯಿತು. ಚಂಪತ್ ರಾಯ್ ಅವರ ಸ್ಥಾನಕ್ಕೆ ಟ್ರಸ್ಟ್‌ನ ಹಿರಿಯ ಸದಸ್ಯ ಕೃಷ್ಣ ಮೋಹನ್ ಅವರನ್ನು ಮಧ್ಯಂತರ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಯಿತು.
ರಾಮ ಮಂದಿರದ ಆವರಣದಲ್ಲಿರುವ ಅತಿಥಿಗೃಹದಲ್ಲಿ ನಡೆದ ಈ ಮಹತ್ವದ ಸಭೆಯ ನಂತರ ಟ್ರಸ್ಟ್‌ನ ಖಜಾಂಚಿ ಸ್ವಾಮಿ ಗೋವಿಂದ ದೇವ್ ಗಿರಿ ಮಹಾರಾಜ್ ಸುದ್ದಿಗಾರರೊಂದಿಗೆ ಮಾತನಾಡಿ, “ತಪ್ಪಿತಸ್ಥರಿಗೆ ಶಿಕ್ಷೆಯಾಗುವುದು ಖಚಿತ” ಎಂದು ಸ್ಪಷ್ಟಪಡಿಸಿದರು. ಅವರು ಮಾಧ್ಯಮಗಳಿಗೆ ತಿಳಿಸಿದ ಪ್ರಕಾರ, ಎಸ್ಐಟಿಯ ಅಂತಿಮ ವರದಿ ಬಂದ ನಂತರ ಜುಲೈ 22ರಂದು ಮತ್ತೊಂದು ಸಭೆ ಕರೆಯಲಾಗುವುದು. “ನಮ್ಮ ಟ್ರಸ್ಟ್ ಯಾವುದೇ ಲೋಪವಿಲ್ಲದೆ ಪಾರದರ್ಶಕ ಆಡಳಿತ ನೀಡಲು ಬದ್ಧವಾಗಿದೆ. ಇದಕ್ಕಾಗಿ ನಿರ್ದಿಷ್ಟ ಅಧಿಕಾರಿಗಳನ್ನು ನೇಮಿಸಲು ನಾವು ಸಣ್ಣ ಸಮಿತಿಯೊಂದನ್ನು ರಚಿಸಿದ್ದೇವೆ. ಕಳ್ಳತನವು ಕಳ್ಳತನವೇ. ಈ ಬಗ್ಗೆ ಎಸ್ಐಟಿ ತನಿಖೆ ನಡೆಸುತ್ತಿದ್ದು, ಅದು ಆಡಳಿತದ ಜವಾಬ್ದಾರಿಯಾಗಿದೆ” ಎಂದು ಗಿರಿ ಮಹಾರಾಜ್ ಹೇಳಿದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡದ (ಎಸ್ಐಟಿ) ತನಿಖೆಯ ಮೇಲೆ ರಾಮ ಮಂದಿರ ಟ್ರಸ್ಟ್ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದೆ. ಈ ವಿವಾದದ ಕೇಂದ್ರಬಿಂದುವಾಗಿರುವ ಚಂಪತ್ ರಾಯ್ ಅವರ ಆಪ್ತ ಸಹಾಯಕ ಟಿನ್ನು ಯಾದವ್ ಸೇರಿದಂತೆ 8 ಜನರನ್ನು ಎಸ್ಐಟಿ ಈಗಾಗಲೇ ಬಂಧಿಸಿದೆ. ಚಂಪತ್ ರಾಯ್ ಮತ್ತು ಮಿಶ್ರಾ ಅವರನ್ನು ಎಸ್ಐಟಿ ಹಾಗೂ ಅಯೋಧ್ಯೆ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಇನ್ನೂ ಅವರ ವಿರುದ್ಧ ಯಾವುದೇ ಎಫ್ಐಆರ್ ದಾಖಲಾಗಿಲ್ಲ.
ಟ್ರಸ್ಟ್‌ನ ಈ ಪ್ರಮುಖ ನಿರ್ಧಾರವು ದೇಣಿಗೆ ದುರ್ಬಳಕೆ ಪ್ರಕರಣದ ಹಿನ್ನೆಲೆ ಆಡಳಿತದಲ್ಲಿ ಸಮಗ್ರ ಪಾರದರ್ಶಕತೆ ತರುವುದಕ್ಕೆ ನಾಂದಿಯಾಗಿದೆ. ವಿಶ್ವ ಹಿಂದೂ ಪರಿಷತ್‌ನ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಜರಂಗ್ ಬಾಗ್ರಾ ಅವರನ್ನು ಟ್ರಸ್ಟ್‌ನಲ್ಲಿ ಪ್ರಮುಖ ಹುದ್ದೆಗೆ ನೇಮಿಸಲು ಸಭೆ ಚರ್ಚಿಸಿದೆ ಎಂದು ಮೂಲಗಳು ತಿಳಿಸಿವೆ. ಅಂತಿಮವಾಗಿ ಚಂಪತ್ ರಾಯ್ ಅವರ ರಾಜೀನಾಮೆ ಅಂಗೀಕರಿಸಲಾಯಿತು.
ಯಾರು ಈ ಕೃಷ್ಣ ಮೋಹನ್?
ಕೃಷ್ಣ ಮೋಹನ್ ಅವರು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ದೀರ್ಘಕಾಲದ ಹಿರಿಯ ಸದಸ್ಯ ಮತ್ತು ನಂಬಿಕಸ್ಥ ಪದಾಧಿಕಾರಿಯಾಗಿದ್ದಾರೆ. ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮತ್ತು ವಿಶ್ವ ಹಿಂದೂ ಪರಿಷತ್ (VHP) ಸಂಘಟನೆಗಳೊಂದಿಗೆ ದಶಕಗಳಿಂದ ನಿಕಟ ಸಂಬಂಧ ಹೊಂದಿದ್ದಾರೆ. ಕೃಷ್ಣ ಮೋಹನ್ ಅವರು ವಿಶ್ವ ಹಿಂದೂ ಪರಿಷತ್‌ನ ಹಿರಿಯ ಪದಾಧಿಕಾರಿಯಾಗಿದ್ದು, ಅಯೋಧ್ಯೆಯ ರಾಮ ಮಂದಿರ ಆಂದೋಲನದ ಸಮಯದಿಂದಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ರಾಮ ಮಂದಿರ ಟ್ರಸ್ಟ್‌ನ ಆಂತರಿಕ ವ್ಯವಹಾರಗಳು, ಹಣಕಾಸು ನಿರ್ವಹಣೆ ಮತ್ತು ಮಂದಿರದ ದೈನಂದಿನ ಚಟುವಟಿಕೆಗಳ ಉಸ್ತುವಾರಿಯಲ್ಲಿ ಇವರು ಹಿಂದಿನಿಂದಲೂ ಪ್ರಮುಖ ಪಾತ್ರ ವಹಿಸುತ್ತಿದ್ದರು. ಆಡಳಿತಾತ್ಮಕವಾಗಿ ಇವರಿಗಿರುವ ಹಿಡಿತ ಮತ್ತು ಸ್ವಚ್ಛ ಇಮೇಜ್ ಕಾರಣದಿಂದಾಗಿ ಇವರನ್ನು ರಾಮ ಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಆಯ್ಕೆ ಮಾಡಲಾಗಿದೆ.





