ಬೆಂಗಳೂರು (ಜುಲೈ 5): ನಗರದಲ್ಲಿ ಮಳೆಯ ಕೊರತೆಯಿಂದ ಕೆಲ ಭಾಗಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಂರಕ್ಷಣೆಗೆ ಬೆಂಗಳೂರು ಜಲ ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕಟ್ಟುನಿಟ್ಟಿನ ಕ್ರಮಗಳನ್ನು ಘೋಷಿಸಿದೆ. BWSSB ಕಾಯ್ದೆ 1964ರ ಕಲಂ 33 ಮತ್ತು 34ರ ಅಡಿಯಲ್ಲಿ ಮೂರು ಪ್ರಮುಖ ನಿಷೇಧಾತ್ಮಕ ಹಾಗೂ ನಿಯಂತ್ರಣ ಆದೇಶಗಳನ್ನು ಹೊರಡಿಸಲಾಗಿದ್ದು, ಕುಡಿಯುವ ನೀರಿನ ಅನಾವಶ್ಯಕ ಬಳಕೆಯನ್ನು ತಕ್ಷಣದಿಂದಲೇ ನಿಯಂತ್ರಿಸಲು ಸೂಚಿಸಲಾಗಿದೆ.
ಈ ಹೊಸ ಆದೇಶಗಳ ಪ್ರಕಾರ, ಈಜುಕೊಳಗಳನ್ನು ತುಂಬಿಸಲು ಕುಡಿಯುವ ನೀರನ್ನು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೆ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಿಗೆ ಕ್ರೀಡಾಪಟುಗಳ ತರಬೇತಿಗಾಗಿ ಬಳಸುವ ಈಜುಕೊಳಗಳಿಗೆ ಮಂಡಳಿಯಿಂದ ಪೂರ್ವಾನುಮತಿ ಪಡೆದಿದ್ದರೆ ಮಾತ್ರ ವಿನಾಯಿತಿ ದೊರೆಯಲಿದೆ. ಇದರ ಜೊತೆಗೆ ವಾಹನ ತೊಳೆಯುವುದು, ಕಟ್ಟಡ ನಿರ್ಮಾಣ ಕಾಮಗಾರಿಗಳು, ಕಾರಂಜಿಗಳಂತಹ ಅಲಂಕಾರಿಕ ಜಲಸೌಲಭ್ಯಗಳು, ಸಿನಿಮಾ ಮಂದಿರಗಳು ಮತ್ತು ಮಾಲ್ಗಳಲ್ಲಿ ಕುಡಿಯುವ ಉದ್ದೇಶವಲ್ಲದ ನೀರಿನ ಬಳಕೆ, ರಸ್ತೆ ನಿರ್ಮಾಣ ಹಾಗೂ ರಸ್ತೆ ಸ್ವಚ್ಛತಾ ಕಾರ್ಯಗಳಿಗೆ ಕುಡಿಯುವ ನೀರನ್ನು ಬಳಸುವುದಕ್ಕೂ ನಿಷೇಧ ಹೇರಲಾಗಿದೆ.
ಅದೇ ರೀತಿ ಅಪಾರ್ಟ್ಮೆಂಟ್ಗಳು, ಮಾಲ್ಗಳು, ವಾಣಿಜ್ಯ ಸಂಕೀರ್ಣಗಳು, ಸರ್ಕಾರಿ ಕಚೇರಿಗಳು, ಹೋಟೆಲ್ಗಳು, ರೆಸ್ಟೋರೆಂಟ್ಗಳು ಹಾಗೂ ಧಾರ್ಮಿಕ ಸ್ಥಳಗಳನ್ನು ಒಳಗೊಂಡಂತೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಉದ್ದೇಶಕ್ಕಾಗಿ ಬಳಸುವ ನಳಿಕೆಗಳು ಮತ್ತು ನೀರಿನ ಔಟ್ಲೆಟ್ಗಳಿಗೆ ಫ್ಲೋ ರಿಸ್ಟ್ರಿಕ್ಟರ್ಗಳು ಅಥವಾ ಏರೇಟರ್ಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಕ್ರಮಗಳನ್ನು ಜುಲೈ 31ರೊಳಗೆ ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು BWSSB ಸೂಚಿಸಿದೆ.
ಬೆಂಗಳೂರು ನಗರದಲ್ಲಿ ಶಾಶ್ವತ ಮತ್ತು ತಾತ್ಕಾಲಿಕ ನಿವಾಸಿಗಳನ್ನು ಸೇರಿಸಿ ಸುಮಾರು 1.4 ಕೋಟಿ ಜನಸಂಖ್ಯೆ ಇರುವುದರಿಂದ ಲಭ್ಯವಿರುವ ನೀರನ್ನು ಸಮಾನವಾಗಿ ಹಾಗೂ ವಿವೇಕ ಪೂರ್ವಕವಾಗಿ ಬಳಸುವುದು ಅತ್ಯಗತ್ಯವಾಗಿದೆ ಎಂದು ಮಂಡಳಿ ಸ್ಪಷ್ಟಪಡಿಸಿದೆ. ಕಡಿಮೆ ಮಳೆಯ ಪರಿಣಾಮವಾಗಿ ಕೆಲವು ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ನೀರಿನ ವ್ಯರ್ಥ ಬಳಕೆಯನ್ನು ತಡೆಯುವ ಉದ್ದೇಶದಿಂದಲೇ ಈ ನಿಯಂತ್ರಣ ಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳುರು ನಗರಕ್ಕೆ ಲಭ್ಯವಿರುವ ನೀರಿನ ಪ್ರಮಾಣವೂ ಆತಂಕಕಾರಿ ಮಟ್ಟಕ್ಕೆ ಇಳಿದಿದೆ. BWSSB ಅಧ್ಯಕ್ಷೆ ಮಂಜುಳಾ ಎನ್. ಅವರ ಪ್ರಕಾರ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಜಲಾಶಯಗಳಲ್ಲಿ ಕೇವಲ 23 ಶೇಕಡಾ ನೀರು ಮಾತ್ರ ಸಂಗ್ರಹವಾಗಿದೆ. ಒಟ್ಟು 895.6 ಟಿಎಂಸಿ ಸಂಗ್ರಹ ಸಾಮರ್ಥ್ಯದಲ್ಲಿ ಸದ್ಯ 203 ಟಿಎಂಸಿ ನೀರು ಮಾತ್ರ ಲಭ್ಯವಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ 114.5 ಟಿಎಂಸಿ ಸಾಮರ್ಥ್ಯದ ಬದಲು ಕೇವಲ 36 ಟಿಎಂಸಿ ನೀರು ಸಂಗ್ರಹವಾಗಿದೆ. ಹೀಗಾಗಿ, ನಗರದಲ್ಲಿ ನೀರಿನ ಸಮರ್ಪಕ ಬಳಕೆ ಹಾಗೂ ಸಂರಕ್ಷಣೆ ಈಗ ಅತ್ಯಂತ ಅವಶ್ಯಕವಾಗಿದೆ.





