`ಒರಟ’, `ಕೋರ’ದಂಥಾ ಸಿನಿಮಾಗಳ ಮೂಲಕ ಭಿನ್ನ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಒರಟ ಶ್ರೀ ನಿರ್ದೇಶನದ ಬಹುನಿರೀಕ್ಷಿತ ಚಿತ್ರ `ಶಬರಿ’. ಇದೀಗ ಪತ್ರಿಕಾಗೋಷ್ಠಿಯ ಮೂಲಕ ಈ ಸಿನಿಮಾದ ಟೀಸರ್ ಅನ್ನು ಲಹರಿ ವೇಲು ಬಿಡುಗಡೆಗೊಳಿಸಿದ್ದಾರೆ. ಒರಟ ಶ್ರೀ ಸೇರಿದಂತೆ ಚಿತ್ರತಂಡ ಈ ಸಂದರ್ಭದಲ್ಲಿ ಹಾಜರಿದ್ದು ಶಬರಿಯ ಬಗೆಗಿನ ಒಂದಷ್ಟು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಈ ಟೀಸರ್ ಬಿಡುಗಡೆಯ ವೇದಿಕೆಯಲ್ಲಿ ಲಹರಿ ಸಂಸ್ಥೆಯ ಮುಖ್ಯಸ್ಥರಾದ ಲಹರಿ ವೇಲು, ರಾಷ್ಟ್ರ ಪ್ರಶಸ್ತಿ ವಿಜೇತ ತಲೆದಂಡ ಚಿತ್ರದ ನಿರ್ದೇಶಕರಾದ ಪ್ರವೀಣ್ ಕೃಪಾಕರ್ ಮತ್ತು ಕಾಮನ್ ಮ್ಯಾನ್ ಚಿತ್ರದ ನಿರ್ಮಾಪಕ ನರಸಿಂಹ ಮೂರ್ತಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಶಬರಿಯ ಟೀಸರ್ ಬಿಡುಗಡೆ ಮಾಡಿ ಮಾತನಾಡಿದ ಲಹರಿ ವೇಲು ‘ಒರಟ ಶ್ರೀ ಅತೀವ ಸಿನಿಮಾ ಪ್ರೇಮ ಹೊಂದಿರುವ ನಿರ್ದೇಶಕ. ಅವರು ಈ ಚಿತ್ರವನ್ನು ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ. ಇದರ ಹಾಡುಗಳೂ ಕೂಡಾ ಚೆನ್ನಾಗಿರೋದರಿಂದಲೇ ಲಹರಿ ಸಂಸ್ಥೆ ಆಡಿಯೋ ಹಕ್ಕುಗಳನ್ನು ಖರೀದಿಸಿದೆ’ ಅನ್ನುತ್ತಲೇ ಚಿತ್ರತಂಡಕ್ಕೆರ ಶುಭ ಕೋರಿದರು. ನಿರ್ದೇಶಕ ಒರಟ ಶ್ರೀ ಆರಂಭದಲ್ಲಿಯೇ ಇಂತಿಷ್ಟು ಬಜೆಟ್ಟಿನಲ್ಲಿ ಸಿನಿಮಾ ಮುಗಿಸೋದಾಗಿ ಅಗ್ರಿಮೆಂಟ್ ಮಾಡಿಕೊಂಡಿದ್ದರಂತೆ. ಅದಕ್ಕೆ ತಕ್ಕುದಾಗಿ ಶಬರಿಯನ್ನು ರೂಪುಗೊಳಿಸಿರೋದು ವಿಶೇಷ.





