ನವದೆಹಲಿ (ಜೂನ್ 29): ಸುಮಾರು 128 ವರ್ಷಗಳ ಬಳಿಕ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್‌ಗೆ ಮತ್ತೆ ಸ್ಥಾನ ಸಿಕ್ಕಿದೆ. 2028ರಲ್ಲಿ ನಡೆಯಲಿರುವ ಲಾಸ್ ಏಂಜಲೀಸ್ ಒಲಿಂಪಿಕ್ಸ್ ನಲ್ಲಿ ಟಿ20 ಮಾದರಿಯಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲಾಗುತ್ತಿದ್ದು, ಇದೀಗ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಹಾಗೂ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) ಜಂಟಿಯಾಗಿ ಅರ್ಹತಾ ನಿಯಮಾವಳಿಯನ್ನು ಪ್ರಕಟಿಸಿವೆ.
ಹೊಸ ನಿಯಮಗಳ ಪ್ರಕಾರ, ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ತಲಾ ಆರು ತಂಡಗಳು ಮಾತ್ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿವೆ. ಕ್ರಿಕೆಟ್ ಪಂದ್ಯಗಳು 2028ರ ಜುಲೈ 22ರಿಂದ 29ರವರೆಗೆ ನಡೆಯಲಿದ್ದು, ಜುಲೈ 29ರಂದು ಫೈನಲ್ ಪಂದ್ಯ ಆಯೋಜಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಪುರುಷರ ವಿಭಾಗದಲ್ಲಿ ನಾಲ್ಕು ಖಂಡಗಳಿಂದ ಅಗ್ರ ಶ್ರೇಯಾಂಕದ ತಲಾ ಒಂದು ತಂಡಕ್ಕೆ ನೇರ ಅರ್ಹತೆ ಸಿಗಲಿದೆ. 2026ರ ಡಿಸೆಂಬರ್ 31ರ ಐಸಿಸಿ ಟಿ20 ಶ್ರೇಯಾಂಕ ಆಧಾರವಾಗಿ ಏಷ್ಯಾ, ಯುರೋಪ್, ಆಫ್ರಿಕಾ ಹಾಗೂ ಓಷಿಯಾನಿಯಾದ ಅತ್ಯುತ್ತಮ ತಂಡಗಳು ನೇರವಾಗಿ ಒಲಿಂಪಿಕ್ಸ್‌ಗೆ ಪ್ರವೇಶ ಪಡೆಯಲಿವೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ (ಗ್ರೇಟ್ ಬ್ರಿಟನ್ ಹೆಸರಿನಲ್ಲಿ) ಈ ಅವಕಾಶ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಆತಿಥೇಯ ರಾಷ್ಟ್ರವಾದ ಅಮೆರಿಕಕ್ಕೂ ಇದರಲ್ಲಿ ವಿಶೇಷ ಅವಕಾಶ ನೀಡಲಾಗಿದೆ. ಆದರೆ ಜೂನ್ 30ರಿಂದ ಡಿಸೆಂಬರ್ 31, 2026ರೊಳಗೆ ಐಸಿಸಿ ಟಿ20 ಶ್ರೇಯಾಂಕದಲ್ಲಿ ಅಗ್ರ 15 ತಂಡಗಳೊಳಗೆ ಸ್ಥಾನ ಪಡೆಯುವುದು ಕಡ್ಡಾಯ. ಈ ಷರತ್ತು ಪೂರೈಸದಿದ್ದರೆ ಆತಿಥೇಯ ಕೋಟಾ ಅನ್ವಯಿಸುವುದಿಲ್ಲ ಮತ್ತು ಆ ಸ್ಥಾನವನ್ನು ಮುಂದಿನ ಅರ್ಹ ತಂಡಕ್ಕೆ ನೀಡಲಾಗುತ್ತದೆ.
ಉಳಿದ ಒಂದು ಸ್ಥಾನಕ್ಕಾಗಿ 2027ರಲ್ಲಿ ಜಾಗತಿಕ ಅರ್ಹತಾ ಟೂರ್ನಿ ಆಯೋಜಿಸಲಾಗುತ್ತದೆ. ಈಗಾಗಲೇ ಅರ್ಹತೆ ಪಡೆದ ನಾಲ್ಕು ತಂಡಗಳನ್ನು ಹೊರತುಪಡಿಸಿ ಉಳಿದ ತಂಡಗಳು ಈ ಟೂರ್ನಿಯಲ್ಲಿ ಸ್ಪರ್ಧಿಸಲಿದ್ದು, ವಿಜೇತ ತಂಡ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲಿದೆ.
ವೆಸ್ಟ್ ಇಂಡೀಸ್ ತಂಡಕ್ಕೆ ಮಾತ್ರ ವಿಶೇಷ ನಿಯಮ ರೂಪಿಸಲಾಗಿದೆ. ವೆಸ್ಟ್ ಇಂಡೀಸ್ ಒಂದೇ ದೇಶವಲ್ಲದೇ ಹಲವು ಕೆರಿಬಿಯನ್ ರಾಷ್ಟ್ರಗಳ ಒಕ್ಕೂಟವಾಗಿರುವುದರಿಂದ, ಒಲಿಂಪಿಕ್ಸ್‌ನಲ್ಲಿ ವೆಸ್ಟ್ ಇಂಡೀಸ್ ಹೆಸರಿನಲ್ಲಿ ಆಡಲು ಅವಕಾಶವಿಲ್ಲ. ಒಂದು ವೇಳೆ ವೆಸ್ಟ್ ಇಂಡೀಸ್ ಅರ್ಹ ಸ್ಥಾನದಲ್ಲಿದ್ದರೆ, ಅದರ ಸದಸ್ಯ ರಾಷ್ಟ್ರಗಳ ನಡುವೆ ಪ್ರತ್ಯೇಕ ಅರ್ಹತಾ ಟೂರ್ನಿ ನಡೆಸಿ, ವಿಜೇತ ರಾಷ್ಟ್ರವನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ.
ಮಹಿಳಾ ವಿಭಾಗದಲ್ಲಿಯೂ ನಾಲ್ಕು ಖಂಡಗಳಿಂದ ಅತ್ಯುತ್ತಮ ತಂಡಗಳು ನೇರ ಪ್ರವೇಶ ಪಡೆಯಲಿವೆ. 2026ರ ಮಹಿಳಾ ಟಿ20 ವಿಶ್ವಕಪ್ ಫಲಿತಾಂಶ ಆಧಾರವಾಗಿ ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಹಾಗೂ ಗ್ರೇಟ್ ಬ್ರಿಟನ್ ತಂಡಗಳು ನೇರ ಅರ್ಹತೆ ಪಡೆಯುವ ನಿರೀಕ್ಷೆಯಿದೆ. ಉಳಿದ ಸ್ಥಾನಗಳನ್ನು ಅರ್ಹತಾ ಟೂರ್ನಿಗಳ ಮೂಲಕ ಭರ್ತಿ ಮಾಡಲಾಗುತ್ತದೆ.





