ಬೆಳಗಾವಿ: ಸಚಿವ ಸತೀಶ್ ಜಾರಕಿಹೊಳಿ ಅವರ ಬಾಮೈದ ಹಾಗೂ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ್ದ ಸುದೀರ್ಘ ದಾಳಿ ಕೊನೆಗೂ ಅಂತ್ಯಗೊಂಡಿದೆ. ಸುಮಾರು 24 ಗಂಟೆಗಳ ಕಾಲ ನಿರಂತರವಾಗಿ ನಡೆದ ಶೋಧ ಕಾರ್ಯಾಚರಣೆಯ ಬಳಿಕ ಇಡಿ ಅಧಿಕಾರಿಗಳು ಬೆಳಗಾವಿಯಿಂದ ಬೆಂಗಳೂರಿನತ್ತ ತೆರಳಿದ್ದಾರೆ.
ಅಬಕಾರಿ ಇಲಾಖೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಇಡಿ, ಬುಧವಾರ ಬೆಳಗಾವಿ ನಗರದ ಟಿವಿ ಸೆಂಟರ್ ಪ್ರದೇಶದಲ್ಲಿರುವ ಮಂಜುನಾಥ್ ಅವರ ಮುಖ್ಯ ನಿವಾಸ ಸೇರಿದಂತೆ ಜಿಲ್ಲೆಯ ಒಟ್ಟು ಆರು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿತ್ತು. ರಾಜ್ಯದ ಬೆಂಗಳೂರು, ಮೈಸೂರು ಸೇರಿದಂತೆ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಕೂಡ ಶೋಧ ಕಾರ್ಯಾಚರಣೆ ನಡೆದಿರುವುದಾಗಿ ತಿಳಿದುಬಂದಿದೆ.
ದಾಳಿಯ ವೇಳೆ ವಶಪಡಿಸಿಕೊಳ್ಳಲಾದ ಪ್ರಮುಖ ದಾಖಲೆಗಳು ಮತ್ತು ಮಾಹಿತಿಗಳೊಂದಿಗೆ ಇಡಿ ಅಧಿಕಾರಿಗಳ ತಂಡವು ಬೆಂಗಳೂರಿಗೆ ತೆರಳಿದ್ದು, ಸಂಪೂರ್ಣ ತನಿಖಾ ವರದಿಯನ್ನು ಇಡಿ ನಿರ್ದೇಶಕರಿಗೆ ಸಲ್ಲಿಸಲು ಸಿದ್ಧತೆ ನಡೆಸಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜುನಾಥ್ ಅವರ ಆಪ್ತರೆಂದು ಹೇಳಲಾಗುತ್ತಿರುವ ಗೋವಾ ಮೂಲದ ‘ಲೋಬೋ’ ಎಂಬ ವ್ಯಕ್ತಿಗಾಗಿ ಇಡಿ ಅಧಿಕಾರಿಗಳು ಬೆಳಗಾವಿಯಲ್ಲಿ ಹುಡುಕಾಟ ನಡೆಸಿದ್ದರು. ಆದರೆ ಅವರು ಪತ್ತೆಯಾಗದ ಹಿನ್ನೆಲೆಯಲ್ಲಿ, ಅವರನ್ನು ವಶಕ್ಕೆ ಪಡೆಯಲು ಇಡಿಯ ಎರಡು ವಿಶೇಷ ತಂಡಗಳನ್ನು ಗೋವಾಗೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಂಜುನಾಥ್ ವಿರುದ್ಧದ ಆರೋಪಗಳೇನು?
ವೈ. ಮಂಜುನಾಥ್ ಅವರ ವಿರುದ್ಧ ಹಲವು ಗಂಭೀರ ಆರೋಪಗಳು ಕೇಳಿಬಂದಿವೆ. ಸರ್ಕಾರಿ ಸೇವೆಯಲ್ಲಿದ್ದುಕೊಂಡೇ ಆದಾಯಕ್ಕಿಂತ ಅಧಿಕ ಪ್ರಮಾಣದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಸಂಪಾದಿಸಿರುವ ಆರೋಪ ಅವರ ಮೇಲಿದೆ. ಜೊತೆಗೆ ಅಬಕಾರಿ ಇಲಾಖೆಯ ಉನ್ನತ ಹುದ್ದೆಯಲ್ಲಿದ್ದಾಗ ಬೇರೆಯವರ ಹೆಸರಿನಲ್ಲಿ ನೂರಕ್ಕೂ ಹೆಚ್ಚು ಬಾರ್ ಲೈಸೆನ್ಸ್‌ಗಳನ್ನು ಹೊಂದಿರುವ ಆರೋಪವೂ ಕೇಳಿಬಂದಿದೆ.
ಇದರ ಜೊತೆಗೆ ದೇಶದ ಗಡಿ ದಾಟಿದ ಆರ್ಥಿಕ ವ್ಯವಹಾರಗಳು, ಹವಾಲಾ ಮಾರ್ಗಗಳ ಮೂಲಕ ಕೋಟ್ಯಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ನಡೆದಿರುವ ಶಂಕೆಯ ಹಿನ್ನೆಲೆಯಲ್ಲಿ ಇಡಿ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.
ಜೈಲು ಸೇರಿದ್ದ ಮಂಜುನಾಥ್
ವೈ. ಮಂಜುನಾಥ್ ಅವರ ಸುತ್ತ ವಿವಾದಗಳು ಹೊಸದೇನಲ್ಲ. 2009ರಿಂದ 2013ರವರೆಗೆ ಮೈಸೂರಿನಲ್ಲಿ DC ಆಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಅವರನ್ನು ಬಂಧಿಸಿದ್ದರು. ಈ ಪ್ರಕರಣದ ಹಿನ್ನೆಲೆಯಲ್ಲಿ ಅವರು ಸುಮಾರು 15 ದಿನಗಳ ಕಾಲ ಮೈಸೂರು ಕೇಂದ್ರ ಕಾರಾಗೃಹದಲ್ಲಿದ್ದರು. ಜೈಲಿನಿಂದ ಬಿಡುಗಡೆಯಾದ ನಂತರ ನಡೆದ ಘಟನೆ ರಾಜ್ಯಾದ್ಯಂತ ಗಮನ ಸೆಳೆದಿತ್ತು. ಅವರ ಅಭಿಮಾನಿಗಳು ಅವರನ್ನು ಕಾರಾಗೃಹದಿಂದ ಸುಮಾರು 2 ಕಿಲೋಮೀಟರ್ ದೂರದವರೆಗೆ ಹೆಗಲ ಮೇಲೆ ಹೊತ್ತು ಮೆರವಣಿಗೆ ನಡೆಸಿದ್ದರು. ಈ ಘಟನೆ ಆಗ ಇಡೀ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಹಾಗೂ ಸುದ್ದಿಗೆ ಗ್ರಾಸವಾಗಿತ್ತು.





