ನಟ ವಿನೋದ್ ಪ್ರಭಾಕರ್ ಅವರ ಆರೋಗ್ಯದಲ್ಲಿ ಉಂಟಾದ ಏರುಪೇರಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ನಿರ್ದೇಶಕ ಕೆ.ಎಂ. ಚೈತನ್ಯ ತಿಳಿಸಿದ್ದಾರೆ.
‘ಬಲರಾಮನ ದಿನಗಳು’ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದ ವಿನೋದ್ ಪ್ರಭಾಕರ್ ಅವರು ಅತಿಯಾದ ಕೆಲಸದ ಒತ್ತಡ ಹಾಗೂ ನಿದ್ದೆ ಕೊರತೆಯಿಂದ ಲೋ ಬಿಪಿ ಸಮಸ್ಯೆಗೆ ಒಳಗಾದರು. ಶನಿವಾರ ಬೆಳಿಗ್ಗೆ ಆರೋಗ್ಯದಲ್ಲಿ ಏರುಪೇರು ಕಂಡುಬಂದ ತಕ್ಷಣವೇ ಅವರು ತಮ್ಮ ಪತ್ನಿಯೊಂದಿಗೆ ಬೆಂಗಳೂರಿನ ನಾಗರಭಾವಿಯ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲು ದಾಖಲಾದರು.
ವೈದ್ಯರ ಸಲಹೆಯಂತೆ ಅಗತ್ಯವಾದ ಎಲ್ಲಾ ಆರೋಗ್ಯ ಪರೀಕ್ಷೆಗಳು ನಡೆಸಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಅವರು ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಇಂದು ಆಸ್ಪತ್ರೆಯಿಂದ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ವಿನೋದ್ ಪ್ರಭಾಕರ್ ಅವರ ಆರೋಗ್ಯ ಬಗ್ಗೆ ನಿರ್ದೇಶಕ ಕೆ.ಎಂ. ಚೈತನ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಮ್ಮ ಹೀರೋ ವಿನೋದ್ ಪ್ರಭಾಕರ್ ಅವರು ‘ಬಲರಾಮನ ದಿನಗಳು’ ಚಿತ್ರದ ಪ್ರಚಾರದಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸುತ್ತಿದ್ದರು. ನಿರಂತರ ಕೆಲಸ ಮತ್ತು ನಿದ್ರೆ ಕೊರತೆಯಿಂದ ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆ ಉಂಟಾಗಿದೆ. ಆದರೆ ಈಗ ಚಿಕಿತ್ಸೆ ನಂತರ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೆರಡು–ಮೂರು ದಿನಗಳಲ್ಲಿ ಮತ್ತೆ ಅದೇ ಉತ್ಸಾಹದಿಂದ ಪ್ರಚಾರ ಕಾರ್ಯಕ್ಕೆ ಮರಳುತ್ತಾರೆ ಎಂದು ಅವರು ಹೇಳಿದ್ದಾರೆ.
ಇತ್ತಿಚೆಗೆ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲೂ ವಿನೋದ್ ಪ್ರಭಾಕರ್ ಭಾವನಾತ್ಮಕವಾಗಿ ಮಾತನಾಡಿದ್ದರು. ತಮ್ಮ ತಂದೆ, ಕನ್ನಡದ ಖ್ಯಾತ ನಟ ಟೈಗರ್ ಪ್ರಭಾಕರ್ ಅವರ ಪ್ರಭಾವವನ್ನು ಸ್ಮರಿಸಿದ ಅವರು, ನಾನು ಇಂದು ಇಲ್ಲಿ ನಿಂತಿದ್ದೇನೆಂದರೆ ಅದಕ್ಕೆ ನನ್ನ ತಂದೆಯೇ ಕಾರಣ. ಅವರ ಕನಸುಗಳನ್ನು ಮುಂದುವರಿಸುವ ಕೆಲಸವನ್ನು ನಾನು ಮಾಡುತ್ತಿದ್ದೇನೆ ಎಂದು ಹೇಳಿದ್ದರು. ಚಿತ್ರರಂಗದಲ್ಲಿ ತಮ್ಮ ಆರಂಭಿಕ ದಿನಗಳಲ್ಲಿ ಮಾಡಿದ ತಪ್ಪುಗಳು, ನಂತರದ ತಿರುವು ಮತ್ತು ಮತ್ತೆ ಮರಳಿ ಬಂದ ಪ್ರಯಾಣದ ಬಗ್ಗೆ ಕೂಡ ಅವರು ಹಂಚಿಕೊಂಡಿದ್ದರು.
ಸಂಗೀತ ನಿರ್ದೇಶನದಲ್ಲಿ ಆಲ್ ಓಕೆ ತಂಡದ ಕಾರ್ಯವನ್ನು ಶ್ಲಾಘಿಸಿದ ಅವರು, ಹಾಡು ಹಳೆಯ ಹಾಗೂ ಹೊಸ ಪೀಳಿಗೆಯನ್ನು ಸಂಪರ್ಕಿಸುವ ರೀತಿಯಲ್ಲಿ ಮೂಡಿಬಂದಿದೆ ಎಂದು ಅಭಿಪ್ರಾಯಪಟ್ಟಿದ್ದರು. ಚಿತ್ರತಂಡದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಅವರು, ಪ್ರತಿಯೊಂದು ಪ್ರಶಸ್ತಿಯೂ ತಮ್ಮ ತಂದೆಗೆ ಅರ್ಪಣೆ ಎಂದು ಭಾವುಕರಾಗಿ ಹೇಳಿದ್ದರು.
ಸದ್ಯ ‘ಬಲರಾಮನ ದಿನಗಳು’ ಚಿತ್ರದ ಟ್ರೇಲರ್ ಮತ್ತು ಹಾಡುಗಳು ಈಗಾಗಲೇ ಪ್ರೇಕ್ಷಕರಲ್ಲಿ ಉತ್ತಮ ನಿರೀಕ್ಷೆ ಹುಟ್ಟಿಸಿವೆ. ಚಿತ್ರವು ಇದೇ ತಿಂಗಳ 26ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ. ನಟ ವಿನೋದ್ ಪ್ರಭಾಕರ್ ಅವರು ಶೀಘ್ರದಲ್ಲೇ ಸಂಪೂರ್ಣ ಚೇತರಿಸಿಕೊಂಡು, ಮತ್ತೆ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ.





