ಇತ್ತೀಚಿನ ದಿನಗಳಲ್ಲಿ ರಾಜಕೀಯ ಗಣ್ಯರ ಅಥವಾ ಇತರ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವ್ಯಕ್ತಿಗಳ ಜೀವನ ಆಧಾರಿತ ಡಾಕ್ಯುಮೆಂಟರಿ ಚಿತ್ರಗಳನ್ನು ನಾವು ತೆರೆ ಮೇಲೆ ಕಾಣಬಹುದು. ಇದೀಗ ಭಾರತದ ರಾಷ್ಟ್ರಪತಿಯೊಬ್ಬರ ಡಾಕ್ಯುಮೆಂಟರಿ ತೆರೆಮೇಲೆ ಬರಲಿದೆ. ಇಂತಹ ಒಂದು ಕೆಲಸಕ್ಕೆ ಆಮಿರ್ ಖಾನ್ ಆಸಕ್ತಿ ತೋರಿಸಿದ್ದಾರೆ. ಬಾಲಿವುಡ್ ನಟ ಹಾಗೂ ನಿರ್ಮಾಪಕ ಆಮಿರ್ ಖಾನ್ ಅವರು ಇತ್ತೀಚಿನ ದಿನಗಳಲ್ಲಿ ನಟನೆಯಿಗಿಂತ ಸಿನಿಮಾ ನಿರ್ಮಾಣದ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆ ‘ಆಮಿರ್ ಖಾನ್ ಪ್ರೊಡಕ್ಷನ್ಸ್’ ಮೂಲಕ ವಿಭಿನ್ನ ಹಾಗೂ ಅರ್ಥಪೂರ್ಣ ಕಥೆಗಳನ್ನು ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಇದೀಗ ಆಮಿರ್ ಖಾನ್ ಪ್ರೊಡಕ್ಷನ್ಸ್ ಒಂದು ವಿಶೇಷ ಡಾಕ್ಯುಮೆಂಟರಿಯನ್ನು ನಿರ್ಮಿಸಲು ಮುಂದಾಗಿದೆ. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸ್ಪೂರ್ತಿದಾಯಕ ಜೀವನಯಾನದ ಕುರಿತ ಸಾಕ್ಷ್ಯಚಿತ್ರ ಇದಾಗಿದ್ದು, ಅವರ ಹೋರಾಟ, ಸಾಧನೆ ಮತ್ತು ಐತಿಹಾಸಿಕ ಪಯಣವನ್ನು ತೆರೆ ಮೇಲೆ ತೋರಿಸಲಾಗುತ್ತದೆ.
ಖ್ಯಾತ ಬರಹಗಾರ್ತಿ ಹಾಗೂ ನಿರ್ದೇಶಕಿ ಸ್ವಾತಿ ಚಕ್ರವರ್ತಿ ಈ ಡಾಕ್ಯುಮೆಂಟರಿಯನ್ನು ನಿರ್ದೇಶಿಸುತ್ತಿದ್ದಾರೆ. ಒಡಿಶಾದ ಸಣ್ಣ ಹಳ್ಳಿಯಿಂದ ಆರಂಭವಾದ ದ್ರೌಪದಿ ಮುರ್ಮು ಅವರ ಜೀವನ ಪಯಣ ಹೇಗೆ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ ರಾಷ್ಟ್ರಪತಿ ಸ್ಥಾನಕ್ಕೆ ತಲುಪಿತು ಎಂಬುದನ್ನು ಚಿತ್ರದಲ್ಲಿ ವಿವರಿಸಲಾಗುತ್ತದೆ.
ಡಾಕ್ಯುಮೆಂಟರಿಯಲ್ಲಿ ದ್ರೌಪದಿ ಮುರ್ಮು ಅವರ ಬಾಲ್ಯದ ದಿನಗಳು, ಸಾರ್ವಜನಿಕ ಜೀವನದ ಆರಂಭ, ರಾಜಕೀಯ ಪ್ರವೇಶ ಹಾಗೂ ಭಾರತದ ಮೊದಲ ಬುಡಕಟ್ಟು ಸಮುದಾಯದ ಮಹಿಳಾ ರಾಷ್ಟ್ರಪತಿಯಾಗಿ ಆಯ್ಕೆಯಾದ ಐತಿಹಾಸಿಕ ಕ್ಷಣಗಳನ್ನು ಒಳಗೊಂಡಿರಲಿದೆ ಎನ್ನಲಾಗಿದೆ.
ಇದರ ಜೊತೆಗೆ ವೈಯಕ್ತಿಕ ಜೀವನದಲ್ಲಿ ಮುರ್ಮು ಅವರು ಎದುರಿಸಿದ ಕಷ್ಟಗಳು, ನೋವುಗಳು ಮತ್ತು ಸವಾಲುಗಳನ್ನು ಎದುರಿಸಿ ಮುನ್ನಡೆದ ಅವರ ಧೈರ್ಯದ ಕಥೆಯೂ ಸಾಕ್ಷ್ಯಚಿತ್ರದ ಪ್ರಮುಖ ಭಾಗವಾಗಲಿದೆ.
ದ್ರೌಪದಿ ಮುರ್ಮು ಅವರು ಹುಟ್ಟಿ ಬೆಳೆದ ಒಡಿಶಾದ ಹಳ್ಳಿಯಲ್ಲಿ ಡಾಕ್ಯುಮೆಂಟರಿಯ ಕೆಲವು ಪ್ರಮುಖ ದೃಶ್ಯಗಳ ಚಿತ್ರೀಕರಣ ಪೂರ್ಣಗೊಂಡಿದೆ ಎನ್ನಲಾಗಿದೆ. ಅವರ ಬಾಲ್ಯದ ನೆನಪುಗಳನ್ನು ಮರುಸೃಷ್ಟಿಸಲು ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ಚಿತ್ರೀಕರಣ ನಡೆಸಲಾಗಿದೆ.
2022ರಲ್ಲಿ ಭಾರತದ 15ನೇ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ದ್ರೌಪದಿ ಮುರ್ಮು ಅವರು ಈ ಹುದ್ದೆ ಅಲಂಕರಿಸಿದ ದೇಶದ ಎರಡನೇ ಮಹಿಳೆಯಾಗಿದ್ದಾರೆ. ಅವರ ಜೀವನ ಕಥೆ ಯುವಜನರಿಗೆ ಪ್ರೇರಣೆಯಾಗುವಂತಹದ್ದಾಗಿದೆ.
ಈ ಹಿಂದೆ ಆಮಿರ್ ಖಾನ್ ಹಾಗೂ ಕಿರಣ್ ರಾವ್ ನಿರ್ಮಾಣದಲ್ಲಿ ಮೂಡಿಬಂದಿದ್ದ ‘ರುಬಾರು ರೋಶ್ನಿ’ ಸಾಕ್ಷ್ಯಚಿತ್ರವನ್ನು ಸ್ವಾತಿ ಚಕ್ರವರ್ತಿ ನಿರ್ದೇಶಿಸಿದ್ದರು. ಇದೀಗ ಇದೇ ತಂಡ ಮತ್ತೊಮ್ಮೆ ಒಂದಾಗಿ ದ್ರೌಪದಿ ಮುರ್ಮು ಅವರ ಜೀವನದ ಕಥೆಯನ್ನು ತೆರೆಗೆ ತರುವ ಪ್ರಯತ್ನ ಮಾಡುತ್ತಿದೆ.
ಸದ್ಯ ಆಮಿರ್ ಖಾನ್ ಪ್ರೊಡಕ್ಷನ್ಸ್ ಹಲವು ಯೋಜನೆಗಳಲ್ಲಿ ಬ್ಯುಸಿಯಾಗಿದ್ದು, ಸನ್ನಿ ಡಿಯೋಲ್ ಅಭಿನಯದ ‘ಬಟ್ವಾರಾ 1947’ ಚಿತ್ರದ ಪ್ರಮೋಷನ್ ಕೆಲಸಗಳಲ್ಲೂ ತೊಡಗಿಸಿಕೊಂಡಿದೆ. ಸನ್ನಿ ಡಿಯೋಲ್ ನಟನೆಯ ಮತ್ತು ರಾಜ್‌ಕುಮಾರ್ ಸಂತೋಷಿ ನಿರ್ದೇಶನದ ‘ಬಟ್ವಾರಾ 1947’ ಬಿಗ್ ಬಜೆಟ್ ಸಿನಿಮಾ ಆಗಸ್ಟ್ 14ರಂದು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.





