ಛತ್ತೀಸ್ಗಢ: ಪತ್ನಿಯ ನಡತೆ ಮೇಲೆ ಅನುಮಾನಗೊಂಡು ಆಕೆಯ ತಲೆಯನ್ನು ಬೋಳಿಸಿ, ಬಲವಂತವಾಗಿ ಮೂತ್ರ ಕುಡಿಸಿ ಅಮಾನವೀಯವಾಗಿ ಹಿಂಸಿಸಿರುವ (Tortured) ಅತ್ಯಂತ ಕ್ರೂರ ಘಟನೆ ಛತ್ತೀಸ್ಗಢದ (Chhattisgarh) ಕೊರಿಯಾ ಜಿಲ್ಲೆಯಲ್ಲಿ ನಡೆದಿದೆ. ತನ್ನ ಸ್ವಂತ ಮಕ್ಕಳ ಎದುರಲ್ಲೇ ಪತಿ ಈ ಘೋರ ಕೃತ್ಯ ಎಸಗಿದ್ದಾನೆ.
ಜೂನ್ 14ರಂದು ನಡೆದಿದ್ದ ಈ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು, ಆರೋಪಿಯನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ.
ಪ್ರೀತಿಸಿ ಮದುವೆಯಾಗಿದ್ದ ಪತ್ನಿಯ ಮೇಲೆಯೇ ಕ್ರೌರ್ಯ
ಪಾಂಡೋಪಾರಾ ಗ್ರಾಮದ ಜಿತೇಂದ್ರ ಘಾಸಿಯಾ ಎಂಬಾತನೇ ಈ ಪಾಪಿ ಪತಿ. ಈತ 15 ವರ್ಷಗಳ ಹಿಂದೆ ಮಹಿಳೆಯೊಬ್ಬರನ್ನು ಪ್ರೀತಿಸಿ ವಿವಾಹವಾಗಿದ್ದನು. ಈ ದಂಪತಿಗೆ ನಾಲ್ವರು ಮಕ್ಕಳಿದ್ದಾರೆ. ಆದರೆ, ಪತ್ನಿಯ ನಡತೆಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದ ಜಿತೇಂದ್ರ, ಒಂದು ವರ್ಷದ ಹಿಂದೆಯೇ ಆಕೆಯನ್ನು ಬಿಟ್ಟು ದೂರ ಹೋಗಿದ್ದನು. ಸದ್ಯ ಆ ಮಹಿಳೆ ತನ್ನ ಪರಿಚಯದ ವ್ಯಕ್ತಿಯೊಬ್ಬರೊಂದಿಗೆ ವಾಸಿಸುತ್ತಿದ್ದಳು ಎನ್ನಲಾಗಿದೆ. ಪತ್ನಿ ಬೇರೆಯವರೊಂದಿಗೆ ವಾಸಿಸುತ್ತಿರುವುದು ಆತನ ಕೋಪಕ್ಕೆ ಕಾರಣವಾಗಿದೆ.
ಮಕ್ಕಳ ಎದುರೇ ಕೈ-ಕಾಲು ಕಟ್ಟಿ ದೌರ್ಜನ್ಯ
ಜಿತೇಂದ್ರ ಜೂನ್ 14ರಂದು ಗ್ರಾಮಕ್ಕೆ ಬಂದಿದ್ದಾನೆ. ಮಕ್ಕಳ ಎದುರಲ್ಲೇ ಪತ್ನಿಯೊಂದಿಗೆ ಅತ್ಯಂತ ಕ್ರೂರವಾಗಿ ವರ್ತಿಸಿದ್ದಾನೆ. ಮೊದಲಿಗೆ ಆಕೆಯ ಕೈ-ಕಾಲುಗಳನ್ನು ಕಟ್ಟಿ ಹಾಕಿ, ತಾನು ತಂದಿದ್ದ ಬೇಡ್ (ರೇಜರ್) ನಿಂದ ಇಡೀ ತಲೆಯನ್ನು ಬೋಳಿಸಿದ್ದಾನೆ.
ಮೂತ್ರ ಕುಡಿಸಿ ವಿಕೃತ ಆನಂದ
ಅಷ್ಟಕ್ಕೇ ನಿಲ್ಲಿಸದ ಈತ, ಆಕೆಗೆ ಬಲವಂತವಾಗಿ ಮೂತ್ರ ಕುಡಿಸಿದ್ದಾನೆ. ಬಳಿಕ ಮುಖಕ್ಕೆ ಕಪ್ಪು ಬಣ್ಣ ಬಳಿದು ವಿಕೃತಿ ಮೆರೆದಿದ್ದಾನೆ. ಇದರಿಂದಲೂ ಆತನ ಕೋಪ ತಣ್ಣಗಾಗದೆ, ಆಕೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ, “ನಿನ್ನನ್ನು ಕೊಲೆ ಮಾಡ್ತೀನಿ” ಎಂದು ಬೆದರಿಕೆಯನ್ನೂ ಹಾಕಿದ್ದಾನೆ. ಮುಗ್ಧ ಮಕ್ಕಳು ತಮ್ಮ ಕಣ್ಣ ಮುಂದೆ ನಡೆದ ಈ ದೃಶ್ಯವನ್ನು ನೋಡಿ ಭಯಭೀತರಾಗಿದ್ದಾರೆ.
ವಿಡಿಯೋ ವೈರಲ್: ಆರೋಪಿ ಅರೆಸ್ಟ್
ಈ ಇಡೀ ಅಮಾನವೀಯ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಘಟನೆ ನಡೆದ ಮರುದಿನ, ಅತ್ಯಂತ ಕಷ್ಟದಲ್ಲಿ ಸಂತ್ರಸ್ತ ಮಹಿಳೆ ಧೈರ್ಯ ಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ತಕ್ಷಣವೇ ಪ್ರಕರಣ ದಾಖಲಿಸಿಕೊಂಡ ಜಿಲ್ಲಾ ಪೊಲೀಸರು, ಆರೋಪಿ ಜಿತೇಂದ್ರ ಘಾಸಿಯಾನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.





