ಜೈಪುರ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಬದುಕಿದ್ದರೆ ಬಿಜೆಪಿಯನ್ನು ನಿಷೇಧಿಸುತ್ತಿದ್ದರು ಎಂದ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಹೇಳಿಕೆ ಭಾರೀ ವಿವಾದ ಸೃಷ್ಟಿಸಿದೆ. ಜೈಪುರದಲ್ಲಿ ಭಾನುವಾರ ಮಾತನಾಡಿದ ಗೆಹ್ಲೋಟ್, ದೇಶದಲ್ಲಿ ನಿರ್ಮಾಣವಾಗಿರುವ ವಾತಾವರಣ ಅತ್ಯಂತ ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“ನನ್ನ 50 ವರ್ಷಗಳ ರಾಜಕಾರಣದ ಅನುಭವದಲ್ಲಿ ಇಂತಹ ಪರಿಸ್ಥಿತಿಯನ್ನು ಎಂದಿಗೂ ನೋಡಿಲ್ಲ. ದೇಶ ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ತೀವ್ರ ದುಷ್ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಅಶೋಕ್ ಗೆಹ್ಲೋಟ್ ಎಚ್ಚರಿಸಿದ್ದಾರೆ.
ಉತ್ತರ ಪ್ರದೇಶ ಚುನಾವಣೆ ಪ್ರಶ್ನೆ
ಗೆಹ್ಲೋಟ್ ಅವರು ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಒಬ್ಬೇ ಒಬ್ಬ ಮುಸ್ಲಿಂ ಅಭ್ಯರ್ಥಿಗೂ ಟಿಕೆಟ್ ನೀಡದಿರುವುದನ್ನು ಉಲ್ಲೇಖಿಸಿ, “ಕನಿಷ್ಠ 5 ಟಿಕೆಟ್‌ಗಳನ್ನಾದರೂ ಮುಸ್ಲಿಂ ಅಭ್ಯರ್ಥಿಗಳಿಗೆ ನೀಡಬಹುದಿತ್ತು. ಆದರೆ ನೀವು ಸಂಪೂರ್ಣ ‘ಹಿಂದುತ್ವವಾದಿ’ ಪಕ್ಷ ಎಂದು ಬಿಂಬಿಸಿಕೊಳ್ಳಲು ಈ ಪ್ರಯತ್ನ ನಡೆಸುತ್ತಿದ್ದೀರಿ. ಕೇವಲ ಹಿಂದುತ್ವದ ಅಜೆಂಡಾ ಮೇಲೆ ಪಕ್ಷ ನಡೆಸಲು ಬಯಸುತ್ತೀರಾ? ಹಿಂದೂಗಳ ಹೆಸರಿನಲ್ಲಿ ಮಾತ್ರ ರಾಜಕಾರಣ ಮಾಡುತ್ತೀರಾ?” ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯ ತೀವ್ರ ಪ್ರತಿಕ್ರಿಯೆ
ಗೆಹ್ಲೋಟ್ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ತೀವ್ರ ತಿರುಗೇಟು ನೀಡಿದ್ದಾರೆ. “ಕಾಂಗ್ರೆಸ್‌ಗೆ ಹಿಂದೂಗಳ ಮೇಲೆ ದ್ವೇಷವಿದೆ ಎನ್ನುವುದಕ್ಕೆ ಗೆಹ್ಲೋಟ್ ಹೇಳಿಕೆಯೇ ಸಾಕ್ಷಿ. ಕಾಂಗ್ರೆಸ್ ಮುಸ್ಲಿಮರ ಓಲೈಕೆ ರಾಜಕಾರಣ ಮಾಡುತ್ತಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸುಪ್ರೀಂ ಕೋರ್ಟ್ ಪ್ರಕಾರ ಹಿಂದುತ್ವ ಎನ್ನುವುದು ಜೀವನ ಪದ್ಧತಿ. ಹೀಗಿರುವಾಗ ಇಂದಿರಾ ಗಾಂಧಿ ಅವರು ಹಿಂದುತ್ವವನ್ನು ಯಾಕೆ ನಿಷೇಧಿಸುತ್ತಿದ್ದರು?” ಎಂದು ಪೂನಾವಾಲಾ ಪ್ರಶ್ನಿಸಿದ್ದಾರೆ.
‘ಕಾಂಗ್ರೆಸ್ ಬದಲು ಕ್ಯಾಲಿಫೇಟ್’ ಎಂದ ಪೂನಾವಾಲಾ
ಗೆಹ್ಲೋಟ್ ಅವರ ಮಾತುಗಳು ಕಾಂಗ್ರೆಸ್ ನಾಯಕರ ತುರ್ತು ಪರಿಸ್ಥಿತಿಯ ಮನಸ್ಥಿತಿ ಮತ್ತು ಹಿಂದೂಗಳ ಮೇಲಿನ ದ್ವೇಷವನ್ನು ಬಹಿರಂಗಪಡಿಸುತ್ತದೆ ಎಂದು ಆರೋಪಿಸಿದ ಪೂನಾವಾಲಾ, “ಇನ್ನು ಮುಂದೆ ಇದನ್ನು ‘ಇಂಡಿಯನ್ ನ್ಯಾಷನಲ್ ಕಾಂಗ್ರೆಸ್’ ಎಂದು ಕರೆಯಬಾರದು. ಬದಲಾಗಿ ‘ಇಂಡಿಯನ್ ನ್ಯಾಷನಲ್ ಕ್ಯಾಲಿಫೇಟ್’ ಎಂದು ಕರೆಯಬೇಕು” ಎಂದು ಲೇವಡಿ ಮಾಡಿದ್ದಾರೆ.
“ಕಾಂಗ್ರೆಸ್ ದೇಶದ ಸಂಪನ್ಮೂಲಗಳ ಮೇಲೆ ಮುಸ್ಲಿಮರು ಹಕ್ಕು ಹೊಂದಿದ್ದಾರೆ ಎಂದು ನಂಬುತ್ತದೆ. ಕಾಂಗ್ರೆಸ್‌ಗೆ ಮುಸ್ಲಿಮರ ಅಗತ್ಯವಿದೆ ಎನ್ನುತ್ತಾರೆ. ಆದರೆ ನಾವು ಹಿಂದುತ್ವದ ಪರ ಮಾತನಾಡಿದರೆ ದೊಡ್ಡ ಪಾಪ ಮಾಡಿದಂತೆ ಮಾತನಾಡುತ್ತಾರೆ” ಎಂದು ಆರೋಪಿಸಿದ್ದಾರೆ.




