ಬೆಳ್ಳಂಬೆಳಗ್ಗೆ ಎದ್ದು ಕಣ್ಣು ಬಿಡೋ ಹೊತ್ತಿಗೆ ತಾನು ಸತ್ತೋಗಿದ್ದೀನಿ ಅನ್ನೋ ಪೋಸ್ಟರ್ ನೋಡಿದ್ರೆ ಹೇಗಿರುತ್ತೆ ಹೇಳಿ? ಸದ್ಯ ಸ್ಯಾಂಡಲ್‌ವುಡ್‌ನ ಹಿರಿಯ ನಟ ದೊಡ್ಡಣ್ಣಗೆ ಇಂತದ್ದೇ ಒಂದು ಶಾಕಿಂಗ್ ಅನುಭವವಾಗಿದೆ. ಕಣ್ಮುಚ್ಚಿ ಕಣ್ತೆರೆಯುವಷ್ಟರಲ್ಲಿ ಇಡೀ ಸೋಷಿಯಲ್ ಮೀಡಿಯಾದಲ್ಲಿ ಇವರ ಸಾವಿನ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಕಿಡಿಗೇಡಿಗಳ ಈ ಕೃತ್ಯಕ್ಕೆ ಡೋದನ್ನ ಕೊಟ್ಟಿರುವ ಖಡಕ್ ವಾರ್ನಿಂಗ್ ಏನು? ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್.
- ಬದುಕಿರುವಾಗಲೇ ಶ್ರದ್ಧಾಂಜಲಿ ಪೋಸ್ಟರ್..ದೊಡ್ಡಣ್ಣನಿಗೆ ಶಾಕ್
- ನಾನು ಆರಾಮಾಗಿದ್ದೀನಿ.. ಆಯಸ್ಸು ಜಾಸ್ತಿ ಆಯ್ತು..!
- ಕಿಡಿಗೇಡಿಗಳಿಗೆ ವಾರ್ನಿಂಗ್.. ಬೆನ್ನತ್ತಿ ಶಿಕ್ಷೆ ಕೊಡಿಸ್ತೀನಿ..!
- ಸೋಶಿಯಲ್ ಮೀಡಿಯಾ ದುರ್ಬಳಕೆಗೆ ದೊಡ್ಡಣ್ಣ ಆಕ್ರೋಶ
ಸೋಶಿಯಲ್ ಮೀಡಿಯಾ ಬಂದ್ಮೇಲೆ ಸೆಲೆಬ್ರಿಟಿಗಳಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ಇದಕ್ಕೆ ಲೇಟೆಸ್ಟ್ ಬಲಿಪಶು ನಮ್ಮ ಸ್ಯಾಂಡಲ್‌ವುಡ್‌ನ ಹಿರಿಯ ನಟ ದೊಡ್ಡಣ್ಣ. ‘ಪಬ್ಲಿಕ್ ಫ್ರೆಂಡ್’ ಅನ್ನೋ ಫೇಸ್‌ಬುಕ್ ಪೇಜ್‌ನಲ್ಲಿ ದೊಡ್ಡಣ್ಣ ಇನ್ನಿಲ್ಲ, ಭಾವಪೂರ್ಣ ಶ್ರದ್ಧಾಂಜಲಿ ಅಂತ ಜೂನ್ 12ರ ಡೇಟ್ ಹಾಕಿ ಪೋಸ್ಟ್ ಮಾಡಲಾಗಿತ್ತು. ಬೆಳಗ್ಗೆ ಎದ್ದು ಮುಖ ತೊಳೆಯುವ ಮುನ್ನವೇ ಈ ಸುಳ್ಳು ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ, ದೊಡ್ಡಣ್ಣನ ಮನೆಗೆ ನೂರಾರು ಫೋನ್ ಕರೆಗಳು ಬರಲು ಶುರುವಾಗಿದ್ದವು. ಇದನ್ನು ನೋಡಿ ಸ್ವತಃ ದೊಡ್ಡಣ್ಣ ಅವರೇ ದಂಗಾಗಿದ್ದಾರೆ.
ತಮ್ಮ ಸಾವಿನ ಸುಳ್ಳು ಸುದ್ದಿಯಿಂದ ಆತಂಕಕ್ಕೆ ಒಳಗಾಗಿದ್ದ ಅಭಿಮಾನಿಗಳು ಮತ್ತು ಬಂಧು-ಬಳಗಕ್ಕೆ ದೊಡ್ಡಣ್ಣ ವಿಡಿಯೋ ಮೂಲಕವೇ ಪ್ರತ್ಯುತ್ತರ ನೀಡಿದ್ದಾರೆ. ನಾನು ತುಂಬಾ ಆರೋಗ್ಯವಾಗಿದ್ದೇನೆ, ನೆಮ್ಮದಿಯಾಗಿದ್ದೇನೆ. ಕನ್ನಡಿಗರ ಪ್ರೀತಿ-ಆಶೀರ್ವಾದ ಇರುವವರೆಗೂ ನನಗೆ ಏನೂ ಆಗಲ್ಲ. ಈ ಸುಳ್ಳು ಸುದ್ದಿಯಿಂದ ನನ್ನ ಆಯಸ್ಸು ಇನ್ನಷ್ಟು ಜಾಸ್ತಿ ಆಯ್ತು, ಯಾವುದೋ ಕಂಟಕ ಕಳೆಯಿತು ಅಂದುಕೊಳ್ಳುತ್ತೇನೆ” ಎಂದು ನಗುತ್ತಲೇ ಅಭಿಮಾನಿಗಳಿಗೆ ಧೈರ್ಯ ತುಂಬಿದ್ದಾರೆ.
ಇದೇ ವೇಳೆ ಇಂತಹ ನೀಚ ಕೃತ್ಯ ಎಸಗಿದ ಕಿಡಿಗೇಡಿಗಳ ವಿರುದ್ಧ ದೊಡ್ಡಣ್ಣ ಕೆಂಡಾಮಂಡಲರಾಗಿದ್ದಾರೆ. ಇಂತಹ ಸುಳ್ಳು ಸುದ್ದಿ ಹಬ್ಬಿಸುವ ಅವಿವೇಕಿಗಳನ್ನು ನಾನು ಸುಮ್ಮನೆ ಬಿಡುವುದಿಲ್ಲ ಎಂದು ವಿಡಿಯೋದಲ್ಲಿ ಗರಂ ಆಗಿದ್ದಾರೆ. “ಕಿಡಿಗೇಡಿಗಳ ಬೆನ್ನತ್ತಿ ಅವರಿಗೆ ತಕ್ಕ ಶಿಕ್ಷೆ ಕೊಡಿಸದೇ ಬಿಡಲ್ಲ ಎಂದು ಖಡಕ್ ಎಚ್ಚರಿಕೆ ನೀಡುವ ಮೂಲಕ ಸೋಷಿಯಲ್ ಮೀಡಿಯಾದ ಫೇಕ್ ನ್ಯೂಸ್ ಗ್ಯಾಂಗ್‌ಗೆ ಸರಿಯಾದ ಚಾಟಿ ಬೀಸಿದ್ದಾರೆ.





