ಬೆಂಗಳೂರು, ಜೂನ್ 11: ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ದುಬೈ ಮತ್ತು ಬ್ಯಾಂಕಾಕ್‌ನಿಂದ ಆಗಮಿಸಿದ ಇಬ್ಬರು ಪ್ರಯಾಣಿಕರಿಂದ ಸುಮಾರು 3.12 ಕೋಟಿ ರುಪಾಯಿ ಮೌಲ್ಯದ ಚಿನ್ನ ಮತ್ತು ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮೊದಲು ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದ ಪ್ರಯಾಣಿಕನ ಮೇಲೆ ಕಸ್ಟಮ್ಸ್ ಅಧಿಕಾರಿಗಳಿಗೆ ಅನುಮಾನ ಮೂಡಿತ್ತು. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಚಲನವಲನವನ್ನು ಗಮನಿಸಿದ ಅಧಿಕಾರಿಗಳು ಆತನನ್ನು ತಪಾಸಣೆಗೆ ಒಳಪಡಿಸಿದರು. ಈ ವೇಳೆ ಆತ ಚಿನ್ನವನ್ನು ಸಾಗಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಪರಿಶೀಲನೆ ವೇಳೆ ನಾಲ್ಕು ವಿಶೇಷ ಕ್ಯಾಪ್ಸೂಲ್‌ಗಳಲ್ಲಿ ಅಡಗಿಸಿಡಲಾಗಿದ್ದ 899.50 ಗ್ರಾಂ ತೂಕದ 24 ಕ್ಯಾರೆಟ್ ಶುದ್ಧ ಚಿನ್ನ ಪತ್ತೆಯಾಗಿದೆ. ಈ ಚಿನ್ನದ ಮೌಲ್ಯ ಸುಮಾರು ₹1.37 ಕೋಟಿ ಎಂದು ಅಂದಾಜಿಸಲಾಗಿದೆ. ಆರೋಪಿಯು ಚಿನ್ನವನ್ನು ಟ್ಯಾಬ್ಲೆಟ್ ಮಾದರಿಯಲ್ಲಿ ರೂಪಾಂತರಿಸಿ ಸಾಗಿಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಸ್ಟಮ್ಸ್ ಕಾಯ್ದೆಯಡಿ ಚಿನ್ನವನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.
ಇನ್ನು ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದಿದ್ದ ಪ್ರಯಾಣಿಕನ ಬಳಿ ಭಾರೀ ಪ್ರಮಾಣದ ಗಾಂಜಾ ಪತ್ತೆಯಾಗಿದೆ. ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ತಪಾಸಣೆಯಲ್ಲಿ ಸುಮಾರು ₹1.75 ಕೋಟಿ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಮಾದಕ ವಸ್ತುವನ್ನು ವಿವಿಧ ಪ್ಯಾಕೆಟ್‌ಗಳಲ್ಲಿ ಅಡಗಿಸಿ ಭಾರತಕ್ಕೆ ತರಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ವಿರುದ್ಧ ಎನ್‌ಡಿಪಿಎಸ್ (Narcotic Drugs and Psychotropic Substances) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಮಾದಕ ವಸ್ತು ಎಲ್ಲಿಂದ ತರಲಾಗಿತ್ತು, ಅದರ ಹಿಂದೆ ಯಾವ ಜಾಲ ಕಾರ್ಯನಿರ್ವಹಿಸುತ್ತಿದೆ ಹಾಗೂ ಈ ಸಾಗಣೆಯ ಅಂತಿಮ ಗುರಿ ಏನಾಗಿತ್ತು ಎಂಬ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ಒಂದೇ ದಿನದಲ್ಲಿ ಚಿನ್ನ ಮತ್ತು ಮಾದಕ ವಸ್ತುಗಳ ಎರಡು ದೊಡ್ಡ ಕಳ್ಳಸಾಗಣೆ ಪ್ರಕರಣಗಳು ಪತ್ತೆಯಾಗಿದೆ. ವಿಶೇಷವಾಗಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳ ಮೂಲಕ ನಡೆಯುತ್ತಿರುವ ಅಕ್ರಮ ಸಾಗಣೆಯನ್ನು ತಡೆಯಲು ಕಸ್ಟಮ್ಸ್ ಇಲಾಖೆ ನಿರಂತರ ನಿಗಾ ವಹಿಸಿದೆ.





