ಟೆಲ್ ಅವಿವ್/ಜೆರುಸಲೇಂ: ಕಕದನ ವಿರಾಮ ಜಾರಿಗೊಂಡ ಬಳಿಕ ಇರಾನ್ ಮೊದಲ ಬಾರಿಗೆ ಇಸ್ರೇಲ್ ವಿರುದ್ಧ ಕ್ಷಿಪಣಿ ದಾಳಿ ನಡೆಸಿದೆ. ಪಶ್ಚಿಮ ಏಷ್ಯಾದಲ್ಲಿ ಮತ್ತೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಇತ್ತೀಚಿನ ದಿನಗಳಲ್ಲಿ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ರಾಜತಾಂತ್ರಿಕ ಮಾತುಕತೆಗಳ ಮೂಲಕ ಉದ್ವಿಗ್ನತೆ ತಗ್ಗಿಸಲು ಪ್ರಯತ್ನಿಸುತ್ತಿದ್ದವು. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ನಡೆದಿರುವ ಈ ದಾಳಿ ಪ್ರದೇಶದಲ್ಲಿ ಆತಂಕ ಹೆಚ್ಚಿಸಿದೆ. ದಾಳಿಯ ಬಳಿಕ ಇಸ್ರೇಲ್ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಿದ್ದು, ಪ್ರತಿದಾಳಿಗೆ ಸಿದ್ಧತೆ ನಡೆಸುತ್ತಿದೆ.
ಇರಾನ್ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಲೆಬನಾನ್ ಸೇರಿದಂತೆ ನೆರೆಯ ಪ್ರದೇಶಗಳಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ. ವಿಶೇಷವಾಗಿ ಹೆಜ್ಬೊಲ್ಲಾ ಸಂಘಟನೆಯೊಂದಿಗೆ ಸಂಬಂಧಿಸಿದ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಪರಿಸ್ಥಿತಿ ಮತ್ತಷ್ಟು ಸಂಕೀರ್ಣಗೊಂಡಿದೆ.
ಇತ್ತ ಇಸ್ರೇಲ್ ಸೇನೆ, ಇರಾನ್‌ನಿಂದ ಉಡಾಯಿಸಲಾದ ಬಹುತೇಕ ಕ್ಷಿಪಣಿಗಳನ್ನು ತನ್ನ ವಾಯು ರಕ್ಷಣಾ ವ್ಯವಸ್ಥೆ ಮೂಲಕ ಹೊಡೆದುರುಳಿಸಲಾಗಿದೆ ಎಂದು ಹೇಳಿಕೊಂಡಿದೆ. ಸೇನೆಯ ಪ್ರಕಾರ, ಒಟ್ಟು 11 ಕ್ಷಿಪಣಿಗಳನ್ನು ಯಶಸ್ವಿಯಾಗಿ ನಾಶಪಡಿಸಲಾಗಿದ್ದು, ದೊಡ್ಡ ಮಟ್ಟದ ಹಾನಿ ತಪ್ಪಿಸಲಾಗಿದೆ. ಇರಾನ್‌ನ ಈ ಕ್ರಮವನ್ನು “ಗಂಭೀರ ತಪ್ಪು” ಎಂದು ಇಸ್ರೇಲ್ ಮಿಲಿಟರಿ ಬಣ್ಣಿಸಿದೆ.
ದಾಳಿಯ ಬೆನ್ನಲ್ಲೇ ಭದ್ರತಾ ಕಾರಣಗಳಿಂದ ಇರಾನ್ ತನ್ನ ಪಶ್ಚಿಮ ವಾಯುಪ್ರದೇಶದ ಮೇಲೆ ನಿರ್ಬಂಧ ಹೇರಿದೆ ಎನ್ನಲಾಗಿದೆ. ಇದೇ ವೇಳೆ ಸಂಭಾವ್ಯ ಸೈನಿಕ ಬೆಳವಣಿಗೆಗಳ ಹಿನ್ನೆಲೆ ಇರಾಕ್ ಮತ್ತು ಸಿರಿಯಾ ಕೂಡ ತಮ್ಮ ವಾಯುಸೀಮೆಗಳ ಮೇಲಿನ ನಿಯಂತ್ರಣವನ್ನು ಬಿಗಿಗೊಳಿಸಿರುವುದಾಗಿ ವರದಿಗಳು ತಿಳಿಸಿವೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಉತ್ತರ ಇಸ್ರೇಲ್ ಭಾಗದ ಮೇಲೆ ನಡೆದ ದಾಳಿಗಳಿಗೆ ಪ್ರತಿಯಾಗಿ ಲೆಬನಾನ್‌ನ ದಕ್ಷಿಣ ಭಾಗದ ಗುರಿಗಳ ಮೇಲೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹೇಳಿದ್ದಾರೆ. ಇದರಿಂದ ಪ್ರದೇಶದಲ್ಲಿ ಪ್ರತೀಕಾರಾತ್ಮಕ ದಾಳಿಗಳ ಸರಣಿ ಮುಂದುವರಿಯುವ ಸಾಧ್ಯತೆಗಳ ಬಗ್ಗೆ ಆತಂಕ ವ್ಯಕ್ತವಾಗಿದೆ.
ಈ ಮಧ್ಯೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸದಂತೆ ಇಸ್ರೇಲ್‌ಗೆ ಎಚ್ಚರಿಕೆ ನೀಡಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ. ಇರಾನ್‌ನ ದಾಳಿಗೆ ತಕ್ಷಣದ ಪ್ರತೀಕಾರ ಕೈಗೊಳ್ಳುವುದಕ್ಕಿಂತ ರಾಜತಾಂತ್ರಿಕ ಪ್ರಯತ್ನಗಳಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂದು ಟ್ರಂಪ್ ಸಲಹೆ ನೀಡಿರುವುದಾಗಿ ಹೇಳಲಾಗಿದೆ.





