ಬೆಂಗಳೂರು: ಅಂಗಡಿಗೆ ಹೋಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಾಗ, “ಬ್ಯಾಂಕ್ ಖಾತೆಯಲ್ಲಿ ದುಡ್ಡಿಲ್ವಲ್ಲಪ್ಪ…” ಎಂದು ತಲೆ ಕೆಡಿಸಿಕೊಳ್ಳುವ ಅಗತ್ಯ ಇನ್ಮುಂದೆ ಇಲ್ಲ. ಭಾರತದ ಪ್ರಮುಖ ಡಿಜಿಟಲ್ ಪಾವತಿ ಸಂಸ್ಥೆ ಭಾರತ್‌ಪೇ (BharatPe), ಯೆಸ್ ಬ್ಯಾಂಕ್ (Yes Bank) ಸಹಯೋಗದೊಂದಿಗೆ ‘ಭಾರತ್‌ಪೇ ಫ್ಲೆಕ್ಸ್’ (BharatPe Flex) ಎಂಬ ಅದ್ಭುತ ಸೇವೆಯನ್ನು ಆರಂಭಿಸಿದೆ. ಇದು ಯುಪಿಐ (UPI) ಆಧಾರಿತ ಸಾಲದ ಸೌಲಭ್ಯವಾಗಿದ್ದು, ಗ್ರಾಹಕರಿಗೆ ಅತ್ಯಂತ ಸರಳವಾಗಿ ಸಾಲ ಪಡೆಯಲು ಅನುವು ಮಾಡಿಕೊಡುತ್ತದೆ.
ಏನಿದು ಭಾರತ್‌ಪೇ ಫ್ಲೆಕ್ಸ್?
ಸಾಮಾನ್ಯವಾಗಿ ನಾವು ಯುಪಿಐ ಮೂಲಕ ಪಾವತಿ ಮಾಡಿದಾಗ, ಆ ಹಣ ನೇರವಾಗಿ ನಮ್ಮ ಬ್ಯಾಂಕ್ ಖಾತೆಯಿಂದ ಕಡಿತವಾಗುತ್ತದೆ. ಆದರೆ, ‘ಭಾರತ್‌ಪೇ ಫ್ಲೆಕ್ಸ್’ ನಲ್ಲಿ ಹಾಗಲ್ಲ. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿದ್ದರೂ, ಕಂಪನಿಯು ನಿಮಗೆ ನಿಗದಿತ ಮಿತಿಯಲ್ಲಿ ಸಾಲ ನೀಡುತ್ತದೆ. ನೀವು ಆ ಸಾಲದ ಮೊತ್ತದಿಂದ ಪಾವತಿ ಮಾಡಬಹುದು. ಅಂದರೆ ಬಡ್ಡಿ ರಹಿತ 45 ದಿನಗಳ ಸಾಲದ ಸೌಲಭ್ಯ!
ಈ ಸೇವೆಯನ್ನು ಎಲ್ಲಿ ಬಳಸಬಹುದು?
ಗ್ರಾಹಕರು ಈ ಕ್ರೆಡಿಟ್ ಲೈನ್ ಸೌಲಭ್ಯವನ್ನು ಬಹುತೇಕ ಎಲ್ಲೆಡೆ ಬಳಸಬಹುದು.
-
ಅಂಗಡಿಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪಾವತಿ
-
ಆನ್‌ಲೈನ್ ಶಾಪಿಂಗ್ (Amazon, Flipkart, Myntra ಇತ್ಯಾದಿ)
-
ಕರೆಂಟ್ ಬಿಲ್, ಮೊಬೈಲ್ ರೀಚಾರ್ಜ್
-
ಪೆಟ್ರೋಲ್, ಡೀಸಲ್ ಹಾಕಿಸುವುದು
-
ತುರ್ತು ಖರ್ಚುಗಳನ್ನು ನಿಭಾಯಿಸುವುದು
45 ದಿನ ಬಡ್ಡಿ ಇಲ್ಲ!
ಇದರ ಅತ್ಯಂತ ವಿಶೇಷ ಅಂಶವೆಂದರೆ, ಗ್ರಾಹಕರು ಪಾವತಿಸಿದ (ಬಳಸಿದ) ಹಣವನ್ನು 45 ದಿನಗಳ ಒಳಗೆ ಹಿಂದಿರುಗಿಸಿದರೆ ಯಾವುದೇ ಬಡ್ಡಿ ಪಾವತಿಸಬೇಕಾಗಿಲ್ಲ. ಇದು ಕ್ರೆಡಿಟ್ ಕಾರ್ಡ್‌ನಂತಹ ಸೌಲಭ್ಯವನ್ನು ನೀಡುತ್ತದೆ. ಒಂದು ವೇಳೆ ಪೂರ್ತಿ ಹಣವನ್ನು ಒಂದೇ ಬಾರಿಗೆ ಕಟ್ಟಲು ಸಾಧ್ಯವಾಗದಿದ್ದರೆ, ಆ ಮೊತ್ತವನ್ನು ಸುಲಭವಾದ ಇಎಂಐ ಕಂತುಗಳಾಗಿ ಪರಿವರ್ತಿಸಿಕೊಳ್ಳಬಹುದು.
ಸುಲಭ ಸಾಲ, ಡಿಜಿಟಲ್ ಪ್ರಕ್ರಿಯೆ
ಈ ಸೌಲಭ್ಯ ಪಡೆಯಲು ನೀವು ಬ್ಯಾಂಕ್‌ಗೆ ಓಡಾಡಬೇಕಾಗಿಲ್ಲ. ಭಾರತ್‌ಪೇ ಆ್ಯಪ್ ಮೂಲಕವೇ ಸಂಪೂರ್ಣ ಡಿಜಿಟಲ್ ಕೆವೈಸಿ (KYC) ಪೂರ್ಣಗೊಳಿಸಬಹುದು. ಕೇವಲ 3 ನಿಮಿಷಗಳಲ್ಲಿ ಅರ್ಹರಿಗೆ ಸಾಲದ ಮಿತಿ (Credit Limit) ಮಂಜೂರಾಗುತ್ತದೆ. ಎಷ್ಟು ಸಾಲ ಇದೆ, ಇಎಂಐ ಎಷ್ಟು ಕಟ್ಟಬೇಕು ಎಂಬುದನ್ನು ಆ್ಯಪ್‌ನಲ್ಲೇ ಟ್ರ್ಯಾಕ್ ಮಾಡಬಹುದು. ಪ್ರತಿ ಪಾವತಿಗೂ ರಿವಾರ್ಡ್ಸ್ ಕೂಡ ಗಳಿಸಬಹುದು.
ಸಾಲ ಪಡೆಯುವುದು ಹೇಗೆ?
-
ಭಾರತ್‌ಪೇ (BharatPe) ಆ್ಯಪ್ ತೆರೆಯಿರಿ.
-
‘BharatPe Flex’ ಆಯ್ಕೆ ಮಾಡಿ.
-
ಡಿಜಿಟಲ್ ಕೆವೈಸಿ ಪೂರ್ಣಗೊಳಿಸಿ.
-
ನಿಮಗೆ ಮಂಜೂರಾದ ಕ್ರೆಡಿಟ್ ಲಿಮಿಟ್ ಅನ್ನು ಯುಪಿಐಗೆ ಲಿಂಕ್ ಮಾಡಿ.
-
ನಿಮ್ಮ ಯುಪಿಐ ಪಿನ್ ಸೆಟ್ ಮಾಡಿ.
-
ಸ್ಕ್ಯಾನ್ ಮಾಡಿ, ಪಾವತಿ ಮಾಡಿ
ಪೇ ನೌ, ಸೆಟಲ್ ಲೇಟರ್: ಹೊಸ ಅಭಿಯಾನ
‘ಪೇ ನೌ, ಸೆಟಲ್ ಲೇಟರ್’ (Pay Now, Settle Later) ಅಭಿಯಾನದ ಮೂಲಕ ಈ ಸೇವೆಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಭಾರತ್‌ಪೇ ಸಿಇಒ ನಳಿನ್ ನೇಗಿ ಪ್ರಕಾರ, “ಯುಪಿಐ ಭಾರತದ ಪಾವತಿ ವ್ಯವಸ್ಥೆಯನ್ನೇ ಬದಲಾಯಿಸಿದೆ. ಈಗ ಅದಕ್ಕೆ ಸಾಲ ಸೌಲಭ್ಯವನ್ನು ಸೇರಿಸುವ ಮೂಲಕ, ಗ್ರಾಹಕರಿಗೆ ತಮ್ಮ ದೈನಂದಿನ ಖರ್ಚುಗಳನ್ನು ಸುಲಭವಾಗಿ ನಿಭಾಯಿಸುವ ಸ್ವಾತಂತ್ರ್ಯ ಸಿಗಲಿದೆ.” ಎಂದಿದ್ದಾರೆ.
ಭಾರತ್‌ಪೇ – ಭಾರತದ ದೊಡ್ಡ ಡಿಜಿಟಲ್ ಪಾವತಿ ಸಂಸ್ಥೆ
2018ರಲ್ಲಿ ಆರಂಭವಾದ ಭಾರತ್‌ಪೇ, ಭಾರತದ ಮೊದಲ ‘ಝೀರೋ ಎಂಡಿಆರ್’ ಕ್ಯೂಆರ್ ಕೋಡ್ ಪರಿಚಯಿಸಿತು. ಪ್ರಸ್ತುತ 450+ ನಗರಗಳಲ್ಲಿ 1.7 ಕೋಟಿಗೂ ಅಧಿಕ ವ್ಯಾಪಾರಿಗಳನ್ನು ಹೊಂದಿದೆ. ಪ್ರತಿ ತಿಂಗಳು 45 ಕೋಟಿಗೂ ಹೆಚ್ಚು ಯುಪಿಐ ವಹಿವಾಟುಗಳನ್ನು ನಿರ್ವಹಿಸುತ್ತಿದೆ. ಈ ಹೊಸ ಭಾರತ್‌ಪೇ ಫ್ಲೆಕ್ಸ್ ಸೇವೆಯು ಯುಪಿಐ ಕ್ರಾಂತಿಯಲ್ಲಿ ಮತ್ತೊಂದು ಮೈಲಿಗಲ್ಲಾಗಲಿದೆ.





