ಮುಂಬೈನಲ್ಲಿ ಇದೀಗ ದೊಡ್ಡ ಚರ್ಚೆಗೆ ಕಾರಣವಾಗಿರುವ ದಿಶಾ ಸಾಲಿಯಾನ್ ಸಾವಿನ ಪ್ರಕರಣದಲ್ಲಿ ಶಿವಸೇನೆಯ ಆದಿತ್ಯ ಠಾಕ್ರೆ ಹೆಸರು ತಳುಕು ಹಾಕಿಕೊಂಡಿದೆ. ಸೆಲೆಬ್ರಿಟಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ತಂದೆ ಸತೀಶ್ ಸಾಲಿಯಾನ್ ಅವರು ಮಗಳು ದಿಶಾ ಸಾವಿನ ಕುರಿತು ಮರು ತನಿಖೆ ಆಗಬೇಕೆಂದು ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಈ ಪ್ರಕರಣ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ದಿಶಾ ಸಾಲಿಯಾನ್, ಕರಾವಳಿ ಕರ್ನಾಟಕದ ಉಡುಪಿಯಲ್ಲಿ ಜನಿಸಿ, ಮುಂಬೈನಲ್ಲಿ ಬೆಳೆದವರು. 2020ರ ಜೂನ್ 8 ರಂದು ಮುಂಬೈನ ಮಲಾಡ್ ಪ್ರದೇಶದ 14ನೇ ಅಂತಸ್ತಿನ ಅಪಾರ್ಟ್‌ಮೆಂಟ್‌ನಿಂದ ಬಿದ್ದು ಸಾವನ್ನಪ್ಪಿದರು. ಆ ಸಮಯದಲ್ಲಿ ಅವರು ತಮ್ಮ ಭಾವಿ ಪತಿ ರೋಹನ್ ರೈ ಮತ್ತು ಸ್ನೇಹಿತರ ಜೊತೆಗೆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ದಿಶಾ ಸಾವಿನ ಬಗ್ಗೆ ಆತ್ಮಹತ್ಯೆ ಎಂಬ ನಿರ್ಣಯ ನೀಡಲಾಗಿದ್ದರೂ, ಆದರೆ ಇದು ಕೊಲೆ ಎಂಬ ಅನುಮಾನ ವ್ಯಕ್ತವಾಗಿದೆ.
ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ನಂತರ ದಿಶಾ ಸಾವಿನ ಕುರಿತು ಹಲವು ಊಹಾಪೋಹಗಳು ಹರಿದಾಡಿದ್ದವು. ದಿಶಾ ಅವರ ಸ್ವಾಭಾವಿಕ ಸಾವು ಎಂದು ಮುಂಬೈ ಪೊಲೀಸರು ವರದಿ ನೀಡಿದರೂ, ಇದೀಗ ಅವರ ತಂದೆ ಸತೀಶ್ ಸಾಲಿಯಾನ್ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕು ಮತ್ತು ಆದಿತ್ಯ ಠಾಕ್ರೆ ಸೇರಿದಂತೆ ಇತರರ ವಿರುದ್ಧ ಎಫ್‌ಐಆರ್ ದಾಖಲು ಮಾಡಬೇಕು ಎಂಬ ಮನವಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ.
ಆದಿತ್ಯ ಠಾಕ್ರೆ ಅವರ ಹೆಸರು ಈ ಪ್ರಕರಣದಲ್ಲಿ ತಳುಕು ಹಾಕಿಕೊಂಡಿರುವುದರಿಂದ ಮಹಾರಾಷ್ಟ್ರದ ರಾಜಕೀಯದಲ್ಲಿ ಸಂಚಲನ ಉಂಟಾಗಿದೆ. ಶಿವಸೇನೆಯ (ಯುಬಿಟಿ) ನಾಯಕ ಅಂಬಾದಾಸ್ ದಾನ್ವೆ, ಬಿಜೆಪಿ ಆದಿತ್ಯ ಠಾಕ್ರೆ ಅವರ ಹೆಸರನ್ನು ದುರ್ಬಳಕೆ ಮಾಡಿ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಕೂಡಾ ಈ ಪ್ರಕರಣವನ್ನು ರಾಜಕೀಯ ಕುತಂತ್ರ ಎಂದು ಕರೆದಿದ್ದಾರೆ. ಎನ್‌ಸಿಪಿ-ಎಸ್‌ಸಿಪಿ ನಾಯಕ ರೋಹಿತ್ ಪವಾರ್, ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿಚಾರವನ್ನು ಚುನಾವಣೆಗಾಗಿ ರಾಜಕೀಯಕ್ಕೆ ಬಳಸಿಕೊಂಡರೆಂದು ಆರೋಪ ಮಾಡಿದ್ದಾರೆ.
2023ರಲ್ಲಿ ಮುಂಬೈ ಪೊಲೀಸರು ದಿಶಾ ಸಾವಿನ ಕುರಿತು ವಿಶೇಷ ತನಿಖಾ ತಂಡವನ್ನು ರಚಿಸಿದ್ದರು. ಅವರ ವರದಿ ಪ್ರಕಾರ ಇದು ಆಕಸ್ಮಿಕ ಸಾವು ಎಂದು ನಿರ್ಣಯಿಸಲಾಗಿದೆ. ಆದರೂ ದಿಶಾ ಅವರ ತಂದೆ ಸತೀಶ್ ಸಾಲಿಯಾನ್ ಅವರ ಮರು ತನಿಖೆಯಾಗಬೇಕೆಂಬ ಬೇಡಿಕೆಯು ಪ್ರಕರಣವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.
ದಿಶಾ ಸಾವಿನ ಕುರಿತು ಜನರಲ್ಲಿ ಕೌತುಕ, ಅಸಮಾಧಾನ ಮತ್ತು ರಾಜಕೀಯ ಪ್ರಭಾವ ಹೆಚ್ಚಾಗಿದೆ. ಹೈಕೋರ್ಟ್ ಈ ಪ್ರಕರಣದ ಕುರಿತು ಎಂತಹ ನಿರ್ಧಾರ ಕೈಗೊಳ್ಳುತ್ತದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.





