ಚೆನ್ನೈ: ತಮಿಳುನಾಡಿನ ಸರ್ಕಾರಿ ಇಲಾಖೆಗಳಲ್ಲಿ ತಲೆದೂರಿರುವ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಮುಖ್ಯಮಂತ್ರಿ ದಳಪತಿ ವಿಜಯ್ ಅವರು ಮಹತ್ವದ ಹೆಜ್ಜೆಯನ್ನಿಟ್ಟಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಲಂಚ ಕೇಳುವ ಅಧಿಕಾರಿಗಳ ವಿರುದ್ಧ ವಿಡಿಯೋ ಸಾಕ್ಷ್ಯ ಸಲ್ಲಿಸುವ ಸಾರ್ವಜನಿಕರಿಗೆ 1 ಲಕ್ಷ ರೂಪಾಯಿ ನಗದು ಬಹುಮಾನ ನೀಡುವ ಕ್ರಾಂತಿಕಾರಿ ಯೋಜನೆಯನ್ನು ಸರ್ಕಾರ ಪ್ರಸ್ತಾವನೆ ಸಿದ್ಧಪಡಿಸಿದೆ
ತಮಿಳುನಾಡಿನಲ್ಲಿ ಭ್ರಷ್ಟಾಚಾರ ಕುರಿತು ಸಾರ್ವಜನಿಕರಿಂದ ಸತತವಾಗಿ ದೂರುಗಳು ಬರುತ್ತಿವೆ. ಈ ಸಾಮಾಜಿಕ ಪಿಡುಗನ್ನು ಸಂಪೂರ್ಣವಾಗಿ ಕಿತ್ತೊಗೆಯಲು ಪಣತೊಟ್ಟಿರುವ ಸಿಎಂ ವಿಜಯ್, ಜನರೇ ಭ್ರಷ್ಟರ ವಿರುದ್ಧ ಸಾಕ್ಷಿಯಾಗಬೇಕು ಎಂಬ ದೂರದೃಷ್ಟಿಯಿಂದ ಈ ಯೋಜನೆಯನ್ನು ರೂಪಿಸಿದ್ದಾರೆ. ಸಾರ್ವಜನಿಕರು ಯಾವುದೇ ರೀತಿಯ ಭಯ ಅಥವಾ ಪ್ರತೀಕಾರದ ಆತಂಕವಿಲ್ಲದೆ ಮುಂದೆ ಬರಲು ಈ ಪ್ರೋತ್ಸಾಹಕ ಬಹುಮಾನ ನೆರವಾಗಲಿದೆ.
ಯೋಜನೆಯ ಪ್ರಮುಖ ಅಂಶಗಳು
-
ಸ್ವತಂತ್ರ ಭ್ರಷ್ಟಾಚಾರ ನಿಗ್ರಹ ದಳ: ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳವನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಯಾವುದೇ ರಾಜಕೀಯ ಅಥವಾ ಆಡಳಿತಾತ್ಮಕ ಒತ್ತಡಗಳಿಲ್ಲದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಈ ಇಲಾಖೆಗೆ ಪೂರ್ಣ ಅಧಿಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.
-
ಕನಿಷ್ಠ ಲಂಚಕ್ಕೂ ಕ್ರಮ: ಸರ್ಕಾರಿ ಅಧಿಕಾರಿಯೊಬ್ಬರು ಕೇವಲ 1,000 ರೂಪಾಯಿ ಲಂಚ ಕೇಳಿದರೂ ಸಹ ಸಾರ್ವಜನಿಕರು ಹಿಂಜರಿಯದೆ ದೂರು ದಾಖಲಿಸಬಹುದು. ಸಣ್ಣ ಮೊತ್ತದ ಲಂಚವನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ.
-
ವಿಡಿಯೋ ಸಾಕ್ಷ್ಯ ಕಡ್ಡಾಯ: ದೂರು ನೀಡುವಾಗ, ಅಧಿಕಾರಿಗಳು ಲಂಚ ಕೇಳುವ ಅಥವಾ ಸ್ವೀಕರಿಸುವ ಸ್ಪಷ್ಟವಾದ ವಿಡಿಯೋ ಸಾಕ್ಷ್ಯವನ್ನು ಸಾರ್ವಜನಿಕರು ಒದಗಿಸಬೇಕಾಗುತ್ತದೆ. ಮೊಬೈಲ್ ಫೋನ್ನಲ್ಲಿ ಚಿತ್ರೀಕರಿಸಿದ ದೃಶ್ಯಗಳು ಸಾಕ್ಷ್ಯವಾಗಿ ಸ್ವೀಕರಿಸಲಾಗುತ್ತದೆ..
-
ಭರ್ಜರಿ ಬಹುಮಾನ: ಈ ರೀತಿ ಸಲ್ಲಿಸಿದ ಸಾಕ್ಷ್ಯಗಳು ತನಿಖೆಯಲ್ಲಿ ನಿಜವೆಂದು ದೃಢಪಟ್ಟರೆ, ಆ ದೂರುದಾರರಿಗೆ ಸರ್ಕಾರವು 1 ಲಕ್ಷ ರೂಪಾಯಿಗಳ ನಗದು ಬಹುಮಾನವನ್ನು ನೀಡಿ ಗೌರವಿಸಲಿದೆ.
ಆಡಳಿತ ವ್ಯವಸ್ಥೆಯಲ್ಲಿ ಕ್ರಾಂತಿ
ಮುಖ್ಯಮಂತ್ರಿ ವಿಜಯ್ ಅವರ ಈ ಕಠಿಣ ನಡೆಯು ತಮಿಳುನಾಡಿನ ಆಡಳಿತ ವ್ಯವಸ್ಥೆಯಲ್ಲಿ ದೊಡ್ಡ ಮಾರ್ಪಾಡನ್ನು ತರುವ ಸಾಧ್ಯತೆಯಿದೆ. ಸಾರ್ವಜನಿಕರು ಭ್ರಷ್ಟಾಚಾರದಿಂದ ಬೇಸತ್ತಿದ್ದು, ಪಾರದರ್ಶಕ ಮತ್ತು ಕಠಿಣ ಕ್ರಮಗಳನ್ನು ಬಯಸುತ್ತಿದ್ದಾರೆ. ಈ ಯೋಜನೆಯು ಯಶಸ್ವಿಯಾದಲ್ಲಿ, ಅಧಿಕಾರಿಗಳಲ್ಲಿ ಭೀತಿ ಮೂಡಲಿದೆ ಮತ್ತು ಸಾರ್ವಜನಿಕರು ನಿರ್ಭೀತರಾಗಿ ಸೇವೆ ಪಡೆಯಬಹುದಾಗಿದೆ.





