ಐಪಿಎಲ್ 2026ರಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿಜಯಯಾತ್ರೆ ಮುಂದುವರಿದಿದೆ. ಸದ್ಯದ ಟೂರ್ನಿಯಲ್ಲಿ ಸಾಂಘಿಕ ಹಾಗೂ ಅತ್ಯಂತ ಆಕ್ರಮಣಕಾರಿ ಪ್ರದರ್ಶನ ನೀಡುತ್ತಿರುವ ಆರ್ಸಿಬಿ, ಪ್ರಸಕ್ತ ಸಾಲಿನಲ್ಲಿ ಪ್ಲೇಆಫ್ ಹಂತಕ್ಕೆ (IPL Playoffs) ಅಧಿಕೃತವಾಗಿ ಅರ್ಹತೆ ಪಡೆದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆರ್ಸಿಬಿಯ ಈ ಅಮೋಘ ಆಟವನ್ನು ನೋಡಿ ಬೆರಗಾಗಿರುವ ಭಾರತ ತಂಡದ ಮಾಜಿ ಸ್ಫೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್, ಈ ವರ್ಷವೂ ಆರ್ಸಿಬಿಯೇ ಟ್ರೋಫಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಪ್ಲೇಆಫ್ಗೆ ರಾಜನಂತೆ ಎಂಟ್ರಿ ಕೊಟ್ಟ ಆರ್ಸಿಬಿ
ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡದ ವಿರುದ್ಧ 23 ರನ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಆರ್ಸಿಬಿ ಪ್ಲೇಆಫ್ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಟೂರ್ನಿಯಲ್ಲಿ ಇದುವರೆಗೆ ಆಡಿರುವ 13 ಪಂದ್ಯಗಳಲ್ಲಿ 9 ಜಯ ಹಾಗೂ 4 ಸೋಲುಗಳೊಂದಿಗೆ ಒಟ್ಟು 18 ಅಂಕಗಳನ್ನು ಕಲೆಹಾಕಿರುವ ಬೆಂಗಳೂರು ಪಡೆ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಮುನ್ನುಗ್ಗುತ್ತಿದೆ. ಕಳೆದ ಸೀಸನ್ನಂತೆಯೇ ಈ ಬಾರಿಯೂ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಮೂರೂ ವಿಭಾಗಗಳಲ್ಲಿ ತಂಡ ಅದ್ಭುತ ಲಯದಲ್ಲಿದೆ.
ವೀರು ಭವಿಷ್ಯ: ‘ಈ ವರ್ಷವೂ ಆರ್ಸಿಬಿಯದ್ದೇ ಟ್ರೋಫಿ’
ಕ್ರಿಕ್ಬಜ್ (Cricbuzz) ಶೋನಲ್ಲಿ ಆರ್ಸಿಬಿ ತಂಡದ ಪ್ರದರ್ಶನದ ಕುರಿತು ಮುಕ್ತವಾಗಿ ಮಾತನಾಡಿದ ವೀರೇಂದ್ರ ಸೆಹ್ವಾಗ್, “ಯಾವುದೇ ಒಂದು ಚಾಂಪಿಯನ್ ತಂಡವು ಅಗ್ರ ಎರಡು (Top 2) ಸ್ಥಾನಗಳಲ್ಲಿ ಪ್ಲೇಆಫ್ಗೆ ಅರ್ಹತೆ ಪಡೆಯಬೇಕು. ಆರ್ಸಿಬಿ ಪ್ರಸ್ತುತ ಆಡುತ್ತಿರುವ ಶೈಲಿಯನ್ನು ನೋಡಿದರೆ, ಈ ವರ್ಷವೂ ಅವರೇ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿಯಲಿದ್ದಾರೆ ಎಂದು ಸ್ಪಷ್ಟವಾಗಿ ತೋರುತ್ತಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆರ್ಸಿಬಿಗೆ ವಿಲನ್ ಆಗಲಿದೆಯೇ ಗುಜರಾತ್ ಟೈಟಾನ್ಸ್?
ಭವಿಷ್ಯ ನುಡಿಯುವುದರ ಜೊತೆಗೆ ಆರ್ಸಿಬಿ ಮುಂದಿರುವ ದೈತ್ಯ ಸವಾಲೊಂದನ್ನು ಸೆಹ್ವಾಗ್ ನೆನಪಿಸಿದ್ದಾರೆ. ಆರ್ಸಿಬಿಗೆ ಟ್ರೋಫಿ ರೇಸ್ನಲ್ಲಿ ಕಠಿಣ ಸ್ಪರ್ಧೆ ಒಡ್ಡಬಲ್ಲ ಏಕೈಕ ತಂಡ ಎಂದರೆ ಅದು ಶುಭ್ಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ (GT).
ಸೆಹ್ವಾಗ್ ಎಚ್ಚರಿಕೆ: “ಒಂದು ವೇಳೆ ಗುಜರಾತ್ ಟೈಟಾನ್ಸ್ ತಂಡ ಕೂಡ ಟಾಪ್ 2 ಸ್ಥಾನಗಳನ್ನು ಪಡೆದುಕೊಂಡರೆ ಆರ್ಸಿಬಿಗೆ ಪ್ಲೇಆಫ್ ಹಾದಿ ಕಷ್ಟಕರವಾಗಲಿದೆ. ಏಕೆಂದರೆ ಗುಜರಾತ್ ಅತ್ಯಂತ ಬಲಿಷ್ಠ ಬೌಲಿಂಗ್ ಘಟಕವನ್ನು ಹೊಂದಿದೆ. ಉಭಯ ತಂಡಗಳ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ಬ್ಯಾಲೆನ್ಸ್ ಆಗಿರುವುದರಿಂದ ಹಾಗೂ ಇರಡೂ ತಂಡಗಳ ಟಾಪ್-3 ಬ್ಯಾಟರ್ಗಳು ಸ್ಥಿರವಾಗಿ ರನ್ ಗಳಿಸುತ್ತಿರುವುದರಿಂದ ಪ್ಲೇಆಫ್ನಲ್ಲಿ ಇವರ ನಡುವಿನ ಕದನ ಹೈ-ವೋಲ್ಟೇಜ್ ಆಗಿರಲಿದೆ.”
ಒಟ್ಟಾರೆಯಾಗಿ ‘ಈ ಸಲ ಕಪ್ ನಮ್ದೇ’ ಎನ್ನುತ್ತಿದ್ದ ಅಭಿಮಾನಿಗಳಿಗೆ ಕಳೆದ ವರ್ಷ ಟ್ರೋಫಿ ಗೆದ್ದು ಕೊಟ್ಟಿದ್ದ ಆರ್ಸಿಬಿ, ಈಗ ‘ಬ್ಯಾಕ್ ಟು ಬ್ಯಾಕ್’ ಕಪ್ ಗೆಲ್ಲುವ ತವಕದಲ್ಲಿದೆ. ಸೆಹ್ವಾಗ್ ನುಡಿದ ಭವಿಷ್ಯದಂತೆ ಬೆಂಗಳೂರು ಪಡೆ ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.





