ನವದೆಹಲಿ: ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯನ್ನು ಖಂಡಿಸಿ ದೇಶದಾದ್ಯಂತ ಗಿಗ್ ಮತ್ತು ಪ್ಲಾಟ್ಫಾರ್ಮ್ ಆಧಾರಿತ ಕಾರ್ಮಿಕರು ಶನಿವಾರ ಬೃಹತ್ ಪ್ರತಿಭಟನೆಗೆ ಮುಂದಾಗಿದ್ದಾರೆ. ಆಹಾರ ವಿತರಣೆ, ಕ್ಯಾಬ್ ಸೇವೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ನೌಕರರು ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸೇವೆ ಸ್ಥಗಿತಗೊಳಿಸಿ ದೇಶವ್ಯಾಪಿ ಮುಷ್ಕರ ಆರಂಭಿಸಿದ್ದಾರೆ.
ಗಿಗ್ ಅಂಡ್ ಪ್ಲಾಟ್ಫಾರ್ಮ್ ಸರ್ವಿಸ್ ವರ್ಕರ್ಸ್ ಯೂನಿಯನ್ (GIPSWU) ನೇತೃತ್ವದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆ ದೇಶದ ಹಲವೆಡೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇಂಧನ ದರ ಏರಿಕೆಯಿಂದ ಜೀವನ ನಿರ್ವಹಣೆಯೇ ಕಷ್ಟವಾಗಿದ್ದು, ತಕ್ಷಣವೇ ಪ್ರತಿ ಕಿಲೋಮೀಟರ್ಗೆ ಕನಿಷ್ಠ 20 ರೂಪಾಯಿ ಸೇವಾ ದರ ನಿಗದಿಪಡಿಸಬೇಕು ಎಂಬುದು ಕಾರ್ಮಿಕರ ಪ್ರಮುಖ ಬೇಡಿಕೆಯಾಗಿದೆ.
ಇತ್ತೀಚೆಗೆ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್ಗೆ ಸುಮಾರು 3 ರೂಪಾಯಿವರೆಗೆ ಹೆಚ್ಚಿಸಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದ ಬೆಲೆ ಏರಿಕೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಮತ್ತು ಜಾಗತಿಕ ಮಾರುಕಟ್ಟೆಯ ಅಸ್ಥಿರತೆಯ ಪರಿಣಾಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತೈಲ ಕಂಪನಿಗಳು ಸ್ಪಷ್ಟಪಡಿಸಿದೆ. ಆದರೂ, ಇದರ ನೇರ ಹೊಡೆತ ಸಾಮಾನ್ಯ ಕಾರ್ಮಿಕರ ಮೇಲೆ ಬಿದ್ದಿದೆ.
ಸ್ವಿಗ್ಗಿ, ಜೊಮ್ಯಾಟೋ, ಬ್ಲಿಂಕಿಟ್ ಹಾಗೂ ಓಲಾ-ಉಬರ್ನಂತಹ ಆ್ಯಪ್ ಆಧಾರಿತ ಸೇವೆಗಳಲ್ಲಿ ಕೆಲಸ ಮಾಡುವ ಡೆಲಿವರಿ ಬಾಯ್ಸ್ ಮತ್ತು ಕ್ಯಾಬ್ ಚಾಲಕರು ಹೆಚ್ಚಿದ ಇಂಧನ ವೆಚ್ಚದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನಕ್ಕೆ ಹಲವು ಗಂಟೆಗಳ ಕಾಲ ದ್ವಿಚಕ್ರ ವಾಹನಗಳಲ್ಲಿ ಸುತ್ತಾಡುವ ಕಾರ್ಮಿಕರಿಗೆ ಇಂಧನ ವೆಚ್ಚವೇ ಈಗ ದೊಡ್ಡ ಭಾರವಾಗಿ ಪರಿಣಮಿಸಿದೆ.
ದೇಶದಾದ್ಯಂತ ಸುಮಾರು 1.2 ಕೋಟಿ ಗಿಗ್ ಮತ್ತು ಪ್ಲಾಟ್ಫಾರ್ಮ್ ಕಾರ್ಮಿಕರು ಈ ಸಮಸ್ಯೆಯಿಂದ ನೇರವಾಗಿ ಬಾಧಿತರಾಗಿದ್ದಾರೆ ಎಂದು ಸಂಘಟನೆಗಳು ತಿಳಿಸಿವೆ. ಈಗಾಗಲೇ ಹಣದುಬ್ಬರ, ಮನೆ ಬಾಡಿಗೆ, ಆಹಾರ ಪದಾರ್ಥಗಳ ಬೆಲೆ ಏರಿಕೆ ಸೇರಿದಂತೆ ಅನೇಕ ಆರ್ಥಿಕ ಒತ್ತಡಗಳನ್ನು ಎದುರಿಸುತ್ತಿರುವ ಕಾರ್ಮಿಕರಿಗೆ ಇಂಧನ ದರ ಏರಿಕೆ ಮತ್ತಷ್ಟು ಸಂಕಷ್ಟ ತಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಂಘಟನೆಯ ಅಧ್ಯಕ್ಷೆ ಸೀಮಾ ಸಿಂಗ್, “ಪೆಟ್ರೋಲ್ ಬೆಲೆ ಏರಿಕೆಯ ಜೊತೆಗೆ ಎಲ್ಪಿಜಿ ಸಿಲಿಂಡರ್ ದರವೂ ಹೆಚ್ಚಾಗಿದೆ. ಈಗಿನ ಆದಾಯದಲ್ಲಿ ಕುಟುಂಬ ನಿರ್ವಹಣೆ ಬಹಳ ಕಷ್ಟವಾಗಿದೆ. ಸರ್ಕಾರ ಮತ್ತು ಕಂಪನಿಗಳು ನಮ್ಮ ಸಮಸ್ಯೆಯನ್ನು ತಕ್ಷಣ ಪರಿಹರಿಸಬೇಕು” ಎಂದು ಆಗ್ರಹಿಸಿದ್ದಾರೆ.
ಅವರು ಮುಂದುವರೆದು, “ಒಂದು ವೇಳೆ ಆದಾಯ ಹೆಚ್ಚಿಸುವ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಸಾವಿರಾರು ಕಾರ್ಮಿಕರು ಈ ಉದ್ಯೋಗವನ್ನೇ ತೊರೆಯುವ ಪರಿಸ್ಥಿತಿ ಎದುರಾಗಬಹುದು. ಹೀಗಾಗಿ ಪ್ರತಿ ಕಿಲೋಮೀಟರ್ಗೆ ಕನಿಷ್ಠ 20 ರೂಪಾಯಿ ಸೇವಾ ದರ ನಿಗದಿಪಡಿಸುವುದು ಅತ್ಯಗತ್ಯ” ಎಂದು ಹೇಳಿದ್ದಾರೆ.
ಗಿಗ್ ಕಾರ್ಮಿಕರ ಈ ಮುಷ್ಕರದಿಂದ ಜನಸಾಮಾನ್ಯರಿಗೂ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಆಹಾರ ವಿತರಣೆ, ತುರ್ತು ಪಾರ್ಸೆಲ್ ಸೇವೆ ಹಾಗೂ ಕ್ಯಾಬ್ ಬುಕ್ಕಿಂಗ್ ಸೇವೆಗಳಲ್ಲಿ ವಿಳಂಬ ಉಂಟಾಗುತ್ತಿದೆ. ಪ್ರಮುಖ ನಗರಗಳಲ್ಲಿ ಆ್ಯಪ್ ಸೇವೆಗಳು ನಿಧಾನಗೊಂಡಿರುವ ವರದಿಗಳೂ ಲಭ್ಯವಾಗಿವೆ.





