ಕೊಪ್ಪಳ (ಮೇ.15): ತುಂಗಭದ್ರಾ ಸೇತುವೆಯ ಮೇಲಿಂದ ಟ್ರ್ಯಾಕ್ಟರ್ ಕೆಳಗೆ ಬಿದ್ದು ಒಂದೇ ಕುಟುಂಬದ 7 ಜನರು ಮೃತಪಟ್ಟಿರುವ ಘಟನೆ ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ನಡೆದಿದೆ. ಈ ಘಟನೆಯಲ್ಲಿ 10 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆ ಸಮೀಪದ ಟಿಬಿ ಡ್ಯಾಂ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಈ ದುರಂತ ಸಂಭವಿಸಿದೆ.
ಮೃತರೆಲ್ಲರೂ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮರ್ಲಾಯನಹಳ್ಳಿ ಹಾಗೂ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಯಶವಂತ ನಗರ ನಿವಾಸಿಗಳಾಗಿದ್ದಾರೆ. ಕುಟುಂಬಸ್ಥರು ಹುಲಿಗೆಮ್ಮ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ಟ್ರ್ಯಾಕ್ಟರ್‌ನಲ್ಲಿ ಸುಮಾರು 16 ಜನರು ಪ್ರಯಾಣಿಸುತ್ತಿದ್ದರು. ಇದೇ ವೇಳೆ ಹಿಂದಿನಿಂದ ವೇಗವಾಗಿ ಬಂದ ಟ್ಯಾಂಕರ್ ಲಾರಿ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ಸೇತುವೆಯಿಂದ ಕೆಳಗೆ ಉರುಳಿ ಬಿದ್ದಿದೆ. ಪರಿಣಾಮ ಸ್ಥಳದಲ್ಲೇ 7 ಮಂದಿ ಸಾವನ್ನಪ್ಪಿದ್ದು, ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳ ಕಿರುಚಾಟ ಕೇಳಿ ಸ್ಥಳೀಯರು ಹಾಗೂ ಪೊಲೀಸರು ತಕ್ಷಣ ರಕ್ಷಣೆಗೆ ಮುಂದಾದರು.. ಗಾಯಾಳುಗಳನ್ನು ಅಂಬ್ಯುಲೆನ್ಸ್ ಮೂಲಕ ಹೊಸಪೇಟೆ ಮತ್ತು ಕೊಪ್ಪಳ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ದುರಂತದಲ್ಲಿ ಮೃತಪಟ್ಟವರಲ್ಲಿ ಕೆಂಚಪ್ಪ (35), ಮಹಾಂತೇಶ್ (18), ಒಂದು ವರ್ಷದ ಮಗು ಭರತ್, 12 ವರ್ಷದ ಸವಿತಾ, ಮಾರೇಶ್ ಹಾಗೂ ಗೌರಮ್ಮ ಸೇರಿದ್ದಾರೆ. ಇನ್ನು ಕೆಲ ಮೃತರ ಗುರುತು ಪತ್ತೆ ಕಾರ್ಯ ಮುಂದುವರಿದಿದೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಹಾಗೂ ಹೊಸಪೇಟೆ ಡಿವೈಎಸ್ಪಿ ಕೆಪಿ ಮುರುಳಿಧರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊಪ್ಪಳ ಎಸ್‌ಪಿ ಎಲ್. ಅರಸಿದ್ದಿ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಹೊಸಪೇಟೆ ಸರ್ಕಾರಿ ಆಸ್ಪತ್ರೆ ಶವಾಗಾರದ ಎದುರು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.





