ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಿಂದಾಗಿ ಈಗಾಗಲೇ ಜನಸಾಮಾನ್ಯರು ತತ್ತರಿಸಿರುವಾಗ, ಇದೀಗ ಅಕ್ಕಿ ದರದಲ್ಲಿ ಭಾರೀ ಏರಿಕೆಯಾಗುತ್ತಿದೆ. ಕಳೆದ ಒಂದು ವಾರದಿಂದ ರಾಜ್ಯದ ಮಾರುಕಟ್ಟೆಗಳಲ್ಲಿ ಸಾಮಾನ್ಯ ಹಾಗೂ ಪ್ರೀಮಿಯಂ ಅಕ್ಕಿ ಬೆಲೆಗಳು ಗಣನೀಯವಾಗಿ ಹೆಚ್ಚಾಗಿದೆ.
ಪ್ರತಿ ಕೆಜಿ ಅಕ್ಕಿಗೆ ₹3 ರಿಂದ ₹10ರವರೆಗೆ ಏರಿಕೆಯಾಗಿದ್ದು, 26 ಕೆಜಿ ಬ್ಯಾಗ್‌ನ ದರ ₹50 ರಿಂದ ₹100ರವರೆಗೆ ಹೆಚ್ಚಳವಾಗಿದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲೆ ತೀವ್ರ ಹೊರೆ ಬಿದ್ದಿದೆ.
ಏಕೆ ಏರಿಕೆ?
- ಮಳೆ ಕೊರತೆಯಿಂದಾಗಿ ಅಕ್ಕಿ ಉತ್ಪಾದನೆ ಕುಸಿದಿದೆ
- ತುಂಗಭದ್ರ ಜಲಾಶಯದ ಪ್ರದೇಶದಲ್ಲಿ ಒಂದು ಬೆಳೆ ಸಂಪೂರ್ಣವಾಗಿ ವಿಫಲವಾಗಿದೆ
- ಸಾರಿಗೆ ವೆಚ್ಚ ಮತ್ತು ಗೋದಾಮು ಶುಲ್ಕ ಹೆಚ್ಚಳ
- ಪೆಟ್ರೋಲ್-ಡೀಸೆಲ್ ದರ ಏರಿಕೆಯ ಪರಿಣಾಮ
ಅಕ್ಕಿ ದರಗಳು (ಪ್ರತಿ ಕೆಜಿ):
| ಅಕ್ಕಿ ವಿಧ | ಹಿಂದಿನ ದರ | ಇಂದಿನ ದರ | ಏರಿಕೆ |
| ಸೋನಾ ಮಸೂರಿ (ಸ್ಟೀಮ್) | ₹43 | ₹48 | ₹5 |
| RNR ಸ್ಟೀಮ್ | ₹43 | ₹48 | ₹5 |
| RNR ರಾ ರೈಸ್ | ₹58 | ₹62 | ₹4 |
| ಸೋನಾ ಮಸೂರಿ (ರಾ ರೈಸ್) | ₹50 | ₹56 | ₹6 |
| ಕೋಲಂ ರಾ ರೈಸ್ | ₹68 | ₹75 | ₹7 |
ರಾಜ್ಯದ ಬಹುತೇಕ ಮಾರುಕಟ್ಟೆಗಳಲ್ಲಿ ಈ ಏರಿಕೆ ಕಂಡುಬಂದಿದೆ. ವಿಶೇಷವಾಗಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ ಮತ್ತು ಕಲಬುರಗಿ ನಗರಗಳಲ್ಲಿ ಅಕ್ಕಿ ದರ ತೀವ್ರವಾಗಿ ಹೆಚ್ಚಳವಾಗಿದೆ.
ಜನಸಾಮಾನ್ಯರ ಆತಂಕ ಈಗಾಗಲೇ ಪೆಟ್ರೋಲ್-ಡೀಸೆಲ್ ದರ ಏರಿಕೆಯಿಂದ ಸಾರಿಗೆ ವೆಚ್ಚ ಹೆಚ್ಚಾಗಿರುವಾಗ, ಅಕ್ಕಿ ದರ ಏರಿಕೆಯು ದೈನಂದಿನ ಜೀವನ ವೆಚ್ಚವನ್ನು ಮತ್ತಷ್ಟು ಹೆಚ್ಚಿಸಿದೆ. ರಾಜ್ಯ ಸರ್ಕಾರ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ.
ಕೃಷಿ ಇಲಾಖೆ ಅಧಿಕಾರಿಗಳ ಪ್ರಕಾರ, ಮುಂದಿನ ದಿನಗಳಲ್ಲಿ ಮಳೆ ಸುಧಾರಿಸಿದರೆ ಅಕ್ಕಿ ಬೆಲೆ ಸ್ಥಿರಗೊಳ್ಳುವ ಸಾಧ್ಯತೆ ಇದೆ. ಆದರೆ ಪ್ರಸ್ತುತ ಪರಿಸ್ಥಿತಿ ಮಧ್ಯಮ ವರ್ಗದ ಕುಟುಂಬಗಳಿಗೆ ದೊಡ್ಡ ಆರ್ಥಿಕ ಹೊರೆಯಾಗಿದೆ. ಈ ರೀತಿಯಾಗಿ ಜನಸಾಮಾನ್ಯರ ಮೇಲೆ ಬರೆ ಮೇಲೆ ಬರೆಯನ್ನು ಸರ್ಕಾರ ಎಳೆಯುತ್ತಿದೆ. ಜೊತೆಗೆ ಪೆಟ್ರೋಲ್ ಡಿಸೇಲ್ ಬೆಲೆ ಬೆನ್ನಲ್ಲೇ ಅಕ್ಕಿ ಬೆಲೆ ಕೂಡ ಏರಿಕೆಯಾಗಿರುವುದು ಇನ್ನೊಂದು ಹೊಡೆತ ಕೊಟ್ಟಂತಾಗಿದೆ.





