ಪಾಕಿಸ್ತಾನದ ಖೈಬರ್ ಪಖ್ತೂನ್ಖ್ವಾ ಪ್ರಾಂತ್ಯದ ಬನ್ನು ಜಿಲ್ಲೆಯ ಫತೇಹ್ ಖೇಲ್ ಪ್ರದೇಶದಲ್ಲಿ ಭೀಕರ ಆತ್ಮಹತ್ಯಾ ಬಾಂಬ್ ದಾಳಿ ಸಂಭವಿಸಿದ್ದು, ಕನಿಷ್ಠ 15 ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಸ್ಫೋಟಕಗಳಿಂದ ತುಂಬಿದ್ದ ವಾಹನವನ್ನು ಪೊಲೀಸ್ ಚೆಕ್ಪೋಸ್ಟ್ಗೆ ಡಿಕ್ಕಿ ಹೊಡೆಸಿದ ಪರಿಣಾಮ ಸಂಭವಿಸಿದ ಸ್ಫೋಟದಲ್ಲಿ ಚೆಕ್ಪೋಸ್ಟ್ ಸಂಪೂರ್ಣ ಧ್ವಂಸಗೊಂಡಿದೆ. ಘಟನೆಯಲ್ಲಿ ಮೂವರು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವರು ಅವಶೇಷಗಳಡಿ ಸಿಲುಕಿಕೊಂಡಿದ್ದರು.
ಭಾರೀ ಸ್ಫೋಟದಲ್ಲಿ ಚೆಕ್ ಪೋಸ್ಟ್ ನಾಶ
ಶನಿವಾರ ತಡರಾತ್ರಿ ಈ ಆತ್ಮಹತ್ಯಾ ದಾಳಿ ನಡೆದಿದ್ದು, ಸ್ಫೋಟದ ರಭಸಕ್ಕೆ ಪೊಲೀಸ್ ಚೆಕ್ ಪೋಸ್ಟ್ ಸಂಪೂರ್ಣವಾಗಿ ನೆಲಸಮವಾಯಿತು. ಹಲವಾರು ಪೊಲೀಸ್ ಸಿಬ್ಬಂದಿ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದರು. ಸ್ಫೋಟದ ಶಬ್ದವು ಜಿಲ್ಲೆಯ ದೂರದ ಪ್ರದೇಶಗಳಲ್ಲಿಯೂ ಕೇಳಿಬಂದಿದೆ. ಅಷ್ಟೇ ಅಲ್ಲ, ಸ್ಫೋಟದ ಪ್ರಖರತೆಗೆ ಚೆಕ್ ಪೋಸ್ಟ್ ಸುತ್ತಮುತ್ತಲಿನ ನಾಗರಿಕರ ಮನೆಗಳು ಮತ್ತು ಕಟ್ಟಡಗಳಿಗೂ ಹಾನಿಯಾಗಿದೆ. ಹಲವಾರು ಮನೆಗಳ ಛಾವಣಿಗಳು ಕುಸಿದು ಬಿದ್ದಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮೃತರು ಮತ್ತು ಗಾಯಕರ ಗುರುತು
ಬನ್ನು ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಸಜ್ಜದ್ ಖಾನ್ ಅವರು ಮೃತರ ಹೆಸರುಗಳನ್ನು ಬಹಿರಂಗಪಡಿಸಿದ್ದಾರೆ. ಮೃತ ಪೊಲೀಸ್ ಸಿಬ್ಬಂದಿಯನ್ನು ರೆಹಮತ್ ಅಯಾಜ್, ಸನಾವುಲ್ಲಾ, ನಿಯಾಜ್ ಅಲಿ, ಹಬೀಬ್, ಸಾದುಲ್ಲಾ ಜಾನ್, ಕಮ್ರಾನ್ (ಖಾನ್ ಸಿಕಂದರ್ ಪುತ್ರ), ಮತ್ತೊಬ್ಬ ಕಮ್ರಾನ್, ನೂರುಲ್ಲಾ, ಅಬಿದ್ ಜಾನಿ, ಇಮ್ರಾನ್, ಕಲೀಮುಲ್ಲಾ, ಸಾದಿಖುಲ್ಲಾ, ಮುನೀರ್ ಆಲಂ ಖಾನ್, ರಹತುಲ್ಲಾ ಖಾನ್ ಮತ್ತು ಫಾರೂಕ್ ಎಂದು ಗುರುತಿಸಲಾಗಿದೆ.
ಗಾಯಗೊಂಡ ಅಧಿಕಾರಿಗಳನ್ನು ಮುಜ್ರಿಮ್ ಫಿರೋಜ್, ಹಯಾತುಲ್ಲಾ ಮತ್ತು ಖದರುಲ್ಲಾ ಎಂದು ಗುರುತಿಸಲಾಗಿದೆ.
ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ
ದಾಳಿಯ ತಕ್ಷಣವೇ ಭದ್ರತಾ ಪಡೆಗಳು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಆರಂಭಿಸಿದವು. ಕುಸಿದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಅಧಿಕಾರಿಗಳನ್ನು ಹೊರತೆಗೆಯಲು ರಾತ್ರಿಯಿಡೀ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮುಂದುವರೆದವು. ರಕ್ಷಣಾ ತಂಡಗಳು ಅವಶೇಷಗಳಡಿಯಿಂದ ಮೂವರು ಪೊಲೀಸ್ ಅಧಿಕಾರಿಗಳನ್ನು ಜೀವಂತವಾಗಿ ಹೊರತೆಗೆಯುವಲ್ಲಿ ಯಶಸ್ವಿಯಾದವು. ಉಳಿದಂತೆ 15 ಮಂದಿಯ ಮೃತದೇಹಗಳನ್ನು ಹೊರತೆಗೆಯಲಾಗಿದೆ.





