ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಅವಿವಾಹಿತ ಪುರುಷರನ್ನು ಗುರಿಯಾಗಿಸಿಕೊಂಡು ನಕಲಿ ಮದುವೆಗಳ ಮೂಲಕ ಹಣ ಮತ್ತು ಚಿನ್ನಾಭರಣಗಳನ್ನು ವಂಚಿಸುತ್ತಿದ್ದ ಒಂದು ದೊಡ್ಡ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಒಂದೇ ಮಹಿಳೆ 9 ಬಾರಿ ಮದುವೆಯಾಗಿ ಪ್ರತಿ ಬಾರಿಯೂ ವರನಿಂದ ಹಣ ಮತ್ತು ಆಭರಣಗಳನ್ನು ಪಡೆದು ಕೆಲವೇ ದಿನಗಳಲ್ಲಿ ಪರಾರಿಯಾಗುತ್ತಿದ್ದ ಆರೋಪ ಕೇಳಿಬಂದಿದೆ. ಏಜೆಂಟ್‌ಗಳ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದ ಈ ಗ್ಯಾಂಗ್ ಗ್ರಾಮೀಣ ಭಾಗದ ಅವಿವಾಹಿತ ಪದವೀಧರ ಯುವಕರ ದೌರ್ಬಲ್ಯವನ್ನು ಬಳಸಿಕೊಳ್ಳುತ್ತಿತ್ತು.
ಘಟನೆ ವಿವರ:
ಯೋಗೇಶ್ ಶಿಂಧೆ ಎಂಬ ಮಧ್ಯವರ್ತಿಯ ಮೂಲಕ ಮಹಿಳೆಯನ್ನು ಪರಿಚಯ ಮಾಡಿಕೊಂಡು ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದರು. ಮದುವೆಗೆ ಮುನ್ನ ಏಜೆಂಟ್‌ಗಳು ದೊಡ್ಡ ಮೊತ್ತದ ಹಣ ವಸೂಲಿ ಮಾಡಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ವಧು ಮತ್ತು ಏಜೆಂಟ್‌ಗಳು ಹಣ ಮತ್ತು ಚಿನ್ನದ ಆಭರಣಗಳೊಂದಿಗೆ ಕಣ್ಮರೆಯಾಗಿದ್ದಾರೆ.
ತನಿಖೆಯಲ್ಲಿ ಆಘಾತಕಾರಿ ಸತ್ಯ ಬಯಲಾಗಿದೆ. ಈ ಮಹಿಳೆ ಇದಕ್ಕೂ ಮುಂಚೆ ಎಂಟು ಪುರುಷರನ್ನು ಇದೇ ರೀತಿ ಮದುವೆಯಾಗಿ ವಂಚಿಸಿದ್ದಳು. ಪ್ರತಿ ಬಾರಿಯೂ ಹಣ ಮತ್ತು ಆಭರಣಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಳು ಎಂದು ತಿಳಿದುಬಂದಿದೆ.
ಈ ಜಾಲವು ಮುಖ್ಯವಾಗಿ ಬೀಡ್ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ವಧುವಿಗಾಗಿ ಹೆಣಗಾಡುತ್ತಿರುವ ಅವಿವಾಹಿತ ಪುರುಷರನ್ನು ಗುರಿಯಾಗಿಸಿಕೊಂಡಿತ್ತು. ಮದುವೆ ಮಾಡಿಸುವ ನೆಪದಲ್ಲಿ ಭಾರಿ ಮೊತ್ತವನ್ನು ವಸೂಲಿ ಮಾಡುವುದು ಇವರ ವಿಧಾನವಾಗಿತ್ತು.
ತೀವ್ರ ಮಾನಸಿಕ ಅಘಾತಕ್ಕೊಳಗಾದ ಯೋಗೇಶ್ ಶಿಂಧೆ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದು, “ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಆತ್ಮಹತ್ಯೆಯ ಆಲೋಚನೆಯಲ್ಲಿದ್ದೇನೆ” ಎಂದು ತಿಳಿಸಿದ್ದಾರೆ.
ಪೊಲೀಸ್ ಕ್ರಮ ಚಕ್ಲಾಂಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಂಚನೆ ಜಾಲದ ಇತರ ಸದಸ್ಯರನ್ನು ಪತ್ತೆಹಚ್ಚಲು ತನಿಖೆ ತೀವ್ರಗೊಳಿಸಿದ್ದಾರೆ. ಇನ್ನಷ್ಟು ಮಂದಿ ಈ ಜಾಲಕ್ಕೆ ಬಲಿಯಾಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.





