ಮುಂಬೈ, (ಏಪ್ರಿಲ್ 30): ಐಪಿಎಲ್ 2026 ರ ಮುಂಬೈ ಇಂಡಿಯನ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ (SRH) ನಡುವಿನ ರೋಚಕ ಪಂದ್ಯವು ದಾಖಲೆಗಳನ್ನು ಸೃಷ್ಟಿಸಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ (ಏಪ್ರಿಲ್ 29) ನಡೆದ ಈ ಪಂದ್ಯದಲ್ಲಿ SRH ತಂಡವು 244 ರನ್‌ಗಳ ಬೃಹತ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿ 6 ವಿಕೆಟ್‌ಗಳಿಂದ ಐತಿಹಾಸಿಕ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಮಹತ್ವದ ಬದಲಾವಣೆಗಳಾಗಿವೆ.
ಅಭಿಷೇಕ್ ಶರ್ಮಾಗೆ ಆರೆಂಜ್ ಕ್ಯಾಪ್
ಪಂದ್ಯದಲ್ಲಿ SRH ಪರ ಕೇವಲ 24 ಎಸೆತಗಳಲ್ಲಿ 45 ರನ್ ಸಿಡಿಸಿದ ಅಭಿಷೇಕ್ ಶರ್ಮ, ತಮ್ಮ ಒಟ್ಟು ರನ್‌ಗಳ ಸಂಖ್ಯೆಯನ್ನು 425 ಕ್ಕೆ ತಲುಪಿಸಿದ್ದಾರೆ. ಇದರೊಂದಿಗೆ ಅವರು ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ.ಆದರೆ ಇದುವರೆಗೆ 15 ವರ್ಷದ ವೈಭವ್ ಸೂರ್ಯವಂಶಿ ಈ ಸ್ಥಾನದಲ್ಲಿದ್ದರು. ಅವರನ್ನು 25 ರನ್‌ಗಳ ಹೆಚ್ಚುವರಿಯೊಂದಿಗೆ ಅಭಿಷೇಕ್ ಹಿಂದಿಕ್ಕಿದ್ದಾರೆ.
ಹೆನ್ರಿಕ್ ಕ್ಲಾಸೆನ್ ಅವರು 414 ರನ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಅವರು 65* ರನ್‌ಗಳ ಅಜೇಯ ಅರ್ಧಶತಕದ ಮೂಲಕ ತಮ್ಮ ರನ್‌ಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿದ್ದಾರೆ. ಟಾಪ್ 10 ಪಟ್ಟಿಯಲ್ಲಿ ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಪ್ರಭ್ಸಿಮ್ರಾನ್ ಸಿಂಗ್, ಶುಭಮನ್ ಗಿಲ್, ಸಾಯಿ ಸುದರ್ಶನ್, ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಸ್ಥಾನ ಪಡೆದಿದ್ದಾರೆ.
ಪರ್ಪಲ್ ಕ್ಯಾಪ್ ರೇಸ್ನಲ್ಲಿ ಇಶಾನ್ ಮಾಲಿಂಗ್ ಅಗ್ರಸ್ಥಾನ
ಶ್ರೀಲಂಕಾದ ವೇಗದ ಬೌಲರ್ ಇಶಾನ್ ಮಾಲಿಂಗ್ ಮುಂಬೈ ವಿರುದ್ಧದ ಪಂದ್ಯದಲ್ಲಿ 4 ಓವರ್‌ಗಳಲ್ಲಿ ಕೇವಲ 29 ರನ್ ನೀಡಿ 1 ವಿಕೆಟ್ ಪಡೆದರು. ಈ ಒಂದು ವಿಕೆಟ್ ಅವರ ಒಟ್ಟು ವಿಕೆಟ್‌ಗಳ ಸಂಖ್ಯೆಯನ್ನು 15 ಕ್ಕೆ ತಲುಪಿಸಿದೆ. ಈ ವರ್ಷದ ಐಪಿಎಲ್‌ನಲ್ಲಿ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಅವರು ಇದೀಗ ಮುಂಚೂಣಿಯಲ್ಲಿದ್ದಾರೆ.
ಆರ್ಸಿಬಿ ತಂಡದ ಭುವನೇಶ್ವರ್ ಕುಮಾರ್ 14 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ರಾಜಸ್ಥಾನ್ ರಾಯಲ್ಸ್ ನ ಜೋಫ್ರಾ ಆರ್ಚರ್ 14 ವಿಕೆಟ್‌ಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ನ ಅನ್ಶುಲ್ ಕಾಂಬೋಜ್ ಕೂಡ 14 ವಿಕೆಟ್‌ಗಳನ್ನು ಹೊಂದಿದ್ದು, ರನ್‌ರೇಟ್ ನಿಯಮದ ಪ್ರಕಾರ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಅಂಕಪಟ್ಟಿಯಲ್ಲಿ SRHನ ಪ್ರಗತಿ, ಮುಂಬೈ ಕುಸಿತ
ಈ ಗೆಲುವಿನೊಂದಿಗೆ SRH ತಂಡವು ಒಂಬತ್ತು ಪಂದ್ಯಗಳಲ್ಲಿ ಆರನೇ ಜಯ ಸಾಧಿಸಿದೆ. ಅವರು 12 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಆರ್‌ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ಕೂಡ 12 ಅಂಕಗಳನ್ನು ಹೊಂದಿದ್ದರೂ, ಉತ್ತಮ ರನ್ರೇಟ್ ಕಾರಣದಿಂದಾಗಿ ಆರ್‌ಸಿಬಿ ಎರಡನೇ ಸ್ಥಾನದಲ್ಲಿದೆ.
ಮತ್ತೊಂದೆಡೆ, ಸೋತ ಮುಂಬೈ ಇಂಡಿಯನ್ಸ್ ತಂಡವು ಎಂಟು ಪಂದ್ಯಗಳಿಂದ ಕೇವಲ 4 ಅಂಕಗಳನ್ನು ಪಡೆದುಕೊಂಡಿದೆ. ಮುಂಬೈ ಅಂಕಪಟ್ಟಿಯಲ್ಲಿ ಈಗ 9ನೇ ಸ್ಥಾನಕ್ಕೆ ಕುಸಿದಿದೆ. ಅಂಕಪಟ್ಟಿಯಲ್ಲಿ ಕೆಳಗಿನ ಸ್ಥಾನದಲ್ಲಿರುವುದರಿಂದ ಮುಂಬೈಗೆ ಪ್ಲೇಆಫ್ ಅವಕಾಶಗಳನ್ನು ಕಾಯ್ದುಕೊಳ್ಳುವುದು ಕಠಿಣ ಸವಾಲಾಗಿ ಪರಿಣಮಿಸಿದೆ.
ಪಂದ್ಯದ ವಿವರ
ಟ್ರಾವಿಸ್ ಹೆಡ್ (76) ಮತ್ತು ಹೆನ್ರಿಕ್ ಕ್ಲಾಸೆನ್ (65*) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ SRH ತಂಡವು 18.4 ಓವರ್ಗಳಲ್ಲಿಯೇ 244 ರನ್ಗಳನ್ನು ಬೆನ್ನಟ್ಟಿತು. ಹೆಡ್ ಅವರ ಆಕ್ರಮಣಕಾರಿ ಶೈಲಿ ಮತ್ತು ಕ್ಲಾಸೆನ್ ಅವರ ಸ್ಥಿರತೆಯೇ ಗೆಲುವಿನ ಮೂಲಸ್ತಂಭವಾಯಿತು. ಮುಂಬೈ ತಂಡದ ಬೌಲರ್ಗಳು SRHನ ಬಿರುಸಿನ ಬ್ಯಾಟಿಂಗ್ ಮುಂದೆ ನಿಲ್ಲಲು ಸಾಧ್ಯವಾಗಲಿಲ್ಲ.





