ಚಂಬಲ್ (ಏ.28): ದೇಶಾದ್ಯಂತ ತೀವ್ರ ಭೀಕರ ಬಿಸಿಲು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ತಾಪಮಾನ 40 ಡಿಗ್ರಿ ದಾಟಿದೆ. ಹವಾನಿಯಂತ್ರಿತ (ಎಸಿ) ಕೊಠಡಿಗಳು, ಕಾರುಗಳತ್ತ ಜನರು ಮೊರೆ ಹೋಗುತ್ತಿದ್ದಾರೆ. ಆದರೆ ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ನೀಡಿರುವ ವಿಚಿತ್ರ ಸಲಹೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
“ಬಿಸಿಲಿನ ಧಗೆ ತಡೆಯಲು ನಿಮ್ಮ ಕಿಸೆಯಲ್ಲಿ ಈರುಳ್ಳಿ ಇಟ್ಟುಕೊಳ್ಳಿ. ಏನೂ ತೊಂದರೆಯಾಗಲ್ಲ” ಎಂದು ಸಚಿವರು ಸಲಹೆ ನೀಡಿದ್ದಾರೆ. ಮಧ್ಯಪ್ರದೇಶದ ಶಿವಪುರಿಯಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ತಾವು ಎಂದಿಗೂ ಎಸಿ ಬಳಸುವುದಿಲ್ಲವೆಂದು ಹೇಳಿಕೊಂಡಿದ್ದಾರೆ.
“ನಾನು ನನ್ನ ಕಾರಿನಲ್ಲಿ ಎಸಿ ಬಳಸುವುದಿಲ್ಲ. ಎಸಿ ವಾತಾವರಣದಲ್ಲಿ ಕುಳಿತುಕೊಳ್ಳಲು ನಾನು ಇಷ್ಟಪಡುವುದಿಲ್ಲ. ಮೇ ಮತ್ತು ಜೂನ್‌ನಲ್ಲಿ 51 ಡಿಗ್ರಿ ಶಾಖದಲ್ಲೂ ನಾನು ಹೇಗೆ ಇರುತ್ತೇನೆ ಎಂದು ಜನರು ಕೇಳುತ್ತಾರೆ. ಆಗ ನಾನು ಹೇಳುವುದು, ಇದು ಚಂಬಲ್ ಚರ್ಮ ಎಂದು,” ಎಂದು ಸಿಂಧಿಯಾ ಹೇಳಿದರು.
ತಮ್ಮ ಜೇಬಿನಿಂದ ಈರುಳ್ಳಿಯನ್ನು ತೋರಿಸುತ್ತಾ, “ಇಂದಿನ ಕಾಲದಲ್ಲಿ ಎಲ್ಲರೂ ಪೆಟ್ಟಿಗೆಗಳನ್ನು, ಮೊಬೈಲ್‌ಗಳನ್ನು ಹೊತ್ತೊಯ್ಯುತ್ತಾರೆ. ಆದರೆ ಸಂವಹನ ಸಚಿವರು (ತಾನು) ಈರುಳ್ಳಿಯನ್ನು ಹೊತ್ತೊಯ್ಯುತ್ತಿದ್ದಾರೆ. ಇವೆಲ್ಲ ಹಳೆಯ ವಿಧಾನಗಳು. ವೈದ್ಯಕೀಯ ಕ್ಷೇತ್ರ ಮುಂದುವರೆದಿದೆ ಎಂಬ ಕಾರಣಕ್ಕೆ ನಾವು ಈ ಸಾಂಪ್ರದಾಯಿಕ ಉಪಾಯಗಳನ್ನು ಮರೆಯಬಾರದು,” ಎಂದು ಅಭಿಪ್ರಾಯಪಟ್ಟಿದ್ದಾರೆ.
ವೈದ್ಯರು ಏನು ಹೇಳುತ್ತಾರೆ?
ಸಿಂಧಿಯಾ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿವೆ. ಕೆಲವರು ಇದನ್ನು ಹಳೆಯ ನಂಬಿಕೆ ಎಂದು ತಳ್ಳಿಹಾಕಿದ್ದರೆ, ಇನ್ನು ಕೆಲವರು ತಮಾಷೆ ಮಾಡುತ್ತಿದ್ದಾರೆ. ಆದರೆ ವೈದ್ಯಕೀಯ ತಜ್ಞರ ಪ್ರಕಾರ, ಜೇಬಿನಲ್ಲಿ ಈರುಳ್ಳಿ ಇಟ್ಟುಕೊಂಡರೆ ಸೂರ್ಯಾಘಾತ ಅಥವಾ ಬಿಸಿಲಿನ ಧಗೆ ತಡೆಯಲು ಸಾಧ್ಯವಿಲ್ಲ. ಈರುಳ್ಳಿಯಲ್ಲಿ ಕ್ವೆರ್ಸೆಟಿನ್ ಮತ್ತು ಸಲ್ಫರ್ ಸಂಯುಕ್ತಗಳಿವೆ, ಅವುಗಳು ಆರೋಗ್ಯಕ್ಕೆ ಒಳ್ಳೆಯದು. ಆದರೆ ಅವುಗಳನ್ನು ತಿಂದಾಗ ಮಾತ್ರ ಕೆಲವು ಪ್ರಯೋಜನಗಳು ದೊರಕುತ್ತವೆ ಹೊರತು, ಜೇಬಿನಲ್ಲಿಟ್ಟುಕೊಂಡರೆ ಶಾಖ ತಡೆಯುವ ಶಕ್ತಿ ಬರುವುದಿಲ್ಲ.
ವೈರಲ್ ಪ್ರತಿಕ್ರಿಯೆಗಳು:
ಒಬ್ಬ ಬಳಕೆದಾರರು ಟ್ವೀಟ್ ಮಾಡಿದ್ದಾರೆ. “ಬಿಸಿಲಿನ ಧಗೆಗೆ ಈರುಳ್ಳಿ ಸಲಹೆ ನೀಡುವ ಸಚಿವರು, ನೀರಿನ ಅಭಾವ, ವಿದ್ಯುತ್ ಕೊರತೆ ಬಗ್ಗೆ ಏಕೆ ಮಾತನಾಡುವುದಿಲ್ಲ?” ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ. “ಸಿಂಧಿಯಾ ಜೇಬಲ್ಲಿ ಈರುಳ್ಳಿ ಇದೆ, ನಾವು ನಂಬಿಕೊಂಡರೆ ನಮ್ಮ ಜೇಬುಗಳು ಖಾಲಿಯಾಗುತ್ತವೆ ಏಕೆಂದರೆ ಎಸಿ ಇಲ್ಲದೆ ಕೆಲಸ ಮಾಡಲಾಗದಷ್ಟು ಬಿಸಿ.” ಎಂದು ಹೇಳಿದ್ದಾರೆ..





