ಬೆಂಗಳೂರು (ಏ.23): ರಸ್ತೆಯಲ್ಲಿ ಯುವತಿಯರ ಮೇಲೆ ಅಸಭ್ಯವಾಗಿ ವರ್ತಿಸಿದ ಇಬ್ಬರು ಫುಡ್ ಡೆಲಿವರಿ ಬಾಯ್ಸ್‌ರನ್ನು ಸೆಂಟ್ರಲ್ ಕ್ರೈಂ ಬ್ರಾಂಚ್ (ಸಿಸಿಬಿ) ಪೊಲೀಸರು ಬಂಧಿಸಿ ಕಠಿಣ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಯಲಹಂಕ ಸಮೀಪದ ಕೋಗಿಲು ಮುಖ್ಯರಸ್ತೆಯ ಮಾರುತಿನಗರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ಯಾರೀ ಆರೋಪಿಗಳು?
ಈ ಕಿಡಿಗೇಡಿಗಳು ಸಿಂಗನಾಯನಹಳ್ಳಿಯ ನಿವಾಸಿ ಹರೀಶ್ ಮತ್ತು ಆವಲಹಳ್ಳಿಯ ಆರ್. ಪ್ರಜ್ವಲ್. ಇವರು ದಿನನಿತ್ಯ ಫುಡ್ ಡೆಲಿವರಿ ನೆಪದಲ್ಲಿ ನಗರದಾದ್ಯಂತ ಸಂಚರಿಸುತ್ತಾ, ಒಂಟಿ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಕೆಟ್ಟ ಚಟುವಟಿಕೆಗಳಲ್ಲಿ ತೊಡಗಿದ್ದರು. ಅವರ ಅಸಭ್ಯ ವರ್ತನೆಯನ್ನು ಸಾರ್ವಜನಿಕರೊಬ್ಬರು ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಕ್ಷಣಾರ್ಧದಲ್ಲಿ ವೈರಲ್ ಆಗಿ, ನಗರದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.
ಸಿಸಿಬಿ ಪೊಲೀಸರ ಕಾರ್ಯಾಚರಣೆ
ವಿಡಿಯೋ ಗಮನಕ್ಕೆ ಬಂದ ತಕ್ಷಣ ಸೆಂಟ್ರಲ್ ಕ್ರೈಂ ಬ್ರಾಂಚ್ (CCB) ಪೊಲೀಸರು ಅಲರ್ಟ್ ಆದರು. ವಿಡಿಯೋದಲ್ಲಿದ್ದ ಬೈಕ್ ನಂಬರ್ (KA-50 W7193) ಆಧರಿಸಿ ತಾಂತ್ರಿಕ ತಂಡದ ಸಹಾಯದಿಂದ ಆರೋಪಿಗಳನ್ನು ಪತ್ತೆಹಚ್ಚಲಾಯಿತು. ಪೊಲೀಸರು ಅವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದರು. ಇಬ್ಬರೂ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಲಾಠಿ ಪ್ರಹಾರ ಮತ್ತು ಕ್ಷಮಾಪಣೆ
ಸಾರ್ವಜನಿಕ ರಸ್ತೆಯಲ್ಲಿ ಮೃಗೀಯವಾಗಿ ವರ್ತಿಸಿದ ಅವರಿಗೆ ಪೊಲೀಸರು ತಮ್ಮದೇ ಶೈಲಿಯಲ್ಲಿ ಶಾಸ್ತಿ ಮಾಡಿದರು. ಕೈದಿಗಳನ್ನು ಪೊಲೀಸ್ ಠಾಣೆಯೊಳಗೆ ಕರೆದೊಯ್ದು, ‘ಇನ್ನು ಮುಂದೆ ಇಂತಹ ಕೃತ್ಯ ಎಸಗದಿರಿ’ ಎಂಬ ಎಚ್ಚರಿಕೆಯೊಂದಿಗೆ ಲಾಠಿ ರುಚಿ ತೋರಿಸಲಾಯಿತು. ಅಲ್ಲದೆ, ಅವರಿಂದ ಕ್ಷಮಾಪಣೆ ಪತ್ರವನ್ನೂ ಬರೆಸಿಕೊಳ್ಳಲಾಯಿತು. ಜೊತೆಗೆ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಲಾಗಿದೆ. ಇದರಿಂದಾಗಿ ಈ ಇಬ್ಬರು ಯುವಕರು ಈಗ ಕೆಲಸ ಕಳೆದುಕೊಂಡು ಪೊಲೀಸ್ ಠಾಣೆಯಲ್ಲಿ ಅಲೆಯುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.





