ಏಳೆಂಟು ವರ್ಷಗಳ ಹಿಂದೆ ಕೋಟಿ ಕೋಟಿ ಗುಳುಂ ಮಾಡಿ, ನಾಪತ್ತೆ ಆಗಿದ್ದ ಡಿಬಾಸ್ ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ಇತ್ತೀಚೆಗೆ ವಾಪಸ್ ಆಗಿದ್ರು. ಮಾಧ್ಯಮಗಳ ಮುಂದೆ ಬಂದು, ಭೂತಕಾಲದಲ್ಲಿ ಏನೆಲ್ಲಾ ಆಯ್ತು, ಭವಿಷ್ಯದ ತಮ್ಮ ಯೋಜನೆಗಳೇನು ಅನ್ನೋದನ್ನ ಹಂಚಿಕೊಂಡಿದ್ರು. ಆದ್ರೀಗ ಮತ್ತೆ ಬಂದ ಮಲ್ಲಿಯನ್ನ ಯಾರೂ ನಂಬಬೇಡಿ. ಮಲ್ಲಿ ಮಹಾ ಮೋಸಗಾರ ಅಂದಿದ್ದಾರೆ ದಾಸನ ಸಹೋದರ ದಿನಕರ್ ತೂಗುದೀಪ.
- ‘ನಂಬಬೇಡಿ.. ಮಲ್ಲಿ ಫ್ರಾಡ್’ ಅಂದ್ರೇಕೆ ಡಿಬಾಸ್ ಬ್ರದರ್..?
- ದರ್ಶನ್, ದಿನಕರ್, ತೂಗುದೀಪ ಸಂಸ್ಥೆ ಹೆಸರು ದುರ್ಬಳಕೆ
- ನಂಬಿಕೆ ದ್ರೋಹಿ, ವಂಚಕ, ಫ್ರಾಡ್, ಮಹಾ ಮೋಸಗಾರ ಮಲ್ಲಿ
- ಸಿಂಪತಿ ಆಟ.. ಬೀ ಕೇರ್‌ಫುಲ್ ಎಂದ ದಚ್ಚು ಬ್ರದರ್ ದಿನಕರ್
ಅಸಿಸ್ಟೆಂಟ್ ಡೈರೆಕ್ಟರ್, ನಿರ್ಮಾಪಕ ಕಮ್ ನಟ ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ ಬಿ ಸಂಕನಗೌಡರ್ ಕೋಟ್ಯಂತರ ರೂಪಾಯಿ ಸಾಲ ಮಾಡಿಕೊಂಡು, ತೀರಿಸಲಾಗದೆ ಊರು ಬಿಟ್ಟು ಓಡಿ ಹೋಗಿದ್ರು. ಆದ್ರೀಗ ಎಳೆಂಟು ವರ್ಷಗಳ ನಂತ್ರ ವಾಪಸ್ ಆಗಿರೋದು ಎಲ್ಲರಿಗೂ ಗೊತ್ತೇಯಿದೆ. ಸುಮಾರು 30 ರಿಂದ 40 ಕೋಟಿಗೂ ಅಧಿಕ ಸಾಲ ಮಾಡಿಕೊಂಡಿರೋ ಇವರು, ಕೇವಲ 8 ಕೋಟಿ ಅಂತ ಸುಳ್ಳು ಹೇಳಿದ್ದಾರೆ. ಅಷ್ಟೇ ಅಲ್ಲ, ಸಾಲಗಾರರ ಬಳಿ ಬದುಕಲು ಒಂದು ಚಾನ್ಸ್ ಕೇಳಿರೋದಾಗಿ ಹೇಳಿಕೊಂಡಿದ್ರು. ಅದಕ್ಕೆ ಅವರುಗಳು ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದಿದ್ರು ಮಲ್ಲಿ.
ನನಗೆ ಕಿಡ್ನಿ, ಕಿವಿ, ಗಂಟಲು ಸಮಸ್ಯೆ ಇತ್ತು. ಪ್ಯಾರಾಲಿಸಿಸ್ ಆಗಿತ್ತು ಅಂದಿದ್ರು ಮಲ್ಲಿ. ಆದ್ರೆ ನೋಡೋಕೆ ಗುಂಡು ಕಲ್ಲು ತರಹ ಇರೋ ಅವರಿಗೆ ಅಂತಹ ಯಾವುದೇ ಆರೋಗ್ಯ ಸಮಸ್ಯೆ ಇರೋ ಕುರುಹು ಇಲ್ಲ. ಆತ್ಮಹತ್ಯೆ ಮಾಡಿಕೊಳ್ಳೋ ಆಲೋಚನೆ ಇತ್ತು. ಆದ್ರೆ ಊರು ಬಿಟ್ಟಿದ್ದೆ. ತಂದೆ, ತಾಯಿ, ಅಜ್ಜಿ, ಸಹೋದರ ಹಾಗೂ ಆಪ್ತಮಿತ್ರ ಅಗಲಿದಾಗ ಒಂದು ಹಿಡಿ ಮಣ್ಣು ಹಾಕಲಾಗಲಿಲ್ಲ ಅಂತೆಲ್ಲಾ ಸಿಂಪತಿ ಗಿಟ್ಟಿಸಿಕೊಳ್ಳೋ ನಾಟಕ ಮಾಡಿದ್ರು ಮಲ್ಲಿಕಾರ್ಜುನ್.
ಡಿಬಾಸ್ ದರ್ಶನ್ ಅವರು ಆದಷ್ಟು ಬೇಗ ಹೊರಬರಲಿದ್ದಾರೆ. ಅವರು ಒಪ್ಪಿದ್ರೆ ಪಾರ್ಟ್ ಟೈಂ ಜಾಬ್ ಮಾಡಿಕೊಳ್ಳುತ್ತಲೇ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ನಡೆಸ್ತೀನಿ ಅಂದಿದ್ರು ಮಲ್ಲಿ. ಆದ್ರೀಗ ಮತ್ತೆ ಬಂದ ಮಲ್ಲಿ ಹಾಗೂ ಆತನ ಮಾತುಗಳನ್ನ ಕೇಳಿ ಸಿಡಿಮಿಡಿ ಆಗಿದ್ದಾರೆ ದರ್ಶನ್ ಸಹೋದರ ದಿನಕರ್ ತೂಗುದೀಪ. ಯಾರೂ ಆತನನ್ನ ನಂಬಬೇಡಿ. ಮಲ್ಲಿ ಮಹಾ ಮೋಸಗಾರ. ದರ್ಶನ್, ದಿನಕರ್ ಹಾಗೂ ತೂಗುದೀಪ ಸಂಸ್ಥೆ ಹೆಸರುಗಳನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ.
ಸಾಕಷ್ಟು ಮಂದಿ ಬಳಿ ಹಣ ಕೇಳಿ ಪಡೆದು ವಂಚಿಸಿದ್ದಾರೆ. ಮಲ್ಲಿಕಾರ್ಜುನ್ ಒಬ್ಬ ನಂಬಿಕೆ ದ್ರೋಹಿ. ವಂಚಕ. ಫ್ರಾಡ್. ಮಹಾ ಮೋಸಗಾರ. ಆತನ ಸಿಂಪತಿ ಮಾತುಗಳನ್ನ ಯಾರೂ ನಂಬಬೇಡಿ. ನಂಬಿ ಮೋಸ ಹೋಗಬೇಡಿ ಅಂತ ತಮ್ಮ ಇನ್ಸ್‌ಟಾದಲ್ಲಿ ಪೋಸ್ಟ್ ಮಾಡಿದ್ದಾರೆ ದಿನಕರ್ ತೂಗುದೀಪ. ಈತ ಮತ್ತೆ ಎಲ್ಲಾದ್ರೂ ನಮ್ಮ ಒಡನಾಟದ ಬಗ್ಗೆ ಹೇಳಿಕೊಂಡು ಲಾಭ ಮಾಡಲು ಬಂದ್ರೆ ಯಾಮಾರಬೇಡಿ ಅಂದಿದ್ದಾರೆ ದಿನಕರ್.
ಮಲ್ಲಿಕಾರ್ಜುನ್ ಮಾಧ್ಯಮಗಳ ಮುಂದೆ ಬಂದು ಬರೀ ಆತನಿಗಾದ ಕಷ್ಟಗಳನ್ನ ಬಿಚ್ಚಿಟ್ಟಿದ್ದಾರೆ. ಆದ್ರೆ ಆತನಿಗೆ ಹಣ ಕೊಟ್ಟವರ ಪರಿಸ್ಥಿತಿ ಆಗತನಿಗೆ ಗೊತ್ತಾ ಅಂತಲೂ ದಿನಕರ್ ಪ್ರಶ್ನಿಸಿದ್ದಾರೆ. ಒಟ್ಟಾರೆ ಮಲ್ಲಿ ಮೇಲೆ ಎಷ್ಟು ರೋಸಿ ಹೋದಲ್ಲಿ ಮಾತ್ರ ಇಂತಹ ಪೋಸ್ಟ್ ಮಾಡೋಕೆ ಸಾಧ್ಯ ನೀವೇ ಊಹಿಸಿ. ಇದು ನಿಜಕ್ಕೂ ಕೋಪ ಹಾಗೂ ಹತಾಶೆಯಿಂದ ಮಲ್ಲಿ ಮೇಲೆ ಮಾಡಿರೋ ಪೋಸ್ಟ್ ಆಗಿದೆ. ಜೊತೆಗೆ ಮೋಸ ಹೋಗದಿರಲು ಇಂಡಸ್ಟ್ರಿ ಮಂದಿಯನ್ನ ಎಚ್ಚರಿಸೋ ಎಚ್ಚರಿಕೆ ಗಂಟೆಯೂ ಹೌದು. ಆದ್ರೆ ಮಲ್ಲಿ ಈಗ ಮತ್ತೇನು ಟ್ರಂಪ್ ಕಾರ್ಡ್ ಪ್ಲೇ ಮಾಡ್ತಾರೆ ಅನ್ನೋದನ್ನ ನಿರೀಕ್ಷಿಸಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





