ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿ 17 ಮಂದಿ ಅಪರಾಧಿಗಳೆಂದು ನ್ಯಾಯಾಲಯ ತೀರ್ಪು ನೀಡಿದೆ. ಇಂದು (ಏಪ್ರಿಲ್ 16) ಅಪರಾಧಿಗಳ ವಾದವನ್ನು ನ್ಯಾಯಾಲಯ ಆಲಿಸಿತ್ತು. ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರ ಪೀಠವು ಎಲ್ಲರ ವಾದ ದಾಖಲಿಸಿಕೊಂಡು, ಶಿಕ್ಷೆಯ ಪ್ರಮಾಣದ ಸಂಬಂಧದ ತೀರ್ಪನ್ನು ನಾಳೆ (ಏಪ್ರಿಲ್ 17) ಪ್ರಕಟಿಸುವುದಾಗಿ ಆದೇಶಿಸಿದೆ. ಪ್ರಕರಣದ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.
ನಿನ್ನೆಯದೇ ಸಂಚಲನ ತೀರ್ಪು
ಏಪ್ರಿಲ್ 15 ರಂದು, ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು ವಿನಯ್ ಕುಲಕರ್ಣಿ ಅವರನ್ನು ಅಪರಾಧಿ ಎಂದು ತೀರ್ಪು ನೀಡಿತ್ತು. ತೀರ್ಪು ಹೊರಬೀಳುತ್ತಿದ್ದಂತೆ ಸಿಬಿಐ ಅಧಿಕಾರಿಗಳು ವಿನಯ್ ಕುಲಕರ್ಣಿ ಸೇರಿದಂತೆ ಪ್ರಕರಣದ ಎಲ್ಲಾ ಅಪರಾಧಿಗಳನ್ನು ವಶಕ್ಕೆ ಪಡೆದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ನಿನ್ನೆ ರಾತ್ರಿ ಕರೆತಂದಿದ್ದರು. ನ್ಯಾಯಾಲಯದ ಆವರಣದಲ್ಲಿ ಮತ್ತು ಧಾರವಾಡದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಪ್ರಕರಣದ ಹಿನ್ನೆಲೆ ಏನು?
2016ರ ಜೂನ್ 15ರಂದು ಧಾರವಾಡದ ಸಪ್ತಾಪುರದಲ್ಲಿರುವ ತಮ್ಮದೇ ಜಿಮ್‌ನಲ್ಲಿ ಯೋಗೇಶ್ ಗೌಡ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಆರಂಭದಲ್ಲಿ ಸ್ಥಳೀಯ ಪೊಲೀಸರು ತನಿಖೆ ನಡೆಸಿದ್ದರೂ, ಪ್ರಕರಣದಲ್ಲಿ ರಾಜಕೀಯ ಪ್ರಭಾವದ ಆರೋಪ ಕೇಳಿಬಂದಿತ್ತು. ಯೋಗೇಶ್ ಗೌಡ ಕುಟುಂಬಸ್ಥರು ಮತ್ತು ಬಿಜೆಪಿ ನಾಯಕರ ಒತ್ತಾಯದ ಮೇರೆಗೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು.
ಸಿಬಿಐ ತನಿಖೆಯಲ್ಲಿ ಹತ್ಯೆಯ ಹಿಂದೆ ರಾಜಕೀಯ ದ್ವೇಷವೇ ಪ್ರಮುಖ ಕಾರಣವೆಂದು ಪತ್ತೆಯಾಯಿತು. 2020ರಲ್ಲಿ ವಿನಯ್ ಕುಲಕರ್ಣಿ ಅವರನ್ನು ಬಂಧಿಸಲಾಗಿತ್ತು. ಅವರು ಸುಮಾರು ಒಂಬತ್ತು ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು. ನಂತರ ಸುಪ್ರೀಂ ಕೋರ್ಟ್ ನಿಂದ ಜಾಮೀನು ಪಡೆದು ಹೊರಬಂದಿದ್ದರೂ, ಅವರಿಗೆ ಧಾರವಾಡ ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿತ್ತು.
ಸಿಬಿಐ ಪ್ರಬಲ ಸಾಕ್ಷ್ಯಗಳು
ವಿಚಾರಣೆಯ ವೇಳೆ ಸಿಬಿಐ ಕೋರ್ಟ್ ಗೆ ಪ್ರಬಲ ಸಾಕ್ಷ್ಯಗಳನ್ನು ಮತ್ತು ನಿರ್ಣಾಯಕ ಆಡಿಯೋ ಸಂಭಾಷಣೆಗಳನ್ನು ಸಲ್ಲಿಸಿತ್ತು. ಕೊಲೆಗೆ ಸಂಚು ರೂಪಿಸಿದ, ಸಾಕ್ಷ್ಯನಾಶಪಡಿಸಲು ಯತ್ನಿಸಿದ ಮತ್ತು ರಾಜಕೀಯ ಪ್ರಭಾವ ಬಳಸಿದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಎಲ್ಲಾ 17 ಮಂದಿಯನ್ನೂ ಅಪರಾಧಿಗಳೆಂದು ಘೋಷಿಸಿತ್ತು.
ನಾಳೆಯ ತೀರ್ಪಿನ ಕುತೂಹಲ
ಇಂದು ಅಪರಾಧಿಗಳ ಪರ ವಕೀಲರು ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಬೇಕೆಂದು ವಾದಿಸಿದರು. ಸಿಬಿಐ ಪರ ವಕೀಲರು ಕಠಿಣ ಶಿಕ್ಷೆಗೆ ಒತ್ತಾಯಿಸಿದರು. ಎಲ್ಲಾ ವಾದಗಳನ್ನು ಆಲಿಸಿದ ನ್ಯಾಯಾಧೀಶರು ತೀರ್ಪನ್ನು ನಾಳೆಗೆ ಕಾಯ್ದಿರಿಸಿದರು. ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯಿಂದ ಹಿಡಿದು ಇನ್ನೂ ಕಠಿಣ ಶಿಕ್ಷೆಯಾಗಬಹುದೇ ಎಂಬ ಕುತೂಹಲ ಮೂಡಿದೆ.





