ನವದೆಹಲಿ, ಏಪ್ರಿಲ್ 13: ಅಮೆರಿಕ ಮತ್ತು ಇರಾನ್ ನಡುವೆ ನಡೆದ ಶಾಂತಿ ಮಾತುಕತೆ ವಿಫಲವಾದ ಬೆನ್ನಲ್ಲೇ ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಭಾರೀ ಅಸ್ಥಿರತೆ ಉಂಟಾಗಿದೆ. ನಿರೀಕ್ಷೆಯಂತೆ ತೈಲ ಬೆಲೆಗಳು ಮತ್ತೆ ಏರಿಕೆಯ ಹಾದಿ ಹಿಡಿದು, ಬ್ಯಾರಲ್‌ಗೆ 100 ಡಾಲರ್ ಗಡಿಯನ್ನು ದಾಟಿವೆ. ಸೋಮವಾರದ ವಹಿವಾಟಿನಲ್ಲಿ ಕಚ್ಚಾ ತೈಲದ ಬೆಲೆ ಶೇ. 10-11ರಷ್ಟು ಏರಿಕೆ ಕಂಡು, ಮಾರುಕಟ್ಟೆಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಡಬ್ಲ್ಯುಟಿಐ (WTI) ಕ್ರೂಡ್ ಫ್ಯೂಚರ್ಸ್ ಬೆಲೆ ಬ್ಯಾರಲ್‌ಗೆ ಸುಮಾರು 104.25 ಡಾಲರ್ ಮಟ್ಟ ತಲುಪಿದರೆ, ಬ್ರೆಂಟ್ ಕ್ರೂಡ್ ಬೆಲೆ 101 ಡಾಲರ್ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಕಳೆದ ಕೆಲವು ವಾರಗಳಿಂದ ತೈಲ ಬೆಲೆಗಳಲ್ಲಿ ಅಸ್ಥಿರತೆ ಕಾಣಿಸಿಕೊಂಡಿದ್ದು, ಇತ್ತೀಚಿನ ಜಿಯೋಪಾಲಿಟಿಕಲ್ ಉದ್ವಿಗ್ನತೆ ಇದನ್ನು ಮತ್ತಷ್ಟು ತೀವ್ರಗೊಳಿಸಿದೆ.
ತೈಲ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿ ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಸಂಧಾನ ಮುರಿದುಬಿದ್ದಿರುವುದನ್ನು ಪರಿಗಣಿಸಲಾಗುತ್ತಿದೆ. ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆದ ಈ ಮಾತುಕತೆಯಲ್ಲಿ ಎರಡು ದೇಶಗಳ ನಡುವೆ ಗಂಭೀರ ಭಿನ್ನಾಭಿಪ್ರಾಯಗಳು ಎದುರಾದವು. ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ನಿಲ್ಲಿಸಬೇಕು ಹಾಗೂ ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಅಡ್ಡಿಪಡಿಸಬಾರದು ಎಂಬ ಅಮೆರಿಕದ ಬೇಡಿಕೆಗಳನ್ನು ಇರಾನ್ ತಿರಸ್ಕರಿಸಿದ ಪರಿಣಾಮ, ಮಾತುಕತೆ ಕೊನೆಯ ಹಂತದಲ್ಲಿ ವಿಫಲವಾಗಿದೆ.
ಇದರ ಜೊತೆಗೆ ಹಾರ್ಮುಜ್ ಜಲಸಂಧಿ ವಿಚಾರವು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಒಟ್ಟು ತೈಲ ಸಾಗಣೆಯ ಸುಮಾರು 20% ಈ ಜಲಮಾರ್ಗದ ಮೂಲಕ ಸಾಗುತ್ತದೆ. ಏಷ್ಯಾದ ಬಹುತೇಕ ರಾಷ್ಟ್ರಗಳು ಈ ಮಾರ್ಗದ ಮೇಲೆ ಅವಲಂಬಿತವಾಗಿವೆ. ಇತ್ತೀಚಿನ ಬೆಳವಣಿಗೆಗಳ ನಂತರ, ಈ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ನಿರ್ಬಂಧ ಅಥವಾ ಹೆಚ್ಚುವರಿ ಸುಂಕ ವಿಧಿಸುವ ಕ್ರಮಗಳನ್ನು ಇರಾನ್ ಕೈಗೊಂಡಿದೆ ಎನ್ನಲಾಗಿದೆ.
ಇದಕ್ಕೆ ಪ್ರತಿಯಾಗಿ ಅಮೆರಿಕ ತನ್ನ ನೌಕಾಪಡೆಯನ್ನು ಹಾರ್ಮುಜ್ ಪ್ರದೇಶಕ್ಕೆ ಕಳುಹಿಸಲು ಮುಂದಾಗಿದೆ. ಯಾವುದೇ ಹಡಗುಗಳು ಈ ಜಲಮಾರ್ಗವನ್ನು ಸುಲಭವಾಗಿ ಬಳಸಲು ಅವಕಾಶ ನೀಡುವುದಿಲ್ಲ ಎಂದು ಅಮೆರಿಕದ ನಾಯಕತ್ವ ಕಠಿಣ ಸಂದೇಶ ನೀಡಿದೆ.
ಈ ಬೆಳವಣಿಗೆಗಳ ಪರಿಣಾಮವಾಗಿ ಭಾರತ ಸೇರಿದಂತೆ ಅನೇಕ ತೈಲ ಆಮದು ದೇಶಗಳಿಗೆ ಸವಾಲುಗಳು ಎದುರಾಗಲಿವೆ. ಪೆಟ್ರೋಲ್, ಡೀಸಲ್ ಮತ್ತು ಎಲ್‌ಎನ್‌ಜಿ ದರಗಳು ಮುಂದಿನ ದಿನಗಳಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ಭಾರತ ಸರ್ಕಾರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ.





