ಇಸ್ಕಾನ್ ಹೋಟೆಲ್‌ನಲ್ಲಿ ಚಿಕನ್ ತಿಂದ ಯೂಟ್ಯೂಬರ್: ಭಕ್ತರ ಆಕ್ರೋಶ

Untitled design (49)
ADVERTISEMENT
ADVERTISEMENT

ಇಸ್ಕಾನ್ ದೇವಾಲಯವು ಹಿಂದೂ ಧರ್ಮೀಯರಿಗೆ ಅತ್ಯಂತ ಪವಿತ್ರವಾದ ಸ್ಥಳವಾಗಿದೆ. ವಿಶ್ವಾದ್ಯಂತ ಲಕ್ಷಾಂತರ ಭಕ್ತರು ಇಸ್ಕಾನ್ ದೇವಾಲಯಗಳಿಗೆ ಭಕ್ತಿಭಾವದಿಂದ ಆಗಮಿಸಿ ಶ್ರೀ ಕೃಷ್ಣನಿಗೆ ನಮನ ಸಲ್ಲಿಸುತ್ತಾರೆ. ಆದರೆ, ಲಂಡನ್‌ನ ಇಸ್ಕಾನ್ ದೇವಾಲಯದ ಆವರಣದಲ್ಲಿರು ಹೋಟೆಲ್‌ನಲ್ಲಿ ನಡೆದ ಘಟನೆಯೊಂದು ಭಕ್ತರ ನಂಬಿಕೆಗೆ ಧಕ್ಕೆ ತಂದಿದೆ. ಇಸ್ಕಾನ್‌ನ ಗೋವಿಂದ ಕ್ಯಾಂಟೀನ್‌ನಲ್ಲಿ ವಿದೇಶಿ ಯೂಟ್ಯೂಬರ್‌ನೊಬ್ಬ ಕೆಎಫ್‌ಸಿ ಚಿಕನ್ ಸೇವಿಸಿದ ಘಟನೆ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಇಸ್ಕಾನ್ ದೇವಾಲಯದ ಆವರಣದಲ್ಲಿರು ಹೋಟೆಲ್‌ಗೆ ಬಂದ ವ್ಯಕ್ತಿಯನ್ನು ಆಫ್ರಿಕನ್ ಮೂಲದ ಇಂಗ್ಲೆಂಡ್ ನಾಗರಿಕ ಸ್ಯಾಂಜೋ ಎಂದು ಗುರುತಿಸಲಾಗಿದೆ. ಇವನು ಇಸ್ಕಾನ್ ದೇವಾಲಯದ ಗೋವಿಂದ ಕ್ಯಾಂಟೀನ್‌ಗೆ ಆಗಮಿಸಿ, ಉದ್ದೇಶಪೂರ್ವಕವಾಗಿ ಮಾಂಸಾಹಾರವನ್ನು ತಂದು ಸೇವಿಸಿದ್ದಾನೆ. ಇಸ್ಕಾನ್ ದೇವಾಲಯದ ಕ್ಯಾಂಟೀನ್‌ನಲ್ಲಿ ಕೇವಲ ಸಸ್ಯಾಹಾರವನ್ನು ಮಾತ್ರ ಬಡಿಸಲಾಗುತ್ತದೆ. ಈರುಳ್ಳಿ, ಬೆಳ್ಳುಳ್ಳಿ ಸೇರಿದಂತೆ ಯಾವುದೇ ಮಾಂಸಾಹಾರವನ್ನು ಇಲ್ಲಿ ಸೇವಿಸುವಂತಿಲ್ಲ. ಆದರೆ, ಸ್ಯಾಂಜೋ ತನ್ನ ಜೊತೆಯಲ್ಲಿ ಕೆಎಫ್‌ಸಿ ಚಿಕನ್‌ ತಂದು, ಕ್ಯಾಂಟೀನ್‌ನೊಳಗೆ ಸೇವಿಸಿದ್ದಾನೆ. ಇದಷ್ಟೇ ಅಲ್ಲ, “ನಿಮಗೂ ಈ ಚಿಕನ್ ತಿನ್ನಲು ಬೇಕೇ?” ಎಂದು ಸಿಬ್ಬಂದಿಗೆ ಕೇಳುವ ಮೂಲಕ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದಾನೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಯ ವೀಡಿಯೋ ವೈರಲ್‌ ಆಗಿದ್ದು, ಸ್ಯಾಂಜೋ ಈ ಕೃತ್ಯವನ್ನು ಪ್ರಾಂಕ್‌ ವೀಡಿಯೋ ರೂಪದಲ್ಲಿ ಮಾಡಿರುವ ಸಾಧ್ಯತೆ ಇದೆ. ಆದರೆ, ಈ ಕೃತ್ಯವು ಇಸ್ಕಾನ್ ಭಕ್ತರಿಗೆ ತೀವ್ರ ಅಸಮಾಧಾನ ತಂದಿದೆ. ಈ ಘಟನೆಯ ಬಗ್ಗೆ ಕಾನೂನು ಕ್ರಮ ಕೈಗೊಳ್ಳದಿರುವುದಕ್ಕೆ ಭಕ್ತರು ಮತ್ತು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೆಟ್ಟಿಗರು ಈ ಘಟನೆಯ ಬಗ್ಗೆ ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಇದನ್ನು “ಧರ್ಮದ ಅವಮಾನ” ಎಂದು ಕರೆದರೆ, ಇನ್ನೂ ಕೆಲವರು “ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯಲು ಮಾಡಿದ ತುಂಟಾಟ” ಎಂದು ಟೀಕಿಸಿದ್ದಾರೆ. ಇಂತಹ ಘಟನೆಗಳು ಧಾರ್ಮಿಕ ಸ್ಥಳಗಳ ಸಂವೇದನಾಶೀಲತೆಯನ್ನು ಗೌರವಿಸುವಂತೆ ಮಾಡಬೇಕೆಂದು ಭಕ್ತರು ಒತ್ತಾಯಿಸಿದ್ದಾರೆ.

ಈ ಘಟನೆಯಿಂದ ಇಸ್ಕಾನ್ ದೇವಾಲಯದ ಆಡಳಿತ ಮಂಡಳಿಯು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಭಕ್ತರು ಆಗ್ರಹಿಸಿದ್ದಾರೆ. ಇಂತಹ ಕೃತ್ಯಗಳು ಮುಂದೆ ಪುನರಾವರ್ತನೆಯಾಗದಂತೆ ತಡೆಗಟ್ಟಲು ಕಾನೂನು ಕ್ರಮದ ಜೊತೆಗೆ, ದೇವಾಲಯದ ಆವರಣದಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಬೇಕೆಂದು ಒತ್ತಾಯಿಸಲಾಗಿದೆ.

Exit mobile version