BREAKING: ದ.ಕೊರಿಯಾ ಮೇಲೆ ಉತ್ತರ ಕೊರಿಯಾ ದಾಳಿ: ಬರೋಬ್ಬರಿ 10 ಬ್ಯಾಲೆಸ್ಟಿಕ್ ಮಿಸೈಲ್‌ಗಳಿಂದ ದಾಳಿ

ಸಿಯೋಲ್: ಅಮೆರಿಕ ಮತ್ತು ದಕ್ಷಿಣ ಕೊರಿಯಾ ಪಡೆಗಳು ಜಂಟಿ ಮಿಲಿಟರಿ ಕವಾಯತು ನಡೆಸುತ್ತಿರುವ ಬೆನ್ನಲ್ಲೇ, ಉತ್ತರ ಕೊರಿಯಾ ಇಂದು (ಮಾರ್ಚ್‌ 14) ಬೆಳಿಗ್ಗೆ ತನ್ನ ಪೂರ್ವ ಕರಾವಳಿಯಿಂದ ಸುಮಾರು 10 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಸಮುದ್ರದ ಕಡೆಗೆ ಹಾರಿಸುವ ಮೂಲಕ ತನ್ನ ಆಕ್ರೋಶ ಪ್ರದರ್ಶಿಸಿದೆ.

ಕಳೆದ ಗುರುವಾರವಷ್ಟೇ ದಕ್ಷಿಣ ಕೊರಿಯಾದ ಪ್ರಧಾನಿಯವರು ವಾಷಿಂಗ್ಟನ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿದ್ದರು. 2019 ರಿಂದ ಸ್ಥಗಿತಗೊಂಡಿರುವ ರಾಜತಾಂತ್ರಿಕ ಸಂವಾದವನ್ನು ಪುನರಾರಂಭಿಸುವ ಬಗ್ಗೆ ಉಭಯ ನಾಯಕರು ಗಂಭೀರ ಚರ್ಚೆ ನಡೆಸಿದ ಕೇವಲ ಎರಡು ದಿನಗಳಲ್ಲಿ ಉತ್ತರ ಕೊರಿಯಾ ಈ ಕೃತ್ಯ ಎಸಗಿದೆ. ಇದು ಕೇವಲ ಶಕ್ತಿ ಪ್ರದರ್ಶನವೋ ಅಥವಾ ಮಾತುಕತೆಗೂ ಮುನ್ನ ಮಿತ್ರರಾಷ್ಟ್ರಗಳ ಮೇಲೆ ಒತ್ತಡ ಹೇರುವ ತಂತ್ರವೋ ಎಂಬ ಸಂಶಯ ಮೂಡಿಸಿದೆ.

ಜಪಾನ್ ಸಮುದ್ರದಲ್ಲಿ ಕ್ಷಿಪಣಿಗಳ ಪತನ

ದಕ್ಷಿಣ ಕೊರಿಯಾ ಮತ್ತು ಜಪಾನಿನ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ಕ್ಷಿಪಣಿಗಳು ಉತ್ತರ ಕೊರಿಯಾದ ಪೂರ್ವ ಕರಾವಳಿಯ ನೀರಿನ ಕಡೆಗೆ ಹಾರಿದ್ದವು. ಜಪಾನ್‌ನ ಸಾರ್ವಜನಿಕ ಪ್ರಸಾರಕ ಎನ್‌ಎಚ್‌ಕೆ (NHK) ವರದಿ ಮಾಡಿರುವಂತೆ, ಈ ಎಲ್ಲಾ ಕ್ಷಿಪಣಿಗಳು ಜಪಾನ್‌ನ ವಿಶೇಷ ಆರ್ಥಿಕ ವಲಯದ (EEZ) ಹೊರಗಿನ ಸಮುದ್ರದ ಭಾಗದಲ್ಲಿ ಬಿದ್ದಿವೆ. ಜಪಾನ್‌ನ ಕರಾವಳಿ ಕಾವಲು ಪಡೆ ಕೂಡ ಕ್ಷಿಪಣಿಗಳು ಸಮುದ್ರಕ್ಕೆ ಬಿದ್ದಿರುವುದನ್ನು ದೃಢಪಡಿಸಿದೆ.

‘ಡ್ರೆಸ್ ರಿಹರ್ಸಲ್’ ಎಂದು ಗುಡುಗಿದ ಕಿಮ್

ದಕ್ಷಿಣ ಕೊರಿಯಾ ಮತ್ತು ವಾಷಿಂಗ್ಟನ್ ಐದು ದಿನಗಳ ಹಿಂದಷ್ಟೇ ಬೃಹತ್ ಪ್ರಮಾಣದ ಮಿಲಿಟರಿ ವ್ಯಾಯಾಮಗಳನ್ನು ಪ್ರಾರಂಭಿಸಿದ್ದವು. ಈ ಕವಾಯತುಗಳು ಸಂಪೂರ್ಣವಾಗಿ ರಕ್ಷಣಾತ್ಮಕವಾಗಿದ್ದು, ಉತ್ತರ ಕೊರಿಯಾದಿಂದ ಸಂಭಾವ್ಯ ಬೆದರಿಕೆ ಎದುರಿಸಲು ನಡೆಸಲಾಗುವ ಸನ್ನದ್ಧತೆ ಎಂದು ಮಿತ್ರರಾಷ್ಟ್ರಗಳು ಹೇಳುತ್ತವೆ. ಆದರೆ, ಇದನ್ನು ತೀವ್ರವಾಗಿ ಖಂಡಿಸಿರುವ ಪಯೋಂಗ್ಯಾಂಗ್ (ಉತ್ತರ ಕೊರಿಯಾ ರಾಜಧಾನಿ), ಇದು ತನ್ನ ದೇಶದ ಮೇಲೆ ದಾಳಿ ಮಾಡಲು ಮಿತ್ರರಾಷ್ಟ್ರಗಳು ನಡೆಸುತ್ತಿರುವ ಡ್ರೆಸ್ ರಿಹರ್ಸಲ್ ಎಂದು ಕಿಡಿಕಾರಿದೆ.

ಪರಮಾಣು ಶಸ್ತ್ರಸಜ್ಜಿತ ಉತ್ತರ ಕೊರಿಯಾವು ಸಿಯೋಲ್ ಮತ್ತು ವಾಷಿಂಗ್ಟನ್ ನಡುವಿನ ನಿಕಟತೆಯನ್ನು ಸದಾ ವಿರೋಧಿಸುತ್ತಲೇ ಬಂದಿದೆ. ಒಂದು ಕಡೆ ಡೊನಾಲ್ಡ್ ಟ್ರಂಪ್ ಅವರು ಕಿಮ್ ಜಾಂಗ್ ಉನ್ ಅವರೊಂದಿಗೆ ಮತ್ತೆ ಭೇಟಿಯಾಗುವ ಮುನ್ಸೂಚನೆ ನೀಡುತ್ತಿದ್ದರೆ, ಮತ್ತೊಂದೆಡೆ ಉತ್ತರ ಕೊರಿಯಾದ ಈ ಕ್ಷಿಪಣಿ ದಾಳಿಗಳು ಜಾಗತಿಕ ಶಾಂತಿ ಸ್ಥಾಪನೆಯ ಹಾದಿಗೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿವೆ. ಏಪ್ರಿಲ್‌ನಲ್ಲಿ ಟ್ರಂಪ್ ಅವರ ಬೀಜಿಂಗ್ ಭೇಟಿಯ ಸಮಯದಲ್ಲಿ ಕಿಮ್ ಜೊತೆಗಿನ ಶೃಂಗಸಭೆ ನಡೆಯುವ ಸಾಧ್ಯತೆಗಳಿದ್ದರೂ, ಇಂದಿನ ಈ ಬೆಳವಣಿಗೆಯು ರಾಜತಾಂತ್ರಿಕ ಹಾದಿಯನ್ನು ಇನ್ನಷ್ಟು ಜಟಿಲಗೊಳಿಸಿದೆ.

Exit mobile version