ಕೇಕ್ ತಿಂದಿದ್ದಕ್ಕೆ ಮುರಿದು ಬಿದ್ದ ಮದ್ವೆ..!: ರಣರಂಗವಾದ ಮದುವೆ ಮಂಟಪ..ವಿಡಿಯೋ ವೈರಲ್

Untitled design 2026 01 13T135517.847

ಮದುವೆ ಎಂದರೆ ಜೀವನಪೂರ್ತಿ ನೆನಪಾಗುವ ಸಂಭ್ರಮ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವೊಂದು ವಿವಾಹಗಳು ಕ್ಷಣಾರ್ಧದಲ್ಲಿ ವಿವಾದಕ್ಕೆ ತಿರುಗಿ, ಸಂಭ್ರಮವೇ ದುರಂತವಾಗುತ್ತಿರುವ ಉದಾಹರಣೆಗಳು ಹೆಚ್ಚಾಗುತ್ತಿವೆ. ಅಂತಹದ್ದೇ ಒಂದು ಆಘಾತಕಾರಿ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಕೇವಲ ಒಂದು ಕೇಕ್ ಕಾರಣಕ್ಕೆ ಮದುವೆಯೇ ಅರ್ಧದಲ್ಲೇ ರದ್ದಾದ ಘಟನೆ ಜನರಲ್ಲಿ ಚರ್ಚೆಗೆ ಕಾರಣವಾಗಿದೆ.

ಈ ಘಟನೆ ಟರ್ಕಿಯಲ್ಲಿ ನಡೆದಿದೆ ಎನ್ನಲಾಗಿದ್ದು, ಮದುವೆ ಮಂಟಪದಲ್ಲಿ ಎಲ್ಲವೂ ಸಂಭ್ರಮದಿಂದ ಸಾಗುತ್ತಿತ್ತು. ವಧು-ವರರು ಕೇಕ್ ಕತ್ತರಿಸುವ ಕ್ಷಣಕ್ಕಾಗಿ ವೇದಿಕೆಯ ಮೇಲೆ ನಿಂತಿದ್ದರು. ಸುತ್ತಮುತ್ತ ಅತಿಥಿಗಳ ಗುಂಪು, ಫೋಟೋಗ್ರಾಫರ್‌ಗಳು ಮತ್ತು ವಿಡಿಯೋಗ್ರಾಫರ್‌ಗಳು ದೃಶ್ಯ ಸೆರೆಹಿಡಿಯಲು ಸಜ್ಜಾಗಿದ್ದರು.

ಆದರೆ ಆ ಕ್ಷಣದಲ್ಲೇ ಅನಿರೀಕ್ಷಿತ ತಿರುವೊಂದು ಉಂಟಾಯಿತು. ಕೇಕ್ ಕತ್ತರಿಸುವ ಮೊದಲು ವರನು ತನ್ನ ಬೆರಳಿನಿಂದ ಸ್ವಲ್ಪ ಕೇಕ್ ತೆಗೆದು ರುಚಿ ನೋಡಿದ್ದಾನೆ. ಇದನ್ನು ಕಂಡ ವಧು ತಕ್ಷಣವೇ ಕೋಪಗೊಂಡಿದ್ದಾಳೆ. ಎಲ್ಲರ ಎದುರಲ್ಲೇ “ಯಾಕೆ ಕೇಕ್ ತಿಂದೆ?” ಎಂದು ವರನನ್ನು ಪ್ರಶ್ನಿಸಿದ್ದಾಳೆ. ಆರಂಭದಲ್ಲಿ ಇದು ಸಣ್ಣ ಮಾತಿನ ಚಕಮಕಿ ನಡೆದು, ಕ್ಷಣಗಳಲ್ಲಿ ವಿವಾದ ತೀವ್ರಗೊಂಡಿದೆ.

ವಧು ಸಾರ್ವಜನಿಕವಾಗಿ ಪ್ರಶ್ನಿಸಿದ್ದರಿಂದ ವರನಿಗೆ ಅವಮಾನವಾಗಿದೆ ಎನ್ನುವ ಭಾವನೆ ಮೂಡಿದೆ. ಇದರಿಂದ ಕೋಪಗೊಂಡ ವರನು ಅತಿರೇಕದ ವರ್ತನೆ ತೋರಿದ್ದಾನೆ. ಎಲ್ಲರ ಮುಂದೆ ಕೇಕ್‌ನ್ನು ಎತ್ತಿ ನೆಲಕ್ಕೆ ಹಾಕಿದ್ದಾನೆ. ಈ ದೃಶ್ಯವನ್ನು ಕಂಡು ಮಂಟಪದಲ್ಲಿ ಮೌನ ಆವರಿಸಿತ್ತು.

ವರನ ಈ ವರ್ತನೆಯಿಂದ ಕಣ್ಣೀರಿಟ್ಟ ವಧು ಯಾವುದೇ ಮಾತಿಲ್ಲದೆ ಮದುವೆ ಮಂಟಪದಿಂದ ಹೊರನಡೆದಿದ್ದಾಳೆ. ಕೆಲವೇ ನಿಮಿಷಗಳಲ್ಲಿ ವಿವಾಹ ಕಾರ್ಯಕ್ರಮವೇ ಸ್ಥಗಿತಗೊಂಡಿದ್ದು, ಮದುವೆಯನ್ನು ರದ್ದುಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಸಂಪೂರ್ಣ ಘಟನೆ ಸೆರೆಹಿಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೂರು ಮಿಲಿಯನ್‌ಗಿಂತ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ವಿಡಿಯೋ ನೋಡಿದ ನೆಟ್ಟಿಗರು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು “ಇಲ್ಲಿ ಸಮಸ್ಯೆ ಕೇಕ್ ಅಲ್ಲ, ಇಬ್ಬರ ಸ್ವಭಾವ” ಎಂದು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಬ್ಬರು “ಇಷ್ಟು ಸಣ್ಣ ವಿಷಯಕ್ಕೆ ಮದುವೆ ಮುರಿಯಬೇಕಾದರೆ, ಒಟ್ಟಿಗೆ ಬದುಕುವುದು ಕಷ್ಟ” ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನೂ ಕೆಲವರು ವಧುವಿನ ವರ್ತನೆಯನ್ನೂ ಪ್ರಶ್ನಿಸಿದ್ದಾರೆ. “ಸಾರ್ವಜನಿಕವಾಗಿ ಎಲ್ಲರ ಮುಂದೆ ವರನನ್ನು ಗದರಿಸುವುದು ತಪ್ಪು. ಅದನ್ನು ಖಾಸಗಿಯಾಗಿ ಮಾತಾಡಬಹುದಿತ್ತು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು “ವರನ ಪ್ರತಿಕ್ರಿಯೆಯೇ ಅತಿರೇಕ. ಕೋಪದ ನಿಯಂತ್ರಣ ಇಲ್ಲದ ವ್ಯಕ್ತಿಯೊಂದಿಗೆ ಜೀವನ ಸಾಗುವುದು ಕಷ್ಟ” ಎಂದು ಹೇಳಿದ್ದಾರೆ.

Exit mobile version