ವರ್ಷಾಂತ್ಯದ ಬೋನಸ್ ಅಂದರೆ ಸಾಮಾನ್ಯವಾಗಿ ಒಂದು ತಿಂಗಳ ಸಂಬಳ ಅಥವಾ ಸಣ್ಣ ಉಡುಗೊರೆಗಳನ್ನು ನಾವು ನಿರೀಕ್ಷಿಸುತ್ತೇವೆ. ಆದರೆ ಚೀನಾದ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಬರೋಬ್ಬರಿ 180 ಮಿಲಿಯನ್ ಯುವಾನ್ (ಅಂದಾಜು 235.82 ಕೋಟಿ ರೂಪಾಯಿ) ಬೋನಸ್ ನೀಡುವ ಮೂಲಕ ಇಡೀ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ. ಕಂಪನಿಯ ಲಾಭದ ಸಿಂಹಪಾಲನ್ನು ಉದ್ಯೋಗಿಗಳಿಗೇ ಹಂಚುವ ಮೂಲಕ ಈ ಸಂಸ್ಥೆ ಕನಸಿನ ಕಂಪನಿ ಎನಿಸಿಕೊಂಡಿದೆ.
ಹಣದ ರಾಶಿಯ ನಡುವೆ ಅದ್ಧೂರಿ ಔತಣ
ಚೀನಾದ ಹೆನಾನ್ ಕುವಾಂಗ್‌ಶಾನ್ ಕ್ರೇನ್ ಕಂಪನಿ (Henan Kuangshan Crane Co., Ltd) ಫೆಬ್ರವರಿ 13 ರಂದು ತನ್ನ ವಾರ್ಷಿಕ ಸಂಭ್ರಮಾಚರಣೆಯನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದ ವಿಶೇಷತೆಯೆಂದರೆ, ವೇದಿಕೆಯ ಮೇಲೆ ನೋಟುಗಳ ಕಂತೆಗಳನ್ನೇ ರಾಶಿ ಹಾಕಲಾಗಿತ್ತು. ಸುಮಾರು 7,000 ಉದ್ಯೋಗಿಗಳು ಭಾಗವಹಿಸಿದ್ದ ಈ ಸಮಾರಂಭದಲ್ಲಿ 800 ಔತಣಕೂಟದ ಮೇಜುಗಳನ್ನು ಜೋಡಿಸಲಾಗಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಗಳ ಪ್ರಕಾರ, ಉದ್ಯೋಗಿಗಳು ವೇದಿಕೆಗೆ ಬಂದು ತಮಗೆ ಸಿಕ್ಕ ಬೋನಸ್ ಹಣದ ಕಂತೆಗಳನ್ನು ಎಣಿಸುತ್ತಾ, ಅವುಗಳನ್ನು ಸಾಗಿಸಲು ಹರಸಾಹಸ ಪಡುತ್ತಿರುವುದು ಕಂಡುಬಂದಿದೆ. ಕೆಲವರು ಬೃಹತ್ ಮೊತ್ತದ ನಗದನ್ನು ಕೈಯಲ್ಲಿ ಹಿಡಿಯಲಾಗದೆ ಬ್ಯಾಗ್‌ಗಳಲ್ಲಿ ತುಂಬಿಸಿಕೊಂಡು ಸಂಭ್ರಮದಿಂದ ಮನೆಗೆ ತೆರಳಿದ್ದಾರೆ.
ಲಾಭದ 70% ಉದ್ಯೋಗಿಗಳ ಪಾಲು
ವರದಿಯ ಪ್ರಕಾರ, ಕಂಪನಿಯು 2025 ರ ಸಾಲಿನಲ್ಲಿ ಗಳಿಸಿದ ಒಟ್ಟು ನಿವ್ವಳ ಲಾಭದ (270 ಮಿಲಿಯನ್ ಯುವಾನ್) ಸುಮಾರು 70 ಪ್ರತಿಶತದಷ್ಟು ಹಣವನ್ನು ಬೋನಸ್ ರೂಪದಲ್ಲಿ ಉದ್ಯೋಗಿಗಳಿಗೆ ಹಂಚಿದೆ. ಕಂಪನಿಯ ಅಧ್ಯಕ್ಷರಾದ ಕುಯಿ ಪೀಜುನ್ ಅವರು ಈ ಹಿಂದೆ ಯೋಜಿಸಲಾಗಿದ್ದ ವಾಷಿಂಗ್ ಮೆಷಿನ್ ಅಥವಾ ಚಿನ್ನದ ಉಂಗುರಗಳಂತಹ ಉಡುಗೊರೆಗಳನ್ನು ರದ್ದುಗೊಳಿಸಿ, ಯುವಜನರಿಗೆ ಸಾಲದ ಹೊರೆ ಇರುತ್ತದೆ, ಅವರಿಗೆ ನೇರವಾಗಿ ಹಣವನ್ನೇ ನೀಡಿ ಎಂದು ಹಣಕಾಸು ಇಲಾಖೆಗೆ ಆದೇಶಿಸಿದ್ದರು. ಅಷ್ಟೇ ಅಲ್ಲದೆ, ಪ್ರತಿಯೊಬ್ಬ ಉದ್ಯೋಗಿಗೂ ಹೆಚ್ಚುವರಿಯಾಗಿ ತಲಾ 20,000 ಯುವಾನ್ ನೀಡುವಂತೆ ಘೋಷಿಸಿ ಎಲ್ಲರನ್ನೂ ಅಚ್ಚರಿಯಲ್ಲಿ ಮುಳುಗಿಸಿದರು.
A Chinese company executive is said to have laid out roughly 180 million yuan (about $26 million) in cash across 800 tables and asked his 7,000 staff members to take as much as they could. According to him, many young employees are weighed down by home loans, car repayments and… pic.twitter.com/rSMT8O9M7U
— Oku (@oku_yungx) February 27, 2026
ಯಾರಿದು ‘ಉದಾರ’ ಬಾಸ್ ?
ಸೆಪ್ಟೆಂಬರ್ 2002 ರಲ್ಲಿ ಸ್ಥಾಪನೆಯಾದ ಈ ಕಂಪನಿಯು ಕ್ರೇನ್‌ಗಳು ಮತ್ತು ವಸ್ತು ನಿರ್ವಹಣಾ ಉಪಕರಣಗಳನ್ನು ತಯಾರಿಸುತ್ತದೆ. 130 ಕ್ಕೂ ಹೆಚ್ಚು ದೇಶಗಳಲ್ಲಿ ಮಾರುಕಟ್ಟೆ ಹೊಂದಿರುವ ಈ ಸಂಸ್ಥೆ, ತನ್ನ ಉದ್ಯೋಗಿ ಸ್ನೇಹಿ ಧೋರಣೆಗೆ ಹೆಸರುವಾಸಿ. ಅಧ್ಯಕ್ಷ ಕುಯಿ ಪೀಜುನ್ ಅವರಿಗೆ ಚೀನಾದಲ್ಲಿ ಹಣ ಹಂಚಲು ಇಷ್ಟಪಡುವ ಬಾಸ್ ಎಂಬ ಅಡ್ಡಹೆಸರೂ ಇದೆ. ಕಳೆದ ವರ್ಷದ ಮಹಿಳಾ ದಿನಾಚರಣೆಯಂದು ಕೂಡ ಇವರು 2,000 ಮಹಿಳಾ ಸಿಬ್ಬಂದಿಗೆ ಬೃಹತ್ ಮೊತ್ತದ ಬೋನಸ್ ನೀಡಿದ್ದರು.
ನಾನು ಬರೀ ಹಣ ನೀಡಲು ಇಷ್ಟಪಡುತ್ತೇನೆ ಎಂದಲ್ಲ, ಇಂದಿನ ಯುವಕರು ಕಾರು ಸಾಲ ಮತ್ತು ಮನೆ ಸಾಲದ ಒತ್ತಡದಲ್ಲಿದ್ದಾರೆ. ನಮ್ಮಿಂದ ಸಾಧ್ಯವಾದಷ್ಟು ಅವರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ ಎಂದು ಕುಯಿ ಅವರು ಹೇಳಿದ್ದಾರೆ.
ಈ ವಿಡಿಯೋಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಫಿದಾ ಆಗಿದ್ದಾರೆ. ಇವರು ನಿಜವಾದ ಕುಬೇರ, ಪ್ರತಿ ಕಂಪನಿಗೂ ಇಂತಹ ಬಾಸ್ ಇರಬೇಕು, ಜಾಹೀರಾತು ನೀಡುವುದಕ್ಕಿಂತ ಉದ್ಯೋಗಿಗಳನ್ನು ಚೆನ್ನಾಗಿ ನೋಡಿಕೊಂಡರೆ ಸಂಸ್ಥೆ ತಾನಾಗಿಯೇ ಬೆಳೆಯುತ್ತದೆ ಎಂದು ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
