ಅಮ್ಮನ ಕೈ ರುಚಿಯ ಮೌಲ್ಯವನ್ನು ದೂರದ ಊರಿಗೆ ಹೋದಾಗಲೋ ಅಥವಾ ತಾವೇ ಅಡುಗೆ ಮಾಡಿಕೊಂಡಾಗಲೋ ಅರಿಯುವುದು ಸಾಮಾನ್ಯ. ಆದರೆ ಒಂದು ಪುಟ್ಟ ಮಗು ತನ್ನ ತಾಯಿಯ ಪ್ರೀತಿಯಿಂದ ತಯಾರಿಸಿದ ಆಹಾರವನ್ನು, ಹಸಿವಿಲ್ಲದಿದ್ದರೂ ಕಷ್ಟಪಟ್ಟು ತಿನ್ನುವ ಮೂಲಕ ಅಮ್ಮನ ಕೈ ರುಚಿಯನ್ನು ಹಾಡಿ ಹೊಗಳಿದೆ. ಈ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲರ ಮನ ಗೆದ್ದಿದೆ.
ಹೌದು, ಇನ್ಸ್ಟಾಗ್ರಾಮ್‌ನ anaira_doomra ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, ಒಬ್ಬ ಪುಟ್ಟ ಹುಡುಗಿ ದಾಲ್ ಮಖಾನಿ ಮತ್ತು ರೊಟ್ಟಿಯಿರುವ ತಟ್ಟೆಯನ್ನು ಹಿಡಿದು ಕುಳಿತಿದ್ದಾಳೆ. “ನನಗೆ ಹಸಿವಿಲ್ಲ, ಆದರೂ ನಾನು ಇದನ್ನು ತಿನ್ನಬೇಕು, ಏಕೆಂದರೆ ನನ್ನ ಅಮ್ಮ ಇದನ್ನು ಕಷ್ಟಪಟ್ಟು ತಯಾರಿಸಿದ್ದಾರೆ,” ಎಂದು ಆಕೆ ಮುದ್ದಾಗಿ ಹೇಳುತ್ತಾಳೆ. ತಾಯಿ “ತಿನ್ನಲು ಇಷ್ಟವಿಲ್ಲದಿದ್ದರೆ ಬಿಡು ಕಂದ” ಎಂದು ಹೇಳಿದರೂ, “ನೀನು ಇಷ್ಟೆಲ್ಲಾ ಕಷ್ಟಪಟ್ಟು ಮಾಡಿದ್ದೀಯಾ, ನಾನು ಊಟ ಬಿಟ್ಟರೆ ಹೇಗೆ?” ಎಂದು ಪುಟಾಣಿ ಪ್ರಶ್ನಿಸುತ್ತಾಳೆ. ತಾಯಿಯ ಮಾತಿಗೆ “ಇಲ್ಲ” ಎಂದು ತಲೆ ಅಲ್ಲಾಡಿಸುತ್ತಾ, ಆಹಾರವನ್ನು ತಿನ್ನುವುದನ್ನು ಮುಂದುವರೆಸುತ್ತಾಳೆ.
ವಿಡಿಯೋದ ಕೊನೆಯಲ್ಲಿ, ತಟ್ಟೆ ಬಹುತೇಕ ಖಾಲಿಯಾಗಿದ್ದು, ತಾಯಿ “ನಿಲ್ಲಿಸು, ತಿನ್ನಬೇಡ” ಎಂದು ಬಲವಂತವಾಗಿ ಹೇಳಿದರೂ, “ನಾನು ತಿನ್ನಬೇಕು, ಇದು ಕಷ್ಟದ ಕೆಲಸ” ಎಂದು ಪುಟಾಣಿ ಮತ್ತೆ ಉತ್ತರಿಸುತ್ತಾಳೆ. ಈ ಮುದ್ದಾದ ಸಂಭಾಷಣೆಯು ನೋಡುಗರ ಹೃದಯವನ್ನು ಕರಗಿಸಿದೆ.
ಈ ವಿಡಿಯೋ ಈಗಾಗಲೇ 1.5 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ನೆಟ್ಟಿಗರಿಂದ ಈ ಪುಟಾಣಿಯ ಮಾತುಗಳಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಒಬ್ಬ ಬಳಕೆದಾರ, “ತಾಯಿ ಎಷ್ಟು ಕಷ್ಟಪಟ್ಟು ಅಡುಗೆ ತಯಾರಿಸುತ್ತಾಳೆ ಎಂಬುದನ್ನು ಈ ಮಗು ಚೆನ್ನಾಗಿ ಅರ್ಥಮಾಡಿಕೊಂಡಿದೆ,” ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, “ಇಂತಹ ಸಣ್ಣ ವಿಷಯಗಳು ತಾಯಿಯರಿಗೆ ದೊಡ್ಡ ಖುಷಿಯನ್ನು ತರುತ್ತವೆ,” ಎಂದಿದ್ದಾರೆ. “ತಾಯಿಗೆ ಮಗುವಿನ ಬಲವಂತದ ಊಟ ಇಷ್ಟವಿಲ್ಲ, ಆದರೆ ಮಗಳಿಗೆ ತಾಯಿಯ ಪ್ರೀತಿಯ ಅಡುಗೆಯನ್ನು ಬಿಡಲು ಇಷ್ಟವಿಲ್ಲ. ಎಂತಹ ಅದ್ಭುತ ಕ್ಷಣ!” ಎಂದು ಮತ್ತೊಬ್ಬರು ಬರೆದಿದ್ದಾರೆ. ಹಲವರು ಹೃದಯದ ಸಿಂಬಲ್‌ಗಳ ಮೂಲಕ ಈ ವಿಡಿಯೋಗೆ ಪ್ರೀತಿಯನ್ನು ತೋರಿದ್ದಾರೆ.