ನವದೆಹಲಿ: ಭಾರತೀಯ ರೈಲ್ವೆಯ ಪ್ರತಿಷ್ಠಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸರ್ವ್ ಮಾಡಲಾದ ಆಹಾರದಲ್ಲಿ ಹುಳಗಳು ಕಂಡು ಬಂದಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯಿಂದಾಗಿ ರೈಲ್ವೆಯ ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆಯ ಬಗ್ಗೆ ತೀವ್ರ ಟೀಕೆಗಳು ಕೇಳಿಬಂದಿವೆ.
ಪ್ರಯಾಣಿಕರೊಬ್ಬರಾದ ಹಾರ್ದಿಕ್ ಪಾಂಚಾಲ್ ಎಂಬವರು ಶ್ರೀ ಮಾತಾ ವೈಷ್ಣೋ ದೇವಿ ಕತ್ರಾದಿಂದ ದೆಹಲಿಗೆ ತೆರಳುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಡಿಸಲಾದ ದಾಲ್‌ನಲ್ಲಿ ಕಪ್ಪು ಹುಳು ತೇಲುತ್ತಿರುವ ಫೋಟೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅಲ್ಯೂಮಿನಿಯಂ ಕವರ್‌ನಲ್ಲಿ ಒದಗಿಸಲಾದ ದಾಲ್‌ನಲ್ಲಿ ಸ್ಪಷ್ಟವಾಗಿ ಕಪ್ಪು ಹುಳು ಕಾಣಿಸುತ್ತಿದೆ. “ಓಹ್! ದಾಲ್‌ನಲ್ಲಿ ಕಪ್ಪು ಹುಳು!” ಎಂದು ಶೀರ್ಷಿಕೆ ನೀಡಿರುವ ಪಾಂಚಾಲ್, ಈ ಘಟನೆ ಜುಲೈ 22 ರಂದು ಕೋಚ್ C3, ಸೀಟ್ ಸಂಖ್ಯೆ 53 ರಲ್ಲಿ ನಡೆದಿದೆ ಎಂದು ತಿಳಿಸಿದ್ದಾರೆ.
ಈ ಫೋಟೋ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ರೈಲ್ವೆಯ ಆಹಾರದ ಗುಣಮಟ್ಟದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಳಕೆದಾರರು ಈ ಘಟನೆಯನ್ನು ಖಂಡಿಸಿ, ರೈಲ್ವೆ ಇಲಾಖೆಯ ಸ್ವಚ್ಛತೆ ಮತ್ತು ಆಹಾರ ನಿರ್ವಹಣೆಯ ಕುರಿತು ಪ್ರಶ್ನೆಗಳನ್ನು ಎತ್ತಿದ್ದಾರೆ. ಕೆಲವರು ತಮ್ಮ ದೂರಿನಲ್ಲಿ ಮೊದಲು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ಟ್ಯಾಗ್ ಮಾಡಿದ್ದರೂ, ನಂತರ ತಪ್ಪನ್ನು ಸರಿಪಡಿಸಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಟ್ಯಾಗ್ ಮಾಡಿದ್ದಾರೆ.
ರೈಲ್ವೆ ಇಲಾಖೆಯ ಅಧಿಕೃತ ರೈಲ್ವೆ ಸೇವಾ ಖಾತೆಯು ಈ ಘಟನೆಗೆ ಸಂಬಂಧಿಸಿದಂತೆ ಕ್ಷಮೆಯಾಚಿಸಿದ್ದು, “ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ. ದಯವಿಟ್ಟು PNR, ಮೊಬೈಲ್ ಸಂಖ್ಯೆ ಮತ್ತು ಇತರ ವಿವರಗಳನ್ನು ಹಂಚಿಕೊಳ್ಳಿ. ತಕ್ಷಣದ ಪರಿಹಾರಕ್ಕಾಗಿ https://railmadad.indianrailways.gov.in ನಲ್ಲಿ ನಿಮ್ಮ ಕಳವಳವನ್ನು ವ್ಯಕ್ತಪಡಿಸಬಹುದು” ಎಂದು ಪ್ರತಿಕ್ರಿಯಿಸಿದೆ.