ಸಿಲಿಗುರಿ: ಪಶ್ಚಿಮ ಬಂಗಾಳದ ಸಿಲಿಗುರಿಯ ಸೂರ್ಯಸೇನ್ ಪಾರ್ಕ್‌ನಲ್ಲಿ ಕೌಟುಂಬಿಕ ಕಲಹದಿಂದಾಗಿ ಎರಡು ವರ್ಷದ ಮಗುವನ್ನು ತನ್ನ ಮಲತಾಯಿಯೇ ಪಾರ್ಕ್‌ನಲ್ಲಿ ಬಿಟ್ಟು ಹೋದ ಹೃದಯವಿದ್ರಾವಕ ಘಟನೆ ನಡೆದಿದೆ. ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಷಿಯಲ್ ಮೀಡಿಯಾದ ಮೂಲಕ ತನ್ನ ಕಳೆದುಹೋಗಿದ್ದ ಮಗುವಿನ ವಿಡಿಯೋವನ್ನು ಕಂಡುಕೊಂಡ ನೇಪಾಳದ ತಂದೆಯೊಬ್ಬರು ತಮ್ಮ ಮಗಳೊಂದಿಗೆ ಮತ್ತೆ ಒಂದಾಗಿದ್ದಾರೆ.
ಹೌದು, ಸಿಲಿಗುರಿಯ ಸೂರ್ಯಸೇನ್ ಪಾರ್ಕ್‌ನಲ್ಲಿ ಎರಡು ವರ್ಷದ ಮಗುವೊಂದು ಒಂಟಿಯಾಗಿರುವುದನ್ನು ಸ್ಥಳೀಯರು ಮತ್ತು ಪಾರ್ಕ್‌ನ ಅಧಿಕಾರಿಗಳು ಗಮನಿಸಿ, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಗುವಿನ ಹೆಸರು ನಿಮಿಷ ಎಂದು ಗುರುತಿಸಲಾಗಿದೆ. ಮಗುವಿನ ಬಳಿ ಕಂಡುಬಂದ ಚೀಲದಲ್ಲಿ ಒಂದು ಚೀಟಿಯಿದ್ದು, ಅದರಲ್ಲಿ ಕೌಟುಂಬಿಕ ಸಮಸ್ಯೆಯಿಂದಾಗಿ ಮಗುವನ್ನು ಬಿಟ್ಟುಹೋಗುತ್ತಿರುವುದಾಗಿ ಒಬ್ಬ ಮಹಿಳೆ ಬರೆದಿದ್ದಳು. ಆಕೆಯನ್ನು ಮಗುವಿನ ತಾಯಿ ಎಂದು ಭಾವಿಸಲಾಗಿದೆ. ಚೀಟಿಯಲ್ಲಿ ಎರಡು ಸಂಪರ್ಕ ಸಂಖ್ಯೆಗಳನ್ನು ಒದಗಿಸಲಾಗಿತ್ತು ಮತ್ತು ಮಗುವನ್ನು ನೇಪಾಳ ಪೊಲೀಸರಿಗೆ ಒಪ್ಪಿಸುವಂತೆ ಸೂಚಿಸಲಾಗಿತ್ತು.
ಸ್ಥಳೀಯರು ಮಗುವಿನ ಫೋಟೋಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಈ ಸುದ್ದಿಯು ತೀವ್ರವಾಗಿ ವೈರಲ್ ಆಗಿತ್ತು. ಈ ವಿಡಿಯೋಗಳನ್ನು ವೀಕ್ಷಿಸಿದ ಲಕ್ಷಾಂತರ ಜನರಲ್ಲಿ ಮಗುವಿನ ತಂದೆಯೂ ಒಬ್ಬರಾಗಿದ್ದರು. ನೇಪಾಳದ ಧಮಾಕ್‌ನಿಂದ ತನ್ನ ಮಗಳ ದುಸ್ಥಿತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಕಂಡ ತಕ್ಷಣ, ಆ ತಂದೆ ತನ್ನ ಮಗುವನ್ನು ಹುಡುಕಿಕೊಂಡು ಸಿಲಿಗುರಿಗೆ ಧಾವಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಮಗುವಿನ ತಂದೆ, “ನನ್ನ ಎರಡನೇ ಪತ್ನಿ ನನ್ನ ಮಗಳನ್ನು ನೇಪಾಳದ ನಮ್ಮ ಮನೆಯಿಂದ ಕರೆದೊಯ್ದಿದ್ದಳು. ಆಕೆಯ ಉದ್ದೇಶ ನನಗೆ ಗೊತ್ತಿರಲಿಲ್ಲ. ನನ್ನ ಮೊದಲ ಪತ್ನಿ ಆರು ತಿಂಗಳ ಹಿಂದೆ ಮೃತಪಟ್ಟಿದ್ದರಿಂದ, ನಾನು ಎರಡನೇ ಮದುವೆಯಾಗಿದ್ದೆ. ಆದರೆ, ನನ್ನ ಎರಡನೇ ಪತ್ನಿ ನನ್ನ ಮಗಳನ್ನು ತುಂಬಾ ಕೆಟ್ಟ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದಳು. ಇದರಿಂದ ನಮ್ಮ ಸಂಬಂಧ ಹದಗೆಟ್ಟಿತ್ತು. ಆದರೆ, ಆಕೆ ಇಷ್ಟು ಕ್ರೂರವಾಗಿ ಮಗುವನ್ನು ಅನಾಥವಾಗಿ ಬಿಟ್ಟುಹೋಗುತ್ತಾಳೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ,” ಎಂದು ಭಾವುಕರಾಗಿ ಹೇಳಿದ್ದಾರೆ.
ಪೊಲೀಸರು ಮಗುವನ್ನು ರಕ್ಷಿಸಿದ್ದು, ತಂದೆಯೊಂದಿಗೆ ಒಂದಾಗುವಂತೆ ಮಾಡಿದ್ದಾರೆ. ಈ ಘಟನೆಯು ಸಾಮಾಜಿಕ ಮಾಧ್ಯಮದ ಶಕ್ತಿಯನ್ನು ತೋರಿಸುವುದರ ಜೊತೆಗೆ, ಕೌಟುಂಬಿಕ ಕಲಹದಿಂದ ಮಕ್ಕಳು ಎದುರಿಸುವ ತೊಂದರೆಗಳನ್ನು ಎತ್ತಿ ತೋರಿಸಿದೆ. ಈ ಹೃದಯಸ್ಪರ್ಶಿ ಮಿಲನವು ನೆಟ್ಟಿಗರ ಕಣ್ಣು ಒದ್ದೆ ಮಾಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ.
