ಮದುವೆಯಲ್ಲಿ ನೋಟುಗಳ ಸುರಿಮಳೆ: ಹಣ ಕಂಡು ಕಕ್ಕಾಬಿಕ್ಕಿಯಾದ ಅತಿಥಿಗಳು!

Untitled design 2026 02 18T200146.938

ಚಂಡೀಗಢ, ಫೆ. 18: ಇತ್ತೀಚಿನ ದಿನಗಳಲ್ಲಿ ಮದುವೆ ಸಮಾರಂಭಗಳನ್ನು ವಿಭಿನ್ನವಾಗಿ ಮತ್ತು ಅದ್ಧೂರಿಯಾಗಿ ಆಚರಿಸುವುದು ಟ್ರೆಂಡ್ ಆಗಿದೆ. ಥೀಮ್‌ ಡೆಕೊರೇಶನ್‌, ಗ್ರ್ಯಾಂಡ್ ಎಂಟ್ರಿ, ಲೈವ್ ಮ್ಯೂಸಿಕ್‌, ವಿಶೇಷ ಫೋಟೋಶೂಟ್‌ ಹೀಗೆ ಪ್ರತಿಯೊಂದು ಅಂಶವೂ ಹೊಸತನದಿಂದ ಕೂಡಿದೆ. ಅದರಲ್ಲೂ ಪಂಜಾಬ್ ಮದುವೆಗಳು ಎಂದರೆ ವೈಭವ, ಸಂಭ್ರಮ ಮತ್ತು ಶೋಭೆಗೆ ಪ್ರಸಿದ್ಧ. ಇದೀಗ ಪಂಜಾಬ್‌ನ ತರ್ನ್ ತರನ್ ಜಿಲ್ಲೆಯ ಪಟ್ಟಿ ಗ್ರಾಮದಲ್ಲಿ ನಡೆದ ಮದುವೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದೆ..

ಫೆಬ್ರವರಿ 14ರಂದು ನಡೆದ ಈ ಮದುವೆ ಸಮಾರಂಭದಲ್ಲಿ ವಧು-ವರರ ಮೇಲೆ ನೋಟುಗಳ ಸುರಿಮಳೆ ನಡೆದಿರುವ ದೃಶ್ಯ ವೈರಲ್ ಆಗಿದೆ. ಆಸ್ಟ್ರೇಲಿಯಾ ಮತ್ತು ಕೆನಡಾದಿಂದ ಬಂದಿದ್ದ ಅನಿವಾಸಿ ಭಾರತೀಯ ಅತಿಥಿಗಳು ದಂಪತಿಗೆ ವಿಶಿಷ್ಟವಾಗಿ ಶುಭಾಶಯ ಕೋರಿದ್ದಾರೆ. ಅವರು ಸುಮಾರು 4–5 ಲಕ್ಷ ರೂ. ಮೌಲ್ಯದ ಭಾರತೀಯ ನೋಟುಗಳು ಹಾಗೂ ಅಮೆರಿಕನ್ ಡಾಲರ್‌ಗಳನ್ನು ವೇದಿಕೆಯ ಮೇಲೆ ನಿಂತಿದ್ದ ವಧು-ವರರ ಮೇಲೆ ಸುರಿಸಿದ್ದಾರೆ.

ವಿಡಿಯೋದಲ್ಲಿ ಕಾಣುವಂತೆ, ಮದುವೆ ವೇದಿಕೆಯಲ್ಲಿ ನಿಂತಿದ್ದ ದಂಪತಿಯನ್ನು ಸುತ್ತುವರಿದ ಅತಿಥಿಗಳು ಕೈಯಲ್ಲಿ ನೋಟುಗಳ ಬಂಡಲ್ ಹಿಡಿದು ಒಂದರ ನಂತರ ಒಂದಾಗಿ ಎಸೆದು ಹಾರೈಸುತ್ತಾರೆ. ಕೆಲವರು ತಮ್ಮ ಬ್ಯಾಗ್‌ಗಳಿಂದ ನೋಟುಗಳನ್ನು ತೆಗೆದು ನೇರವಾಗಿ ವಧು-ವರರ ಮೇಲೆ ಸುರಿಸುವ ದೃಶ್ಯ ಕಾಣಿಸುತ್ತದೆ. ಕೆಲವೇ ಕ್ಷಣಗಳಲ್ಲಿ ವೇದಿಕೆ ಹಾಗೂ ಅದರ ಸುತ್ತಲಿನ ನೆಲ ಸಂಪೂರ್ಣವಾಗಿ ನೋಟುಗಳಿಂದ ತುಂಬಿಬಿಟ್ಟಿದೆ.

ಪಂಜಾಬಿ ಸಂಪ್ರದಾಯದಲ್ಲಿ ‘ಮನೆಯವರ ಸಂತೋಷ’ವನ್ನು ವ್ಯಕ್ತಪಡಿಸಲು ಹಣವನ್ನು ಉಡುಗೊರೆಯಾಗಿ ನೀಡುವುದು ಸಾಮಾನ್ಯ. ಆದರೆ ಈ ಮಟ್ಟದ ಹಣದ ಪ್ರದರ್ಶನ ಅಪರೂಪ. ವಿಶೇಷವಾಗಿ ವಿದೇಶದಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯರು (NRIs) ತಮ್ಮ ಕುಟುಂಬದ ಮದುವೆಗಳಲ್ಲಿ ದೊಡ್ಡ ಮಟ್ಟದಲ್ಲಿ ಭಾಗವಹಿಸುವುದು ಸಾಮಾನ್ಯವಾಗಿದೆ. ಈ ಮದುವೆಯಲ್ಲೂ ಆಸ್ಟ್ರೇಲಿಯಾ ಮತ್ತು ಕೆನಡಾದಿಂದ ಆಗಮಿಸಿದ್ದ ಅತಿಥಿಗಳು ಅದ್ಧೂರಿಯಾಗಿ ಸಂಭ್ರಮಿಸಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಕೆಲವರು “ಇದೇ ಪಂಜಾಬಿ ಮದುವೆಯ ವೈಭವ” ಎಂದು ಮೆಚ್ಚುಗೆಯ ಮಾತುಗಳನ್ನಾಡಿದರೆ, ಇನ್ನೂ ಕೆಲವರು ಇಂತಹ ಹಣದ ಸಾರ್ವಜನಿಕ ಪ್ರದರ್ಶನದ ಅಗತ್ಯವೇನು ಎಂದು ಪ್ರಶ್ನಿಸಿದ್ದಾರೆ. “ಹಣವನ್ನು ಹೀಗೆ ಸುರಿಯುವುದಕ್ಕಿಂತ ದಾನಧರ್ಮಗಳಿಗೆ ಬಳಸಿದ್ದರೆ ಉತ್ತಮವಾಗಿರುತ್ತಿತ್ತು” ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.

ಇನ್ನೂ ಕೆಲವರು ಇದನ್ನು ಕುಟುಂಬದ ಸಂತೋಷದ ಅಭಿವ್ಯಕ್ತಿ ಎಂದು ಸಮರ್ಥಿಸಿದ್ದಾರೆ. ಮದುವೆ ಜೀವನದಲ್ಲಿ ಒಮ್ಮೆ ಮಾತ್ರ ಬರುವ ಮಹತ್ವದ ಕ್ಷಣವಾಗಿದ್ದು, ಅದನ್ನು ಅದ್ದೂರಿಯಾಗಿ ಆಚರಿಸುವುದು ತಪ್ಪಲ್ಲ ಎಂಬ ಅಭಿಪ್ರಾಯವನ್ನೂ ಹಲವರು ಹಂಚಿಕೊಂಡಿದ್ದಾರೆ. ವಿಶೇಷವಾಗಿ ವಿದೇಶದಲ್ಲಿ ನೆಲೆಸಿರುವ ಭಾರತೀಯರು ತಮ್ಮ ಮೂಲ ಊರಲ್ಲಿ ನಡೆಯುವ ಮದುವೆಗಳನ್ನು ಭರ್ಜರಿಯಾಗಿ ಆಚರಿಸುವ ಮೂಲಕ ತಮ್ಮ ಬಂಧುಬಳಗದೊಂದಿಗೆ ಸಂಭ್ರಮದಿಂದ ಹಂಚಿಕೊಳ್ಳುತ್ತಾರೆ..

Exit mobile version